Happy Birthday Kapil Dev: ಟೆಸ್ಟ್‌ನಲ್ಲಿ ಒಮ್ಮೆಯೂ ರನೌಟ್ ಆಗದ ಕಪಿಲ್ ದೇವ್‌ಗಿಂದು 63ರ ಜನ್ಮದಿನದ ಸಂಭ್ರಮ
ಬೆಂಗಳೂರು: ಹರ್ಯಾಣದ ಹರಿಕೇನ್ ಖ್ಯಾತಿಯ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ (Kapil Dev) ಅವರಿಂದು 63ನೇ ವಸಂತಕ್ಕೆ (Kapil Dev 63rd Birthday) ಕಾಲಿರಿಸಿದ್ದಾರೆ. ಭಾರತ ಕ್ರಿಕೆಟ್ (Indian Cricket Team) ಕಂಡ ಅತ್ಯಂತ ಯಶಸ್ವಿ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಕಪಿಲ್ ದೇವ್ ದೇಶಕ್ಕೆ ಏಕಾಂಗಿಯಾಗಿ ಹಲವಾರು ಗೆಲುವುಗಳನ್ನು ತಂದಿಟ್ಟಿದ್ದಾರೆ. 1893ರ ಏಕದಿನ ವಿಶ್ವಕಪ್ (1983 World Cup) ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಭಾರತ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಕಪಿಲ್ ದೇವ್ ಮಹತ್ವದ ಪಾತ್ರ ವಹಿಸಿದ್ದರು. ಕಪಿಲ್ ದೇವ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ...
Kapil Dev
ಕಪಿಲ್ ದೇವ್ ರಾಮ್‌ಲಾಲ್ ನಿಖಂಜ್ ಅವರು 1959ರ ಜನವರಿ 06ರಂದು ಚಂಢಿಗಢದಲ್ಲಿ ಜನಿಸಿದರು. ಕಪಿಲ್ ದೇವ್ ತಂದೆ ರಾಮ್ ಲಾಲ್ ನಿಖಂಜ್ ಈಗಿನ ಪಾಕಿಸ್ತಾನದ ದೀಪಾಲ್‌ಪುರದವರು. ಇನ್ನು ಕಪಿಲ್ ದೇವ್ ತಾಯಿ ರಾಜ್ ಕುಮಾರಿ ಕೂಡಾ ಪಾಕಿಸ್ತಾನದವರೆ. ಆದರೆ ಭಾರತ ಹಾಗೂ ಪಾಕಿಸ್ತಾನದ ಗಡಿ ವಿಭಜನೆಯ ಬಳಿಕ ಇವರಿಬ್ಬರು ಭಾರತಕ್ಕೆ ಬಂದರು. ಭಾರತ ಚಂಢಿಗಢದಲ್ಲಿ ಕಪಿಲ್ ದೇವ್ ಜಯಿಸಿದರು.
ಕಪಿಲ್ ದೇವ್ 1974ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಪಂಜಾಬ್ ವಿರುದ್ದ ಹರ್ಯಾಣ ಪರ ಪ್ರಥಮ ದರ್ಜೆ ಪಂದ್ಯವನ್ನಾಡುವ ಮೂಲಕ ವೃತ್ತಿಪರ ಕ್ರಿಕೆಟ್ ಆರಂಭಿಸಿದರು. ಆ ಪಂದ್ಯದಲ್ಲಿ ಕಪಿಲ್ ದೇವ್ ಕೇವಲ 39 ರನ್ ನೀಡಿ 6 ವಿಕೆಟ್ ಕಬಳಿಸಿದರು. ಈ ಮೂಲಕ ಪಂಜಾಬ್ ತಂಡವನ್ನು ಕೇವಲ 63 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 1978ರ ಅಕ್ಟೋಬರ್ 16ರಂದು ಪಾಕಿಸ್ತಾನ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಸತತ ಎರಡು ವಿಶ್ವಕಪ್ ಗೆದ್ದು, ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಭಾರತ ಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಭಾರತ ಕ್ರಿಕೆಟ್ ತಂಡದ ಭವಿಷ್ಯವೇ ಬದಲಾಗಿ ಹೋಯಿತು.
ಕಪಿಲ್ 16 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ 131 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅವರೆಷ್ಟು ಫಿಟ್ ಆಟಗಾರರಾಗಿದ್ದರು ಎಂದರೆ, ಒಮ್ಮೆಯೂ ಸಹ ಫಿಟ್ನೆಸ್ ಅಥವಾ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರಲಿಲ್ಲ. ಇದಷ್ಟೇ ಅಲ್ಲ ಆಡಿದ 184 ಟೆಸ್ಟ್ ಇನಿಂಗ್ಸ್‌ನಲ್ಲಿ ಕಪಿಲ್ ದೇವ್ ಒಮ್ಮೆಯೂ ಸಹ ರನೌಟ್ ಆಗಿಲ್ಲ ಎಂದರೆ ನೀವೇ ಯೋಚನೆ ಮಾಡಿ, ಕ್ರೀಸ್‌ನಲ್ಲಿ ಅವರೆಷ್ಟು ಚುರುಕಾಗಿದ್ದರು ಎಂದು.
ಕಪಿಲ್ ದೇವ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲೇ ಫಿಟ್ನೆಸ್‌ಗೆ ಸಾಕಷ್ಟು ಮಹತ್ವ ನೀಡಿದ್ದರು. 80ರ ದಶಕದಲ್ಲಿ ಹೆಚ್ಚಿನ ಭಾರತೀಯ ಆಟಗಾರರು ಫಿಟ್ನೆಸ್ ಬಗ್ಗೆ ಗಮನ ಕೊಡುತ್ತಿರಲಲ್ಲ.ಈ ಕಾರಣಕ್ಕಾಗಿಯೇ ಕಪಿಲ್ ತಮ್ಮ 63ನೇ ವಯಸ್ಸಿನಲ್ಲೂ ಸಾಕಷ್ಟು ಖಡಕ್ ಆಗಿ ಕಾಣಸಿಗುತ್ತಿದ್ದಾರೆ. ಇದಷ್ಟೇ ಅಲ್ಲದೇ 83 ಸಿನೆಮಾದ ಪ್ರಚಾರದ ವೇಳೆಯಲ್ಲೂ ರಣವೀರ್ ಸಿಂಗ್ ಜತೆ ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ.
ಅಂದಹಾಗೆ ಕಳೆದ ವರ್ಷದ ಅಕ್ಟೋಬರ್ 22ರಂದು ಕಪಿಲ್ ದೇವ್‌ಗೆ ಹೃದಯಾಘಾತವಾಗಿತ್ತು. ತಕ್ಷಣವೇ ದೆಹಲಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಇದಾಗಿ ಕೆಲವೇ ದಿನಗಳ ಬಳಿಕ ಕಪಿಲ್ ದೇವ್ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರು.
ಕಪಿಲ್ ದೇವ್ ಕ್ರಿಕೆಟ್ ಬದುಕಿನ ಬಗ್ಗೆ ಹೇಳುವುದಾದರೆ, 131 ಟೆಸ್ಟ್ ಪಂದ್ಯಗಳನ್ನಾಡಿ 5248 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 434 ವಿಕೆಟ್ ಕಬಳಿಸಿದ್ದಾರೆ. ಇನ್ನು 225 ಏಕದಿನ ಪಂದ್ಯಗಳನ್ನಾಡಿ 3783 ರನ್ ಹಾಗೂ 253 ವಿಕೆಟ್ ಕಬಳಿಸಿದ್ದಾರೆ.