Ind vs SA: ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಈ ಇಬ್ಬರಿಗೆ ಸಿಗುತ್ತಾ ಸ್ಥಾನ..?
ದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 09ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಟಿ20 ಪಂದ್ಯವು ಆರಂಭವಾಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾ, ಶಮಿ ಅನುಪಸ್ಥಿತಿಯಲ್ಲಿ ಕೆ ಎಲ್ ರಾಹುಲ್ (KL Rahul) ನೇತೃತ್ವದ ಟೀಂ ಇಂಡಿಯಾ (Team India), ಹರಿಣಗಳ ಸವಾಲು ಸ್ವೀಕರಿಸಲು ಸಜ್ಜಾಗಿದೆ. ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
1. ಕೆ.ಎಲ್ ರಾಹುಲ್
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. 15ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಹುಲ್ ಲಖನೌ ಸೂಪರ್ ಜೈಂಟ್ಸ್ ಪರ 15 ಪಂದ್ಯಗಳಿಂದ 616 ರನ್ ಚಚ್ಚಿದ್ದರು. ಅದೇ ಫಾರ್ಮ್ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
2. ಋತುರಾಜ್ ಗಾಯಕ್ವಾಡ್
2021ನೇ ಸಾಲಿನ ಆರೆಂಜ್ ಕ್ಯಾಪ್ ವಿಜೇತ ಋತುರಾಜ್ ಗಾಯಕ್ವಾಡ್ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ದಕ್ಷಿಣ ಆಫ್ರಿಕಾ ಎದುರು ಉತ್ತಮ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾದಲ್ಲಿ ಆರಂಭಿಕನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
3. ಶ್ರೇಯಸ್ ಅಯ್ಯರ್
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್, ಹರಿಣಗಳೆದುರು ಸ್ಥಿರ ಪ್ರದರ್ಶನ ತೋರುವ ಮೂಲಕ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ
4. ಹಾರ್ದಿಕ್ ಪಾಂಡ್ಯ
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಅಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಗುಜರಾತ್ ಟೈಟಾನ್ಸ್ ಪರ ಗರಿಷ್ಟ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದ ಹಾರ್ದಿಕ್ ಪಾಂಡ್ಯ, ಕಮ್‌ಬ್ಯಾಕ್ ಸರಣಿಯಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ.
5. ರಿಷಭ್ ಪಂತ್
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳಿಂದ 340 ರನ್ ಸಿಡಿಸಿದ್ದರು. ಭಾರತದ ನಂ.1 ವಿಕೆಟ್ ಕೀಪರ್ ಎನಿಸಿಕೊಂಡಿರುವ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
6. ದಿನೇಶ್ ಕಾರ್ತಿಕ್
ಅನುಭವಿ ಆಟಗಾರ ದಿನೇಶ್ ಕಾರ್ತಿಕ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದ ಕಾರ್ತಿಕ್, ಹರಿಣಗಳೆದು ಅಂತಹದ್ದೇ ಪ್ರದರ್ಶನ ಮುಂದುವರೆಸಿಕೊಂಡು ಹೋಗಲು ಸಜ್ಜಾಗಿದ್ದಾರೆ. 2019ರ ಬಳಿಕ ಡಿಕೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ.
7. ಹರ್ಷಲ್ ಪಟೇಲ್
ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶಿಸ್ತುಬದ್ದ ಬೌಲಿಂಗ್ ಮೂಲಕ ಮಿಂಚಿದ್ದರು. ಹೀಗಾಗಿ ಬುಮ್ರಾ ಅನುಪಸ್ಥಿತಿಯಲ್ಲಿ ಹರ್ಷಲ್ ಪಟೇಲ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.
8. ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ. ಭುವಿ ಅನನುಭವಿ ಭಾರತ ವೇಗದ ಬೌಲಿಂಗ್ ಪಡೆಯ ನೇತೃತ್ವ ವಹಿಸಲಿದ್ದಾರೆ.
9. ಯುಜುವೇಂದ್ರ ಚಹಲ್
ಟೀಂ ಇಂಡಿಯಾ ಅನುಭವಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 27 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಇದೀಗ ಚಹಲ್ ಹರಿಣಗಳೆದುರು ಮಿಂಚಲು ಎದುರು ನೋಡುತ್ತಿದ್ದಾರೆ.
10. ಕುಲ್ದೀಪ್ ಯಾದವ್
ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಂಚಿನ ಪ್ರದರ್ಶನ ತೋರಿದ್ದರು. ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಸರಣಿ ಕುಲ್ದೀಪ್‌ಗೆ ಸಾಕಷ್ಟು ಮಹತ್ವದ್ದೆನಿಸಿದೆ.
11. ಉಮ್ರಾನ್ ಮಲಿಕ್
ಐಪಿಎಲ್‌ನಲ್ಲಿ ಮಾರಕ ದಾಳಿಯ ಮೂಲಕ ಗಮನ ಸೆಳೆದಿದ್ದ ಜಮ್ಮು ಎಕ್ಸ್‌ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್, ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. 150+ ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ಉಮ್ರಾನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.