IPL 2022: ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್‌ಗೆ ಬಿಗ್ ಶಾಕ್..!
ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳಾದ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಸೇರ್ಪಡೆಯಾಗಿವೆ. ಇದೀಗ ಟೂರ್ನಿ ಆರಂಭಕ್ಕೂ ಮುನ್ನ ನೂತನ ತಂಡ ಗುಜರಾತ್ ಟೈಟಾನ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಆಟಗಾರ ತಂಡದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನವೇ ನೂತನ ತಂಡವಾದ ಗುಜರಾತ್ ಟೈಟಾನ್ಸ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಜೇಸನ್ ರಾಯ್ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 2 ಕೋಟಿ ರುಪಾಯಿ ನೀಡಿ ಜೇಸನ್ ರಾಯ್ ಅವರನ್ನು ಖರೀದಿಸಿತ್ತು.
ದೀರ್ಘಕಾಲದವರೆಗೆ ಬಯೋ ಬಬಲ್‌ನೊಳಗೆ ಕಾಲ ಕಳೆಯಲು ತಮಗೆ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಜೇಸನ್ ರಾಯ್.
2022ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಜೇಸನ್ ರಾಯ್ ಅಮೋಘ ಪ್ರದರ್ಶನದ ಮೂಲಕ ಮಿಂಚಿದ್ದರು. ಪಿಎಸ್‌ಎಲ್ ಟೂರ್ನಿಯಲ್ಲಿ ಜೇಸನ್ ರಾಯ್ ಕೇವಲ 6 ಪಂದ್ಯಗಳನ್ನಾಡಿ 50.50 ಬ್ಯಾಟಿಂಗ್ ಸರಾಸರಿಯಲ್ಲಿ 303 ರನ್ ಬಾರಿಸಿದ್ದರು. ಜೇಸನ್ ರಾಯ್ ಒಂದು ಶತಕ ಹಾಗೂ ಎರಡು ಶತಕ ಬಾರಿಸಿ ಗಮನ ಸೆಳೆದಿದ್ದರು.
ಐಪಿಎಲ್‌ನಲ್ಲಿ ಫ್ರಾಂಚೈಸಿಯು ತಮ್ಮನ್ನು ಖರೀದಿಸಿದ ಬಳಿಕ ಜೇಸನ್ ರಾಯ್ ಎರಡನೇ ಬಾರಿಗೆ ಹೊರಗುಳಿದಂತೆ ಆಗಿದೆ. ಈ ಮೊದಲು 2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 1.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದಾದ ಬಳಿಕ ವೈಯುಕ್ತಿಕ ಕಾರಣ ನೀಡಿ ರಾಯ್ ಐಪಿಎಲ್‌ನಿಂದ ಹೊರಗುಳಿದಿದ್ದರು.
ಕೋವಿಡ್ ಭೀತಿಯಿಂದಾಗಿ ಜಗತ್ತಿನಾದ್ಯಂತೆ ಅಂತಾರಾಷ್ಟ್ರೀಯ ಹಾಗೂ ಲೀಗ್ ಟೂರ್ನಿಗಳನ್ನು ಬಯೋ ಬಬಲ್‌ನೊಳಗೆ ಆಯೋಜಿಸಲಾಗುತ್ತಿದೆ. ಬಯೋ ಬಬಲ್ ಕಿರಿಕಿರಿಯಿಂದ ಪಾರಾಗುವ ಉದ್ದೇಶದಿಂದ ಕೆಲ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯುವುದು ಸಾಮಾನ್ಯ ಎನಿಸಿದೆ. ಇನ್ನು ಕೆಲವು ಆಟಗಾರರು ಮಹತ್ವದ ಸರಣಿಗೆ ಸಜ್ಜಾಗಲು ಬಯೋ ಬಬಲ್‌ನಿಂದ ಹಿಂದೆ ಸರಿದಿದ್ದನ್ನು ಈ ಹಿಂದೆಯೂ ನಾವೆಲ್ಲಾ ನೋಡಿದ್ದೇವೆ.
ಐಪಿಎಲ್‌ನಲ್ಲಿ ಜೇಸನ್ ರಾಯ್ ಅವರಿಗೆ ಗುಜರಾತ್ ಟೈಟಾನ್ಸ್ 4ನೇ ಫ್ರಾಂಚೈಸಿಯಾಗುವುದರಲ್ಲಿತ್ತು. ಈ ಮೊದಲು ಜೇಸನ್ ರಾಯ್, ಗುಜರಾತ್ ಲಯನ್ಸ್(2017), ಡೆಲ್ಲಿ ಡೇರ್‌ಡೆವಿಲ್ಸ್(2018) ಹಾಗೂ ಸನ್‌ರೈಸರ್ಸ್ ಹೈದರಾಬಾದ್(2021) ತಂಡವನ್ನು ಪ್ರತಿನಿಧಿಸಿದ್ದರು.
ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಜೇಸನ್ ರಾಯ್ ಇದುವರೆಗೂ ಒಟ್ಟು 13 ಐಪಿಎಲ್ ಪಂದ್ಯಗಳನ್ನಾಡಿದ್ದು, 29.90ರ ಬ್ಯಾಟಿಂಗ್ ಸರಾಸರಿಯಲ್ಲಿ 329 ರನ್ ಬಾರಿಸಿದ್ದಾರೆ. ಇದರಲ್ಲಿ ಕೆಲವು ಅರ್ಧಶತಕಗಳು ಸೇರಿವೆ.