ಎರಡೇ ದಿನದಲ್ಲಿ ಮುಗಿದ ಟೆಸ್ಟ್‌ನಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!
ಅಹಮದಾಬಾದ್: ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಕೇವಲ ಎರಡೇ ದಿನದಲ್ಲಿ ಮುಕ್ತಾಯವಾಗಿದ್ದು, ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಸ್ಪಿನ್ ಪಿಚ್‌ನಲ್ಲಿ ಉಭಯ ತಂಡಗಳ ಬ್ಯಾಟ್ಸ್‌ಮನ್‌ಗಳು ತಿಣುಕಾಡಿದರು. ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ಅಧಿಕೃತವಾಗಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಪಿಂಕ್ ಬಾಲ್ ಟೆಸ್ಟ್ ಹಲವು ಅಪರೂಪದ ದಾಖಲೆಗಳಿಗೂ ಸಾಕ್ಷಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
2 ದಿನದೊಳಗೆ ಮುಗಿದ 22ನೇ ಟೆಸ್ಟ್ ಪಂದ್ಯ!
ಕೇವಲ 2 ದಿನಗಳೊಳಗೆ ಮುಗಿದ ಒಟ್ಟಾರೆ 22ನೇ ಟೆಸ್ಟ್ ಪಂದ್ಯವಿದು. ಈ 22ರ ಪೈಕಿ ಭಾರತ ಪಾಲ್ಗೊಂಡಿದ್ದ ಪಂದ್ಯಗಳು 2 ದಿನಗಳೊಳಗೆ ಮುಗಿದಿದ್ದು ಇದು ಕೇವಲ 2ನೇ ಬಾರಿ. ಈ ಮೊದಲು 2018ರಲ್ಲಿ ಬೆಂಗಳೂರಲ್ಲಿ ನಡೆದಿದ್ದ ಆಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ 2 ದಿನಗಳಲ್ಲಿ ಗೆದ್ದುಕೊಂಡಿತ್ತು.
8 ರನ್‌ಗೆ 5 ವಿಕೆಟ್: ಬೌಲಿಂಗ್‌ನಲ್ಲಿ ಜೋ ರೂಟ್ ಹೊಸ ದಾಖಲೆ!
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ರನ್ ನೀಡಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತ ದಾಖಲೆಯನ್ನು ಇಂಗ್ಲೆಂಡ್ ನಾಯಕ ಜೋ ರೂಟ್ ಬರೆದರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 8 ರನ್‌ಗೆ 5 ವಿಕೆಟ್ ಕಿತ್ತ ರೂಟ್, 1993ರಲ್ಲಿ 9 ರನ್‌ಗೆ 5 ವಿಕೆಟ್ ಕಿತ್ತಿದ್ದ ಆಸ್ಪ್ರೇಲಿಯಾದ ಟಿಮ್ ಮೇ ದಾಖಲೆಯನ್ನು ಮುರಿದರು.
ತವರಿನಲ್ಲಿ ಅತಿಹೆಚ್ಚು ಜಯ: ಧೋನಿ ದಾಖಲೆ ಮುರಿದ ಕೊಹ್ಲಿ!
ಭಾರತೀಯ ನೆಲದಲ್ಲಿ ಅತ್ಯಂತ ಯಶಸ್ವಿ ನಾಯಕ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಭಾರತ ತಂಡ ತವರಿನಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ 21 ಟೆಸ್ಟ್ ಗೆಲುವುಗಳನ್ನು ಕಂಡಿತ್ತು. ಕೊಹ್ಲಿ ನಾಯಕನಾಗಿ 22 ಗೆಲುವುಗಳನ್ನು ಕಂಡಿದ್ದು, ಧೋನಿಯನ್ನು ಹಿಂದಿಕ್ಕಿದ್ದಾರೆ.
ಅಕ್ಷರ್ ಪಟೇಲ್ ದಾಖಲೆ: ಹಗಲು-ರಾತ್ರಿ ಟೆಸ್ಟ್‌ವೊಂದರಲ್ಲಿ ಗರಿಷ್ಠ ವಿಕೆಟ್ (ಒಟ್ಟು 11 ವಿಕೆಟ್) ಕಿತ್ತ ಮೊದಲ ಬೌಲರ್ ಅಕ್ಷರ್.
ಇಂಗ್ಲೆಂಡ್ ಅನುಭವಿ ವೇಗಿಗಳಿಗೆ ನಿರಾಸೆ: ಆ್ಯಂಡರ್‌ಸನ್ ಹಾಗೂ ಬ್ರಾಡ್ ಒಟ್ಟು 121 ಟೆಸ್ಟ್‌ಗಳಲ್ಲಿ ಒಟ್ಟಿಗೆ ಆಡಿದ್ದು, ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದರಲ್ಲಿ ಇಬ್ಬರೂ ವಿಕೆಟ್ ಕಬಳಿಸಲು ವಿಫಲರಾಗಿದ್ದಾರೆ.
ಕೇವಲ 842 ಎಸೆತಗಳಲ್ಲಿ ಟೆಸ್ಟ್ ಪಂದ್ಯ ಮುಕ್ತಾಯ: ಇಡೀ ಪಂದ್ಯದಲ್ಲಿ ಕೇವಲ 842 ಎಸೆತಗಳ ಆಟವಷ್ಟೇ ನಡೆಯಿತು. 1945ರ ಬಳಿಕ ಇದು ಅದು ಅತಿಕಡಿಮೆ ಎಸೆತಗಳಿಗೆ ಸಾಕ್ಷಿಯಾದ ಪಂದ್ಯವಿದು.