- Home
- Sports
- Cricket
- T20 World Cup ಟೂರ್ನಿಯಿಂದ ದೀಪಕ್ ಚಹರ್ ಔಟ್; ಶಮಿ/ಸಿರಾಜ್/ಶಾರ್ದೂಲ್ ಮೂವರಲ್ಲಿ ಯಾರಿಗೆ ಸಿಗಲಿದೆ ಸ್ಥಾನ?
T20 World Cup ಟೂರ್ನಿಯಿಂದ ದೀಪಕ್ ಚಹರ್ ಔಟ್; ಶಮಿ/ಸಿರಾಜ್/ಶಾರ್ದೂಲ್ ಮೂವರಲ್ಲಿ ಯಾರಿಗೆ ಸಿಗಲಿದೆ ಸ್ಥಾನ?
ಬೆಂಗಳೂರು(ಅ.12): ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಗಾಯದ ಸಮಸ್ಯೆ ಟೀಂ ಇಂಡಿಯಾವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಟೀಂ ಇಂಡಿಯಾದ ಮತ್ತೋರ್ವ ವೇಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮೂವರು ವೇಗಿಗಳ ನಡುವೆ ಟೀಂ ಇಂಡಿಯಾ ಕೂಡಿಕೊಳ್ಳಲು ಪೈಪೋಟಿ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ವೇಗಿ ದೀಪಕ್ ಚಹರ್, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಟೀಂ ಇಂಡಿಯಾ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ, ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಮೀಸಲು ಆಟಗಾರನ ರೂಪದಲ್ಲಿ ಸ್ಥಾನ ಪಡೆದಿದ್ದ ದೀಪಕ್ ಚಹರ್, ಭಾರತ ತಂಡ ಕೂಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಟೀಂ ಇಂಡಿಯಾ, ದೀಪಕ್ ಚಹರ್ ಫಿಟ್ನೆಸ್ ರಿಪೋರ್ಟ್ ಎದುರು ನೋಡುತ್ತಿತ್ತು. ಆದರೆ ಬೆನ್ನು ನೋವಿನಿಂದ ದೀಪಕ್ ಚಹರ್ ಸಂಪೂರ್ಣ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ, ಅಧಿಕೃತವಾಗಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಫಿಟ್ನೆಸ್ ಸಮಸ್ಯೆಯಿಂದಾಗಿಯೇ ಸಾಕಷ್ಟು ಕಾಲ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ದೀಪಕ್ ಚಹರ್, ಜಿಂಬಾಬ್ವೆ ವಿರುದ್ದ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದರು. ಹೀಗಾಗಿ ಚಹರ್ ಅವರನ್ನು ಟಿ20 ವಿಶ್ವಕಪ್ ಟೂರ್ನಿಗೆ ಮೀಸಲು ಆಟಗಾರನ ರೂಪದಲ್ಲಿ ಸ್ಥಾನ ನೀಡಿತ್ತು.
ದೀಪಕ್ ಚಹರ್ ಬೆನ್ನು ನೋವಿನ ಸಮಸ್ಯೆಯಿಂದಾಗಿ ಟಿ20 ಟೂರ್ನಿಯಿಂದ ಹೊರಬಿದ್ದಿದ್ದು, ಅಕ್ಟೋಬರ್ 13ರಂದು ಮೀಸಲು ಆಟಗಾರರ ರೂಪದಲ್ಲಿ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾಗೆ ವಿಮಾನವೇರಲಿದ್ದಾರೆ.
ಈ ಮೂವರು ವೇಗಿಗಳು ಪರ್ತ್‌ಗೆ ಬಂದಿಳಿಯಲಿದ್ದು, ಅಲ್ಲಿ ಭಾರತ ತಂಡದ ಜತೆ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ 14 ಆಟಗಾರರನ್ನೊಳಗೊಂಡ ತಂಡವು, ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಅಭ್ಯಾಸ ಆರಂಭಿಸಿದೆ.
ಇದೀಗ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ಅನುಭವಿ ವೇಗಿ ಮೊಹಮ್ಮದ್ ಶಮಿ, 15 ಆಟಗಾರನಾಗಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇನ್ನು ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಸಿರಾಜ್‌ಗೆ ಅವಕಾಶ ಸಿಕ್ಕಿದರೂ ಅಚ್ಚರಿ ಪಡುವಂತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.