549 ರನ್, 81 ಬೌಂಡ್ರಿ: ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ನುಚ್ಚುನೂರು..!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿತ್ತು. ಈ ಪಂದ್ಯವನ್ನು ಆರ್‌ಸಿಬಿ ಸೋತರೂ, ಪಂದ್ಯ ವೀಕ್ಷಿಸಿದ ಫ್ಯಾನ್ಸ್‌ಗೆ ಪೈಸಾ ವಸೋಲ್ ಮನರಂಜನೆ ಸಿಕ್ಕಿತು. ಇನ್ನು ಪಂದ್ಯ ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
1. ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ರನ್ ಬಾರಿಸಿದ ಸಾಧನೆ ಮಾಡಿತು. ಈ ಮೊದಲು ಮುಂಬೈ ಇಂಡಿಯನ್ಸ್ ವಿರುದ್ದ ಸನ್‌ರೈಸರ್ಸ್ ಹೈದರಾಬಾದ್ 277/3 ರನ್ ಬಾರಿಸಿತ್ತು. ಆದರೆ ಇದೀಗ ಆರೆಂಜ್ ಆರ್ಮಿ, ಆರ್‌ಸಿಬಿ ಎದುರು 287/3 ಸಿಡಿಸಿ, ತನ್ನದೇ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿತು.
2. ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಬರೋಬ್ಬರಿ 549 ರನ್ ದಾಖಲಾದವು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಗರಿಷ್ಠ ಮೊತ್ತ ಎನಿಸಿಕೊಂಡಿತು. ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಒಟ್ಟು 523 ರನ್ ದಾಖಲಾಗಿತ್ತು.
3. ಸನ್‌ರೈಸರ್ಸ ಹೈದರಾಬಾದ್ ಬ್ಯಾಟರ್‌ಗಳು ಆರ್‌ಸಿಬಿ ಎದುರು 22 ಸಿಕ್ಸರ್ ಸಿಡಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ ಇನಿಂಗ್ಸ್‌ವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ ಎನಿಸಿತು. ಈ ಮೊದಲು 2013ರಲ್ಲಿ ಆರ್‌ಸಿಬಿ ಹಾಗೂ ಪುಣೆ ವಾರಿಯರ್ಸ್ ನಡುವಿನ ಪಂದ್ಯದಲ್ಲಿ 21 ಸಿಕ್ಸರ್ ದಾಖಲಾಗಿದ್ದವು.
4. ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಎರಡು ತಂಡಗಳಿಂದ 38 ಸಿಕ್ಸರ್‌ಗಳು ದಾಖಲಾದವು. ಈ ಮೂಲಕ ಟಿ20 ಪಂದ್ಯದಲ್ಲಿ ಜಂಟಿ ಅತಿಹೆಚ್ಚು ಸಿಕ್ಸರ್ ದಾಖಲಾದ ಪಂದ್ಯ ಎನಿಸಿಕೊಂಡಿತು. ಈ ಮೊದಲು ಮುಂಬೈ ಹಾಗೂ ಹೈದರಾಬಾದ್ ನಡುವಿನ ಪಂದ್ಯದ ವೇಳೆಯಲ್ಲೂ 38 ಸಿಕ್ಸರ್‌ಗಳು ದಾಖಲಾಗಿದ್ದವು.
5. ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಬರೋಬ್ಬರಿ 81 ಬೌಂಡರಿಗಳು ದಾಖಲಾದವು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಜಂಟಿ ಗರಿಷ್ಠ ಬೌಂಡರಿ ಎನಿಸಿತು. ಈ ಮೊದಲು 2023ರಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆಯಲ್ಲೂ 81 ಬೌಂಡರಿಗಳು ದಾಖಲಾಗಿದ್ದವು.
6. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಇನಿಂಗ್ಸ್‌ನಲ್ಲಿ 262 ರನ್ ಸಿಡಿಸಿ ಹೊಸ ದಾಖಲೆ ನಿರ್ಮಿಸಿತು. ಈ ಮೊದಲು ವೆಸ್ಟ್ ಇಂಡೀಸ್ ತಂಡವು 2023ರಲ್ಲಿ ದಕ್ಷಿಣ ಆಫ್ರಿಕಾ ಎದುರು ಗುರಿ ಬೆನ್ನತ್ತಿ 258/5 ರನ್ ಗಳಿಸಿತ್ತು. ಆ ದಾಖಲೆಯನ್ನು ಆರ್‌ಸಿಬಿ ಬ್ರೇಕ್ ಮಾಡಿದೆ.
7. ಒಂದೇ ತಂಡದ ನಾಲ್ವರು ಬೌಲರ್ ಒಂದೇ ಇನಿಂಗ್ಸ್‌ನಲ್ಲಿ 50+ ರನ್ ನೀಡಿದ್ದು ಕೂಡಾ ಇದೇ ಮೊದಲು. ಆರ್‌ಸಿಬಿಯ ರೀಸ್ ಟಾಪ್ಲೆ(68), ಯಶ್ ದಯಾಳ್(51), ಲಾಕಿ ಫರ್ಗ್ಯೂಸನ್(52) ಹಾಗೂ ವೈಶಾಕ್ ವಿಜಯ್‌ಕುಮಾರ್(64) ರನ್ ನೀಡಿ ದುಬಾರಿ ಎನಿಸಿಕೊಂಡರು.
8. ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಒಟ್ಟು 7 ಬಾರಿ 50+ ರನ್ ಜತೆಯಾಟ ಮೂಡಿಬಂದಿತು. ಈ ಹಿಂದೆ ಯಾವತ್ತೂ ಟಿ20 ಕ್ರಿಕೆಟ್‌ನಲ್ಲಿ 7 ಬಾರಿ 50+ ಪಾರ್ಟ್ನರ್‌ಶಿಪ್ ಮೂಡಿ ಬಂದಿರಲಿಲ್ಲ.