Wriddhiman Saha : ಧಮ್ಕಿ ಹಾಕಿದ ಪತ್ರಕರ್ತನ ಬಗ್ಗೆ ತುಟಿಬಿಚ್ಚಿದ ಟೀಂ ಇಂಡಿಯಾ ವಿಕೆಟ್ ಕೀಪರ್..!
ಬೆಂಗಳೂರು: ಟೀಂ ಇಂಡಿಯಾ (Team India) ಟೆಸ್ಟ್ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ (Wriddhiman Saha) ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಲಂಕಾ ಎದುರಿನ ಟೆಸ್ಟ್ ಸರಣಿಗೆ ಸಾಹ ಅವರನ್ನು ತಂಡದಿಂದ ಕೈಬಿಟ್ಟಿರುವ ಬೆನ್ನಲ್ಲೇ ಪತ್ರಕರ್ತನೊಬ್ಬ ಸಾಹಗೆ ಬೆದರಿಕೆ ಹಾಕಿರುವ ವಿಚಾರವನ್ನು ಸ್ವತಃ ವಿಕೆಟ್ ಕೀಪರ್ ಬ್ಯಾಟರ್ ಬಹಿರಂಗ ಪಡಿಸಿದ್ದರು. ಇದೀಗ ಈ ವಿವಾದದ ಕುರಿತಂತೆ ಸಾಹ ಮತ್ತೊಮ್ಮೆ ತುಟಿಬಿಚ್ಚಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ, ಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಹೊರಬೀಳುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಇದರ ಬೆನ್ನಲ್ಲೇ ಹಲವು ಪತ್ರಕರ್ತರು ವೃದ್ದಿಮಾನ್ ಸಾಹ ಅವರ ಸಂದರ್ಶನ ಮಾಡಲು ಮುಂದಾಗಿದ್ದರು. ಈ ಪೈಕಿ ಸಂದರ್ಶನ ನೀಡದೆ ಇರುವುದಕ್ಕೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಟ್ವೀಟರ್‌ನಲ್ಲಿ ವಾಟ್ಸ್‌ಆಪ್ ಚಾಟಿಂಗ್ ಪೋಸ್ಟ್ ಹಂಚಿಕೊಂಡಿದ್ದರು.
ವೃದ್ದಿಮಾನ್ ಸಾಹ ಆವರು ತಮಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಟೀಂ ಇಂಡಿಯಾ ವಿಕೆಟ್ ಕೀಪರ್‌ಗೆ ಹಲವು ಹಿರಿಯ ಕ್ರಿಕೆಟಿಗರು ಬೆಂಬಲ ಸೂಚಿಸಿದ್ದರು. ಇದರ ಜತೆಗೆ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಅವರು ಸಾಹ ಜತೆ ಚರ್ಚಿಸಲಿದ್ದಾರೆ ಎಂದು ಖಜಾಂಚಿ ಅರುಣ್ ಧುಮಾಲ್ ಕೂಡಾ ತಿಳಿಸಿದ್ದರು
‘ನಿಜಕ್ಕೂ ಇಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಾಹ ಜೊತೆ ವಿವರ ಕೇಳುತ್ತೇವೆ. ಬೆದರಿಕೆ ಬಂದಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಈ ವಿಚಾರದಲ್ಲಿ ಹೆಚ್ಚೇನೂ ಹೇಳುವುದಿಲ್ಲ. ಕಾರ‍್ಯದರ್ಶಿ ಜಯ್ ಶಾ ಖಂಡಿತವಾಗಿಯೂ ಸಾಹ ಜೊತೆ ಮಾತನಾಡುತ್ತಾರೆ’ ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದರು.
ಆದರೆ ಇದೀಗ ಈ ಕುರಿತಂತೆ 'ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ' ನೀಡಿದ ಸಂದರ್ಶನದಲ್ಲಿ, ತಮಗೆ ಈ ರೀತಿ ಬೆದರಿಕೆ ಹಾಕಿದ ಆಟಗಾರ ಯಾರು ಎಂದು ಬಿಸಿಸಿಐಗೆ ತಿಳಿಸುವುದಿಲ್ಲ. ನನ್ನ ಉದ್ದೇಶ ಯಾವೊಬ್ಬ ಒಬ್ಬ ವ್ಯಕ್ತಿಯ ವೃತ್ತಿಜೀವನ ಹಾಳುಮಾಡುವುದಲ್ಲ ಎಂದು ಸಾಹ ತಿಳಿಸಿದ್ದಾರೆ.
ಈ ಘಟನೆಯ ಕುರಿತಂತೆ ಇದುವರೆಗೂ ಬಿಸಿಸಿಐನಿಂದ ನನ್ನ ಜತೆ ಯಾವುದೇ ಮಾತುಕತೆ ನಡೆದಿಲ್ಲ. ಆ ಪತ್ರಕರ್ತ ಯಾರೆಂದು ಹೇಳಿ ಎಂದು ಬಿಸಿಸಿಐ ಕೇಳಿದರೂ ಸಹಾ ನಾನು ನನ್ನ ಉದ್ದೇಶ ಯಾರದ್ದೋ ಒಬ್ಬ ವ್ಯಕ್ತಿಯ ವೃತ್ತಿಜೀವನವನ್ನು ಹಾಳುಮಾಡುವುದಾಗಿರಲಿಲ್ಲ ಎನ್ನುತ್ತೇನೆ ಎಂದಿದ್ದಾರೆ.
ಈ ಕಾರಣಕ್ಕಾಗಿಯೇ ಟ್ವೀಟ್‌ನಲ್ಲಿಯೂ ಸಹಾ ನಾನು ಆ ಪತ್ರಕರ್ತನ ಹೆಸರನ್ನು ಬಹಿರಂಗ ಪಡಿಸಿಲ್ಲ. ಇನ್ನೊಬ್ಬರ ಜೀವನವನ್ನು ಹಾಳು ಮಾಡಬೇಕೆಂದು ನನ್ನ ಪೋಷಕರು ನನಗೆ ಹೇಳಿಕೊಟ್ಟಿಲ್ಲ. ಆ ನನ್ನ ಟ್ವೀಟ್‌ನ ಉದ್ದೇಶ ಮಾಧ್ಯಮದಲ್ಲಿ ಇಂತಹ ಕೆಲವು ಮಂದಿಯು ಇದ್ದಾರೆ ಎನ್ನುವುದನ್ನು ತಿಳಿಸುವುದಾಗಿತ್ತು ಎಂದು ದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ವೃದ್ದಿಮಾನ್ ಸಾಹ ತಿಳಿಸಿದ್ದಾರೆ.