2ನೇ ಟೆಸ್ಟ್‌ಗೂ ಮುನ್ನ ಇಂಗ್ಲೆಂಡ್‌ಗೆ ಬಿಗ್ ಶಾಕ್, ಸ್ಟಾರ್ ವೇಗಿ ಔಟ್..!
ಚೆನ್ನೈ: ಬಲಿಷ್ಠ ಭಾರತ ತಂಡದೆದುರು ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಇಂಗ್ಲೆಂಡ್ ತಂಡ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿರುವಾಗಲೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿದೆ.
ಇಂಗ್ಲೆಂಡ್ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕಳೆದ ವಾರ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ದ ಇಂಗ್ಲೆಂಡ್ 227 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಜೋಫ್ರಾ ಆರ್ಚರ್ ಮಹತ್ವದ ಕಾಣಿಕೆ ನೀಡಿದ್ದರು.
ಬಲ ಮೊಣಕೈ ನೋವಿನಿಂದ ಬಳಲುತ್ತಿರುವ ಜೋಫ್ರಾ ಆರ್ಚರ್ ಭಾರತ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಆರ್ಚರ್ ಕೈಗೆ ನೋವು ನಿವಾರಕ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಫೆಬ್ರವರಿ 24ರಿಂದ ಅಹಮದಾಬಾದ್‌ನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಆರ್ಚರ್ ತಂಡ ಕೂಡಿಕೊಳ್ಳುವ ವಿಶ್ವಾಸವನ್ನು ಇಂಗ್ಲೆಂಡ್ ಪಾಳಯ ಹೊಂದಿದೆ.
ಕೆಲದಿನಗಳ ಹಿಂದಷ್ಟೇ ಚೆಪಾಕ್ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದ ಜೋಫ್ರಾ ಆರ್ಚರ್, ತಾನಾಡಿದ ಕೆಟ್ಟ ಪಿಚ್ ಇದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದರು.
ಇದೀಗ ಜೋಫ್ರಾ ಆರ್ಚರ್ ಬದಲಿಗೆ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 13ರಿಂದ ಆರಂಭವಾಗಲಿದ್ದು, ಚೆನ್ನೈ ಚೆಪಾಕ್ ಮೈದಾನ ಆತಿಥ್ಯವನ್ನು ವಹಿಸಿದೆ.