IPL 2021: ಮ್ಯಾಚ್ ಫಿಕ್ಸಿಂಗ್ ಮಾಡಿದ್ರಾ ಪಂಜಾಬ್ ಆಲ್ರೌಂಡರ್..? ಹೂಡಾ ಸುತ್ತ ಅನುಮಾನದ ಹುತ್ತ..!
ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಭ್ರಷ್ಟಾಚಾರ ಹಾಗೂ ಮ್ಯಾಚ್ ಫಿಕ್ಸಿಂಗ್ ವಿಚಾರದಲ್ಲಿ ಸಾಕಷ್ಟು ಬಿಗಿ ನಿಯಮಗಳನ್ನು ಹಾಕಿಕೊಂಡಿದ್ದು, ಯಾವುದೇ ಇಂತಹ ವಿಚಾರದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿದೆ. ಇದೆಲ್ಲದರ ನಡುವೆ ಪಂಜಾಬ್ ಕಿಂಗ್ಸ್(Punjab Kings) ತಂಡದ ಆಲ್ರೌಂಡರ್ ದೀಪಕ್ ಹೂಡಾ(Deepak Hooda) ಮೇಲೆ ಮ್ಯಾಚ್ ಫಿಕ್ಸಿಂಗ್ ಅನುಮಾನ ಆರಂಭವಾಗದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭವಾಗಿದ್ದು, ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆಯಾ ಎನ್ನುವ ಅನುಮಾನ ಆರಂಭವಾಗಿದೆ.
ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ದೀಪಕ್ ಹೂಡಾ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಒಂದು ಪೋಸ್ಟ್ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.
ಪಂಜಾಬ್ ಕಿಂಗ್ಸ್‌ನ ಆಲ್ರೌಂಡರ್ ದೀಪಕ್ ಹೂಡಾ ಪಂದ್ಯದ ದಿನದಂದು ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿ ವಿವಾದಕ್ಕೆ ಸಿಲುಕಿದ್ದಾರೆ. ಅವರ ಪೋಸ್ಟ್‌ನಿಂದಾಗಿ ಈಗ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆಯೇ ಎನ್ನುವ ಶಂಕೆ ಶುರುವಾಗಿದ್ದು, ಬಿಸಿಸಿಐ ತನಿಖೆ ನಡೆಸಲು ಮುಂದಾಗಿದೆ.
ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಧ್ಯಾಹ್ನ 2 ಗಂಟೆ ವೇಳೆಗೆ ಹೂಡಾ, ತಾವು ಹೆಟ್ಮೆಲ್ ಧರಿಸಿ ಬ್ಯಾಟ್ ಮಾಡಲು ಸಿದ್ಧರಾಗುತ್ತಿರುವ ಫೋಟೋವನ್ನು ‘ಪಂದ್ಯಕ್ಕೆ ರೆಡಿ’ ಎನ್ನುವ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು.
ಈ ಚಿತ್ರ ಬುಕ್ಕಿಗಳಿಗೆ ತಂಡದ ಆಂತರಿಕ ವಿಚಾರಗಳನ್ನು ತಿಳಿಸುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಹೆಚ್ಚಾಗಿ ಆನ್‌ಲೈನ್‌ನಲ್ಲೇ ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸಿ ಫಿಕ್ಸಿಂಗ್‌ಗೆ ಮನವೊಲಿಸುತ್ತಿರುವ ಹಿನ್ನೆಲೆಯಲ್ಲಿ ಹೂಡಾ ಅವರ ಈ ಇನ್‌ಸ್ಟಾಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ದೀಪಕ್ ಹೂಡಾ ಬೌಲಿಂಗ್‌ನಲ್ಲಿ 37 ರನ್ ಬಿಟ್ಟುಕೊಟ್ಟಿದ್ದರು. ಇನ್ನು ಬ್ಯಾಟಿಂಗ್‌ನಲ್ಲೂ 26 ವರ್ಷದ ಹೂಡಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. 2 ಎಸೆತಗಳನ್ನು ಎದುರಿಸಿ ಹೂಡಾ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದರು.
ರಾಜಸ್ಥಾನ ರಾಯಲ್ಸ್ ನೀಡಿದ್ದ 186 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೇವಲ 2 ರನ್‌ಗಳ ಅಂತರದಲ್ಲಿ ಆಘಾತಕಾರಿ ಸೋಲು ಕಂಡಿತ್ತು. ಪಂಜಾಬ್ ಕೊನೆಯ ಓವರ್‌ನಲ್ಲಿ ಗೆಲ್ಲಲು ಕೇವಲ 4 ರನ್‌ಗಳ ಅಗತ್ಯವಿತ್ತು. ಹೀಗಿದ್ದೂ ಕಾರ್ತಿಕ್ ತ್ಯಾಗಿ ಕೇವಲ 1 ರನ್ ನೀಡಿ 2 ವಿಕೆಟ್ ಕಬಳಿಸಿ ರಾಯಲ್ಸ್ ಪಡೆಗೆ ರೋಚಕ ಗೆಲುವು ತಂದುಕೊಟ್ಟಿದ್ದರು.