ಚೆನ್ನೈ ಟೆಸ್ಟ್: ವಿಚಿತ್ರ ದಾಖಲೆಗೆ ಪಾತ್ರವಾದ ವೇಗಿ ಇಶಾಂತ್ ಶರ್ಮಾ..!
ಚೆನ್ನೈ: ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದ್ದು, ಕೊನೆಯ ದಿನದಾಟದಲ್ಲಿ ಫಲಿತಾಂಶ ಏನು ಬೇಕಾದರೂ ಸಂಭವಿಸುವ ಸಾಧ್ಯತೆಯಿದೆ. ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 178 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ವಿರಾಟ್ ಪಡೆ ಗೆಲ್ಲಲು 420 ರನ್‌ಗಳ ಗುರಿ ಪಡೆದಿದೆ.
ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಇಂಗ್ಲೆಂಡ್ ವಿರುದ್ದ ಎರಡನೇ ಇನಿಂಗ್ಸ್‌ನಲ್ಲಿ ಡೆನ್ ಲಾರೆನ್ಸ್ ವಿಕೆಟ್ ಕಬಳಿಸುವ ಮೂಲಕ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 300+ ವಿಕೆಟ್ ಕಬಳಿಸಿದ 6ನೇ ಭಾರತೀಯ ಬೌಲರ್ ಎನ್ನುವಕ್ಕೆ ಇಶಾಂತ್ ಶರ್ಮಾ ಪಾತ್ರರಾಗಿದ್ದಾರೆ.
ಭಾರತ ಪರ ಕಪಿಲ್ ದೇವ್, ಜಹೀರ್ ಖಾನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 300+ ವಿಕೆಟ್ ಕಬಳಿಸಿದ ಮೂರನೇ ವೇಗಿ ಎನ್ನುವ ಗೌರವವೂ ಡೆಲ್ಲಿ ವೇಗಿಯ ಪಾಲಾಗಿದೆ.
ಇದೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಬೇಡದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ಹೌದು, ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿ 300+ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಕುಖ್ಯಾತಿಗೆ ಇಶಾಂತ್ ಶರ್ಮಾ ಪಾತ್ರವಾಗಿದ್ದಾರೆ.
98 ಟೆಸ್ಟ್ ಪಂದ್ಯಗಳನ್ನಾಡಿ ಇಶಾಂತ್ ಶರ್ಮಾ 300 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಜಹೀರ್ ಖಾನ್ ಹೆಸರಿನಲ್ಲಿದ್ದ ದಾಖಲೆ(89 ಪಂದ್ಯ) ಅಳಿಸಿ ಹಾಕಿದ್ದಾರೆ.
ರವಿಚಂದ್ರನ್ ಕೇವಲ 54 ಟೆಸ್ಟ್ ಪಂದ್ಯಗಳನ್ನಾಡಿ 300 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರೆ, ಅನಿಲ್ ಕುಂಬ್ಳೆ(66), ಹರ್ಭಜನ್ ಸಿಂಗ್(72) ಹಾಗೂ ಕಪಿಲ್ ದೇವ್ 83 ಟೆಸ್ಟ್ ಪಂದ್ಯಗಳನ್ನಾಡಿ ಮುನ್ನೂರು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.