WPL 2023: ಡಬ್ಲ್ಯುಪಿಎಲ್‌ನಲ್ಲಿ ನವ ತಾರೆಯರ ಉದಯ..!
ಮುಂಬೈ(ಮಾ.28): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಯಶಸ್ವಿ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆಯೇ ಹಲವು ಯುವ, ಉದಯೋನ್ಮುಖ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದೆ. ದಿಗ್ಗಜೆ ಆಟಗಾರ್ತಿಯರ ನಡುವೆಯೂ ಹಲವು ಪ್ರತಿಭಾನ್ವಿತ ಆಟಗಾರ್ತಿಯರು ಟೂರ್ನಿಯಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಭವಿಷ್ಯದ ತಾರೆಗಳಾಗಿ ಮೂಡಿಬಂದಿದ್ದಾರೆ. ಡಬ್ಲ್ಯುಪಿಎಲ್‌ನಲ್ಲಿ ಸಿಕ್ಕಿರುವ ಸೀಮಿತ ಅವಕಾಶದಲ್ಲಿ ಅಗಾಧ ಸಾಮರ್ಥ್ಯ ಪ್ರದರ್ಶಿಸಿರುವ ದೇಶದ ಕೆಲ ಆಟಗಾರ್ತಿಯರ ಪರಿಚಯ ಇಲ್ಲಿದೆ.
1. ಶ್ರೇಯಾಂಕ ಪಾಟೀಲ್
ಕರ್ನಾಟಕದ 20 ವರ್ಷದ ಶ್ರೇಯಾಂಕಾ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕವೇ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿದ್ದ ಅವರು ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದು, ತಮ್ಮ ಆಕರ್ಷಕ ಹೊಡೆತ, ಸ್ಪಿನ್ ಕೈಚಳಕದ ಮೂಲಕ ಭರವಸೆ ಮೂಡಿಸಿದ್ದಾರೆ. 7 ಇನ್ನಿಂಗ್್ಸಗಳಲ್ಲಿ 151.2ರ ಸ್ಟ್ರೈಕ್ರೇಟ್ನಲ್ಲಿ 62 ರನ್ ಗಳಿಸಿರುವ ಅವರು 6 ವಿಕೆಟ್ ಕೂಡಾ ಪಡೆದಿದ್ದಾರೆ.
2. ಸಾಯಿಕಾ ಇಸಾಖ್
ಕೋಲ್ಕತಾದ ಸಾಯಿಕಾ ಇಸಾಖ್ ಮುಂಬೈ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೌಲರ್. ಎಡಗೈ ಆಫ್ ಸ್ಪಿನ್ನರ್ ಆಗಿರುವ ಇಸಾಖ್ 10 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದು, ಟೂರ್ನಿಯ ಗರಿಷ್ಠ ವಿಕೆಟ್ ಗಳಿಕೆದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಗುಜರಾತ್ ವಿರುದ್ಧ 11 ರನ್‌ಗೆ 4 ವಿಕೆಟ್ ಕಿತ್ತಿದ್ದು ಶ್ರೇಷ್ಠ ಸಾಧನೆ.
3. ಕನಿಕಾ ಅಹುಜಾ
ಈ ಬಾರಿ ಆರ್‌ಸಿಬಿ ಪರ ಮಿಂಚಿದ ಮತ್ತೋರ್ವ ಯುವ ಪ್ರತಿಭೆ ಕನಿಕಾ ಅಹುಜಾ. ಪಂಜಾಬ್ನ 21 ವರ್ಷದ ಕನಿಕಾ 132ರ ಸ್ಟೆ್ರೖಕ್ರೇಟ್ನಲ್ಲಿ 98 ರನ್ ಗಳಿಸಿದ್ದು, 5ರ ಎಕಾನಮಿಯಲ್ಲಿ ಬೌಲ್ ಮಾಡಿ 2 ವಿಕೆಟ್ ಪಡೆದಿದ್ದಾರೆ. ಯುಪಿ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಘಟ್ಟದಲ್ಲಿ 30 ಎಸೆತಗಳಲ್ಲಿ 46 ರನ್ ಸಿಡಿಸಿ ತಂಡದ ಟೂರ್ನಿಯಲ್ಲಿ ಆರ್ಸಿಬಿಯ ಮೊದಲ ಗೆಲುವಿಗೆ ನೆರವಾಗಿದ್ದರು.
4. ದಯಾಲನ್ ಹೇಮಲತಾ
ರಾಷ್ಟ್ರೀಯ ತಂಡದಲ್ಲಿ ಆಡಿ ಅನುಭವವಿರುವ ಚೆನ್ನೈನ ದಯಾಲನ್ ಹೇಮಲತಾ ಈ ಬಾರಿ ಗುಜರಾತ್ ಪರ ಮಿಂಚಿದ್ದಾರೆ. ತಂಡ ನಾಕೌಟ್ಗೇರಲು ವಿಫಲವಾದರೂ ಹೇಮಲತಾ 8 ಪಂದ್ಯಗಳಲ್ಲಿ 151 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಯುಪಿ ವಿರುದ್ಧದ ಕೊನೆ ಪಂದ್ಯದಲ್ಲಿ 172.73ರ ಸ್ಟ್ರೈಕ್ರೇಟ್ನಲ್ಲಿ ಕೇವಲ 33 ಎಸೆತಗಳಲ್ಲಿ 57 ರನ್ ಗಳಿಸಿದ್ದಾರೆ.
5. ಕಿರಣ್ ನವ್ಗೀರೆ
ಕಿರಣ್ ನವ್ಗೀರೆ ಯು.ಪಿ.ವಾರಿಯರ್ಸ್ ಪರ ತಮ್ಮ ಮೊದಲ ಇನ್ನಿಂಗ್‌್ಸನಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ 53 ರನ್ ಸಿಡಿಸಿದ್ದ ಅವರು ಒಟ್ಟು 9 ಪಂದ್ಯಗಳಲ್ಲಿ 155 ರನ್ ಕಲೆಹಾಕಿದ್ದಾರೆ. ತಮ್ಮ ಬ್ಯಾಟ್‌ಗೆ ಪ್ರಾಯೋಜಕರಿಲ್ಲದ ಕಾರಣ ಬ್ಯಾಟ್ ಮೇಲೆ ತಾವೇ ಸ್ಕೆಚ್ ಪೆನ್‌ನಲ್ಲಿ ‘ಎಂಎಸ್‌ಡಿ7’ ಎಂದು ಬರೆದು ಗಮನ ಸೆಳೆದಿದ್ದರು.
6. ತನುಜಾ ಕನ್ವಾರ್
ಈ ಬಾರಿ ಬೌಲಿಂಗ್ನಲ್ಲಿ ಭರವಸೆ ಮೂಡಿಸಿದ ಆಟಗಾರ್ತಿಯರಲ್ಲಿ ಹಿಮಾಚಲ ಪ್ರದೇಶದ ತನುಜಾ ಕೂಡಾ ಒಬ್ಬರು. ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್ ಪರ ಆಡಿದ ಎಡಗೈ ಸ್ಪಿನ್ನರ್ ತನುಜಾ 5 ವಿಕೆಟ್ ಪಡೆದಿದ್ದಾರೆ. 27 ಓವರ್ ಬೌಲ್ ಮಾಡಿರುವ ಅವರು 63 ಡಾಟ್ ಬಾಲ್ ಎಸೆದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 29 ರನ್‌ಗೆ 2 ವಿಕೆಟ್ ಪಡೆದಿದ್ದಾರೆ.