Ind vs NZ Series: ಈಡನ್‌ಗಾರ್ಡನ್ಸ್‌ನಲ್ಲಿಂದು ರೋಹಿತ್ ಶರ್ಮಾ ಮತ್ತೊಂದು ಸ್ಪೆಷಲ್ ಇನಿಂಗ್ಸ್..?
ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ (Ind vs NZ) ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ಕೋಲ್ಕತದ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾಗಲಿದೆ. ಭಾರತದ ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಕೋಲ್ಕತಾದ ಈಡನ್ ಗಾರ್ಡನ್ಸ್ (Eden Gardens stadium) ಮೈದಾನದೊಂದಿಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ (Rohit Sharma) ವಿಶೇಷ ನಂಟು ಹೊಂದಿದ್ದಾರೆ. ಈ ಮೈದಾನದಲ್ಲಿ ರೋಹಿತ್ ಏಕದಿನ, ಟೆಸ್ಟ್ ಹಾಗೂ ಟಿ20(ಐಪಿಎಲ್)ಯಲ್ಲಿ ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಈಡನ್‌ಗಾರ್ಡನ್ಸ್ ಮೈದಾನದಲ್ಲಿ ಟೀಂ ಇಂಡಿಯಾ (Team India) ಪೂರ್ಣಾವಧಿ ಟಿ20 ನಾಯಕರಾದ ಬಳಿಕ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಹಾಗೂ ಈಡನ್ ಗಾರ್ಡನ್ಸ್ ನಂಟಿನ ಒಂದು ಝಲಕ್ ಇಲ್ಲಿದೆ ನೋಡಿ.
Rohit Sharma
ರೋಹಿತ್ ಶರ್ಮಾ ಪೂರ್ಣಾವಧಿ ಟಿ20 ನಾಯಕರಾದ ಬಳಿಕ ಕಿವೀಸ್ ಎದುರಿನ ಚೊಚ್ಚಲ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದ್ದು, ಇದೀಗ ಈಡನ್‌ಗಾರ್ಡನ್ಸ್ ಪಂದ್ಯ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿದೆ ಟೀಂ ಇಂಡಿಯಾ.
Rohit Sharma
ರೋಹಿತ್ ಶರ್ಮಾಗೂ ಕೋಲ್ಕತಾದ ಈಡನ್‌ಗಾರ್ಡನ್ಸ್ ಮೈದಾನಕ್ಕೂ ಅವಿನಾಭಾವ ಸಂಬಂಧವಿದ್ದು, ಈ ಮೈದಾನ ಹಿಟ್‌ಮ್ಯಾನ್ ಪಾಲಿಗೆ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಹೌದು, ರೋಹಿತ್ ಶರ್ಮಾ 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್‌ಗೆ ಇದೇ ಈಡನ್ ಗಾರ್ಡನ್ಸ್ ಮೈದಾನದ ಮೂಲಕ ಪಾದಾರ್ಪಣೆ ಮಾಡಿದ್ದರು. ಇದೀಗ ರೋಹಿತ್ ಶರ್ಮಾ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕನಾಗಿ ಬೆಳೆದು ನಿಂತಿದ್ದಾರೆ.
ಇನ್ನು 2013ರಲ್ಲಿ ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಇದೇ ಈಡನ್ ಗಾಡರ್ನ್ಸ್ ಮೈದಾನದಲ್ಲಿ ಆಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲೇ ರೋಹಿತ್ ಅಮೋಘ 177 ರನ್ ಸಿಡಿಸಿದ್ದರು.
2014ರಲ್ಲಿ ಶ್ರೀಲಂಕಾ ವಿರುದ್ಧದ 264 ರನ್ ಸಿಡಿಸಿ ವಿಶ್ವದಾಖಲೆ ಬರೆದಿದ್ದು ಇದೇ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ. 173 ಎಸೆತಗಳಲ್ಲಿ ರೋಹಿತ್ ಶರ್ಮಾ 33 ಬೌಂಡರಿ, 9 ಸಿಕ್ಸರ್‌ಗಳನ್ನು ಚಚ್ಚಿದ್ದರು. ಇಂದಿಗೂ ಗರಿಷ್ಠ ರನ್ ಬಾರಿಸಿದ ದಾಖಲೆ ರೋಹಿತ್ ಹೆಸರಿನಲ್ಲಿಯೇ ಇದೆ.
ಇನ್ನು 2012ರಲ್ಲಿ ಕೋಲ್ಕತ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 60 ಎಸೆತಗಳಲ್ಲಿ 109 ರನ್ ಬಾರಿಸಿದ್ದರು. ಇದಾದ ಬಳಿಕ ಐಪಿಎಲ್‌ನಲ್ಲಿ ಹಿಟ್‌ಮ್ಯಾನ್ ಮೂರಂಕಿ ಮೊತ್ತ ದಾಖಲಿಸಿಲ್ಲ.
Rohit Sharma
ರೋಹಿತ್ ಶರ್ಮಾ ಈಡನ್ ಗಾರ್ಡನ್ಸ್‌ನಲ್ಲಿ 7 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 2 ಶತಕ, 1 ಅರ್ಧಶತಕದೊಂದಿಗೆ 569 ರನ್ ಕಲೆಹಾಕಿದ್ದಾರೆ. ಭಾನುವಾರ ಅವರಿಂದ ಮತ್ತೊಂದು ವಿಶೇಷ ಇನ್ನಿಂಗ್ಸ್ ನಿರೀಕ್ಷೆ ಮಾಡಲಾಗುತ್ತಿದೆ.