146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಯಾರೂ ಮಾಡದ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ..!
ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಈ ಹಿಂದೆ ಯಾರೂ ಮಾಡದ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೀಂ ಇಂಡಿಯಾ ಬ್ಯಾಟಿಂಗ್ ಲೆಜೆಂಡ್ ವಿರಾಟ್ ಕೊಹ್ಲಿ, 2023ರಲ್ಲೂ ತಮ್ಮ ಅದ್ಭುತ ಲಯವನ್ನು ಮುಂದುವರೆಸಿದ್ದಾರೆ. ಇದೀಗ ವರ್ಷದ ಕೊನೆಯ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದರಾದರೂ ಹರಿಣಗಳೆದುರು ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಆದರೆ ಇದೀಗ ವಿರಾಟ್ ಕೊಹ್ಲಿ 146 ವರ್ಷಗಳ ಇತಿಹಾಸವಿರುವ ಕ್ರಿಕೆಟ್‌ನಲ್ಲಿ ಈ ಹಿಂದೆ ಯಾವೊಬ್ಬ ಬ್ಯಾಟರ್ ಕೂಡಾ ಮಾಡಲಾಗದ ಅಪರೂಪದ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ವಿರಾಟ್ ಕೊಹ್ಲಿ 7 ಬೇರೆ-ಬೇರೆ ಕ್ಯಾಲೆಂಡರ್ ವರ್ಷಗಳಲ್ಲಿ 2000+ ರನ್ ಬಾರಿಸಿದ ಜಗತ್ತಿನ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹಿರಿಮೆಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 82 ಎಸೆತಗಳನ್ನು ಎದುರಿಸಿ ಕೆಚ್ಚೆದೆಯ 76 ರನ್ ಸಿಡಿಸಿದರಾದರೂ, ಉಳಿದ ಬ್ಯಾಟರ್‌ಗಳಿಂದ ಸೂಕ್ತ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 32 ರನ್ ಅಂತರದ ಸೋಲು ಅನುಭವಿಸಿತು.
ಇದರ ಹೊರತಾಗಿಯೂ ವಿರಾಟ್ ಕೊಹ್ಲಿ 2023ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2,006 ರನ್ ಬಾರಿಸುವಲ್ಲಿ ಯಶಸ್ವಿಯಾಗುವ ಮೂಲಕ 7ನೇ ಬಾರಿಗೆ ಈ ಸಾಧನೆ ಮಾಡಿದರು.
ಈ ಮೊದಲು ವಿರಾಟ್ ಕೊಹ್ಲಿ, 2012ರಲ್ಲಿ 2186 ರನ್, 2014ರಲ್ಲಿ 2286 ರನ್, 2016ರಲ್ಲಿ 2595 ರನ್, 2017ರಲ್ಲಿ 2818 ರನ್, 2018ರಲ್ಲಿ 2735 ರನ್ ಹಾಗೂ 2019ರಲ್ಲಿ 2455 ರನ್ ಬಾರಿಸಿದ್ದರು.
ಅಧಿಕೃತ ದಾಖಲೆಗಳ ಪ್ರಕಾರ 1877ರಲ್ಲಿ ಆರಂಭವಾದ ಕ್ರಿಕೆಟ್‌ನಲ್ಲಿ ಯಾವೊಬ್ಬ ಬ್ಯಾಟರ್ ಕೂಡಾ 7 ಬಾರಿ ಕ್ಯಾಲೆಂಡರ್ ವರ್ಷದಲ್ಲಿ 2000+ ರನ್ ಬಾರಿಸಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಅಸಾಧ್ಯವಾದದ್ದನ್ನು ವಿರಾಟ್ ಸಾಧ್ಯವಾಗಿಸಿದ್ದಾರೆ.