IPL ಬೌಲಿಂಗ್ ಲೆಜೆಂಡ್ಸ್: ಟಾಪ್ 10 ಬೌಲರ್‌ಗಳಲ್ಲಿ 7 ಭಾರತೀಯರು, ಪ್ರತಿ 17 ಎಸೆತಕ್ಕೆ ವಿಕೆಟ್ ಉರುಳಿಸಿದ್ದಾರೆ ಚಹಲ್..!
ನವದೆಹಲಿ(ಮಾ.28): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. 59 ದಿನಗಳ ಕಾಲ ನಡೆಯಲಿರುವ ಮಹಾ ಸಂಗ್ರಾಮದಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಐಪಿಎಲ್‌ನಲ್ಲಿ ಕೆಲವು ಬೌಲರ್‌ಗಳು ಕಮಾಲ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್‌ನಿಂದ ಹಿಡಿದು, ಪ್ಲಾಟ್ ಪಿಚ್‌ನಲ್ಲೂ ವಿಕೆಟ್ ಕಬಳಿಸಿ ಮಿಂಚಿದ ಟಾಪ್ 10 ಬೌಲರ್‌ಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ
1. ಡ್ವೇನ್ ಬ್ರಾವೋ: 17ರ ಸ್ಟ್ರೈಕ್‌ರೇಟ್‌ನಲ್ಲಿ ವಿಕೆಟ್
ವೆಸ್ಟ್ ಇಂಡೀಸ್ ಬೌಲಿಂಗ್ ಆಲ್ರೌಂಡರ್ ಡ್ವೇನ್ ಬ್ರಾವೋ ತಮ್ಮ ಗೋಲ್ಡನ್ ಆರ್ಮ್ ಮೂಲಕ ಐಪಿಎಲ್ ತಂಡದ ಪಾಲಿಗೆ ಅದೃಷ್ಟದ ಬೌಲರ್ ಆಗಿ ಹೊರಹೊಮ್ಮಿದ್ದರು. ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸಿಕೊಡುತ್ತಿದ್ದ ಬ್ರಾವೋ, 161 ಪಂದ್ಯಗಳನ್ನಾಡಿ 183 ವಿಕೆಟ್ ಕಬಳಿಸಿದ್ದಾರೆ.
ಐಪಿಎಲ್‌ನಲ್ಲಿ ಬ್ರಾವೋ ತಾವು ಮಾಡಿದ ಬೌಲಿಂಗ್ ಪೈಕಿ 39.3% ಚುಕ್ಕಿ ಎಸೆತ ಹಾಕಿದ್ದಾರೆ. ಬ್ರಾವೋ ಪ್ರತಿ 17 ಎಸೆತಗಳಿಗೆ ಒಂದು ವಿಕೆಟ್ ಕಬಳಿಸಿದ್ದಾರೆ. ಬ್ರಾವೋ ಈಗಾಗಲೇ ಐಪಿಎಲ್‌ಗೆ ವಿದಾಯ ಘೋಷಿಸಿದ್ದಾರೆ.
2. ಲಸಿತ್ ಮಾಲಿಂಗ: ಡೆತ್ ಓವರ್ ಸ್ಪೆಷಲಿಸ್ಟ್
ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಲಸಿತ್ ಮಾಲಿಂಗ ತಮ್ಮ ಸೈಡ್ ಆರ್ಮ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್ ಕಾಡಿದ್ದರು. ಮುಂಬೈ ಇಂಡಿಯನ್ಸ್ ಪರ ಮಾಲಿಂಗ 122 ಪಂದ್ಯಗಳನ್ನಾಡಿ 170 ವಿಕೆಟ್ ಕಬಳಿಸಿದ್ದರು.
ಐಪಿಎಲ್ ವೃತ್ತಿಜೀವನದಲ್ಲಿ ಮಾಲಿಂಗ 48% ಡಾಟ್‌ಬಾಲ್ ಹಾಕಿದ್ದಾರೆ. ಮಾಲಿಂಗ ಪ್ರತಿ 20 ಎಸೆತಕ್ಕೆ ಒಂದರಂತೆ ವಿಕೆಟ್ ಕಬಳಿಸಿದ್ದಾರೆ. ಡೆತ್ ಒವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಮಾಲಿಂಗ, ಐಪಿಎಲ್‌ಗೆ ವಿದಾಯ ಹೇಳಿದ ಬಳಿಕ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
3. ಅಮಿತ್ ಮಿಶ್ರಾ: ಅತಿಹೆಚ್ಚು ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧಕ
ಭಾರತದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಈ ಮೊದಲು ಡೆಲ್ಲಿ ಹಾಗೂ ಹೈದರಾಬಾದ್ ಫ್ರಾಂಚೈಸಿ ಪರ ಕಣಕ್ಕಿಳಿದಿದ್ದರು, ಈ ಬಾರಿ ಅಮಿತ್ ಮಿಶ್ರಾ, ಲಖನೌ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ.
ಅಮಿತ್ ಮಿಶ್ರಾ 154 ಪಂದ್ಯಗಳನ್ನಾಡಿ 166 ವಿಕೆಟ್ ಕಬಳಿಸಿದ್ದಾರೆ. ಅಮಿತ್ ಮಿಶ್ರಾ, ಐಪಿಎಲ್‌ನಲ್ಲಿ ಅತಿಹೆಚ್ಚು(3 ಬಾರಿ) ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.
4. ಯುಜುವೇಂದ್ರ ಚಹಲ್: ಪ್ಲಾಟ್ ವಿಕೆಟ್‌ನಲ್ಲೂ ವಿಕೆಟ್ ಕಬಳಿಸುವ ಚತುರ
ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಚಾಣಾಕ್ಷ ಬೌಲರ್ ಆಗಿದ್ದು, ಪ್ಲಾಟ್ ಪಿಚ್‌ನಲ್ಲೂ ವಿಕೆಟ್ ಕಬಳಿಸುವ ಕ್ಷಮತೆ ಹೊಂದಿದ್ದಾರೆ. ಐಪಿಎಲ್‌ನ ಬಹುತೇಕ ಪಂದ್ಯಗಳನ್ನು ಆರ್‌ಸಿಬಿ ಪರ ಆಡಿರುವ ಚಹಲ್, ಇದೀಗ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಐಪಿಎಲ್‌ನಲ್ಲಿ ಚಹಲ್ ಕಬಳಿಸಿದ 166 ವಿಕೆಟ್‌ಗಳ ಪೈಕಿ 139 ವಿಕೆಟ್‌ಗಳನ್ನು ಆರ್‌ಸಿಬಿ ಪರ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್ ಸ್ನೇಹಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಹಲ್ 40 ಪಂದ್ಯಗಳನ್ನಾಡಿ 51 ವಿಕೆಟ್ ಉರುಳಿಸಿದ್ದಾರೆ. ಚಹಲ್ ಕೂಡಾ ಪ್ರತಿ 17 ಎಸೆತಗಳಿಗೆ ಒಂದು ವಿಕೆಟ್ ಪಡೆದಿದ್ದಾರೆ.
5. ಪೀಯೂಸ್ ಚಾವ್ಲಾ: ಆರಂಭದಲ್ಲಿ ಮಿಂಚಿದ್ದ ಲೆಗ್‌ಸ್ಪಿನ್ನರ್
2008ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಲೆಗ್ ಸ್ಪಿನ್ನರ್ ಚಾವ್ಲಾ, ಇದುವರೆಗೂ 157 ವಿಕೆಟ್ ಕಬಳಿಸಿ ಮಿಂಚಿದ್ದಾರೆ. 34 ವರ್ಷದ ಚಾವ್ಲಾ 2016ನೇ ಆವೃತ್ತಿಯವರೆಗೂ ಪ್ರತಿ ಐಪಿಎಲ್‌ನಲ್ಲಿ 11+ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ 2017ರ ಬಳಿಕ ಚಾವ್ಲಾ ಬೌಲಿಂಗ್ ಕೊಂಚ ಮೊನಚಾದಂತೆ ಕಂಡು ಬಂದಿದ್ದು, ಕಳೆದ ನಾಲ್ಕು ಆವೃತ್ತಿಗಳಿಂದ ಕೇವಲ 17 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಈ ಬಾರಿ ಚಾವ್ಲಾ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ.
6. ರವಿಚಂದ್ರನ್ ಅಶ್ವಿನ್: ಐಪಿಎಲ್‌ನ ಚತುರ ಸ್ಪಿನ್ನರ್
ಚೆನ್ನೈ ಸೂಪರ್ ಕಿಂಗ್ಸ್ ಮೂಲಕ ತಮ್ಮ ಐಪಿಎಲ್ ಜರ್ನಿ ಆರಂಭಿಸಿದ ರವಿಚಂದ್ರನ್ ಅಶ್ವಿನ್, ಇದುವರೆಗೂ ಐಪಿಎಲ್‌ನಲ್ಲಿ 157 ಬಲಿ ಪಡೆದಿದ್ದಾರೆ. ಅಶ್ವಿನ್, ಆಫ್‌ಸ್ಪಿನ್ ಜತೆಗೆ ಹಲವು ರೀತಿಯ ವೇರಿಯೇಷನ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್ ಕಾಡುವ ಚತುರ ಬೌಲರ್ ಎನಿಸಿಕೊಂಡಿದ್ದಾರೆ.
ಅಶ್ವಿನ್, ಆಫ್‌ಸ್ಪಿನ್ ಮಾತ್ರವಲ್ಲದೇ, ಟಾಪ್ ಸ್ಪಿನ್, ಕೇರಂ ಬೌಲ್, ಆರ್ಮ್ ಬೌಲ್, ಲೆಗ್ ಸ್ಪಿನ್ ಮಾಡುವ ಬುದ್ದಿವಂತ ಬೌಲರ್. ಅಶ್ವಿನ್ ಡೆಲ್ಲಿ, ಪಂಜಾಬ್ ಹಾಗೂ ಪುಣೆ ತಂಡವನ್ನು ಐಪಿಎಲ್‌ನಲ್ಲಿ ಪ್ರತಿನಿಧಿಸಿದ್ದು, ಇದೀಗ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯಲಿದ್ದಾರೆ.
7. ಭುವನೇಶ್ವರ್ ಕುಮಾರ್: ಸ್ವಿಂಗ್ ಕಿಂಗ್ ಭುವಿ ಹೆಸರಿನಲ್ಲಿದೆ 11 ಮೇಡನ್ ರೆಕಾರ್ಡ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರೈಮ್ ಬೌಲರ್ ಭುವನೇಶ್ವರ್ ಕುಮಾರ್, ತಮ್ಮ ಸ್ವಿಂಗ್ ಬೌಲಿಂಗ್ ಮೂಲಕವೇ ಎದುರಾಳಿ ಬ್ಯಾಟರ್‌ಗಳನ್ನು ಕಂಗೆಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಭುವಿ, ಐಪಿಎಲ್‌ನಲ್ಲಿ ಇದುವರೆಗೂ 11 ಮೇಡನ್ ಓವರ್ ಎಸೆದಿದ್ದು, ಪ್ರವೀಣ್ ಕುಮಾರ್ ಬಳಿಕ ಐಪಿಎಲ್‌ನಲ್ಲಿ ಅತಿಹೆಚ್ಚು ಮೇಡನ್ ಓವರ್ ಬೌಲಿಂಗ್ ಮಾಡಿದ ಆಟಗಾರ ಎನಿಸಿದ್ದಾರೆ.
ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 146 ಪಂದ್ಯಗಳನ್ನಾಡಿರುವ ಭುವನೇಶ್ವರ್ ಕುಮಾರ್, ಇದುವರೆಗೂ 1406 ಚುಕ್ಕಿ ಎಸೆತಗಳನ್ನು ಹಾಕಿದ್ದಾರೆ. ಅಲ್ಲದೇ ಕೇವಲ 7.30 ಸರಾಸರಿಯಲ್ಲಿ ರನ್ ನೀಡಿದ್ದಾರೆ.
8. ಸುನಿಲ್ ನರೈನ್: KKR ತಂಡದ ಮಿಸ್ಟ್ರಿ ಸ್ಪಿನ್ನರ್
ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕೆಲವೇ ಕೆಲವು ವಿದೇಶಿ ಬೌಲರ್‌ಗಳಲ್ಲಿ ಸುನಿಲ್ ನರೈನ್ ಕೂಡಾ ಒಬ್ಬರು. ನರೈನ್ ಕೂಡಾ ಆಫ್‌ಸ್ಪಿನ್ ಮಾತ್ರವಲ್ಲದೇ, ಆರ್ಮ್ ಬೌಲ್ ಹಾಗೂ ಕೇರಂ ಬೌಲ್‌ನಂತಹ ಅಸ್ತ್ರವೂ ಇದೆ.
2012ರಲ್ಲಿ ಐಪಿಎಲ್‌ಗೆ ಕೋಲ್ಕತಾ ನೈಟ್ ರೈಡರ್ಸ್ ಪರ ಪಾದಾರ್ಪಣೆ ಮಾಡಿದ್ದ ನರೈನ್, ಆ ಆವೃತ್ತಿಯಲ್ಲೇ 24 ವಿಕೆಟ್ ಕಬಳಿಸುವ ಮೂಲಕ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನರೈನ್ ಕೆಕೆಆರ್ ಪರ 148 ಪಂದ್ಯಗಳನ್ನಾಡಿ 152 ವಿಕೆಟ್ ಕಬಳಿಸಿದ್ದಾರೆ.
9. ಹರ್ಭಜನ್ ಸಿಂಗ್: 4 ಟ್ರೋಫಿ ಗೆದ್ದ ತಂಡದ ಸದಸ್ಯ
ಮುಂಬೈ ಇಂಡಿಯನ್ಸ್ ಮೂಲಕವೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಹರ್ಭಜನ್ ಸಿಂಗ್, ಒಟ್ಟು 150 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹರ್ಭಜನ್ ಸಿಂಗ್, 2013, 2015 ಹಾಗೂ 2017ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ತಂಡದ ಸದಸ್ಯರಾಗಿದ್ದರು. ಇನ್ನು 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆದಾಗ ಭಜ್ಜಿ, ಸಿಎಸ್‌ಕೆ ತಂಡದಲ್ಲಿದ್ದರು.
ಆಫ್‌ಸ್ಪಿನ್ನರ್ ಮಾತ್ರವಲ್ಲದೇ ಮಾರಕ ದೂಸ್ರಾ ಬೌಲಿಂಗ್ ಮೂಲಕವೂ ಎದುರಾಳಿ ಬ್ಯಾಟರ್ ಕಾಡುತ್ತಿದ್ದ ಹರ್ಭಜನ್ ಸಿಂಗ್, 2021ರಲ್ಲಿ ಕೆಕೆಆರ್ ಪರ 3 ಪಂದ್ಯಗಳನ್ನಾಡಿ ಐಪಿಎಲ್‌ಗೆ ವಿದಾಯ ಘೋಷಿಸಿದ್ದಾರೆ.
10. ಜಸ್ಪ್ರೀತ್ ಬುಮ್ರಾ: ಯಾರ್ಕರ್ & ಡೆತ್ ಓವರ್ ಸ್ಪೆಷಲಿಸ್ಟ್
ಮುಂಬೈ ಇಂಡಿಯನ್ಸ್ ಪರ ಲಸಿತ್ ಮಾಲಿಂಗ ಅವರ ಲೆಗಸಿಯನ್ನು ಮುಂದುವರೆಸುತ್ತಿರುವ ವೇಗಿಯೆಂದರೆ ಅದು ಜಸ್ಪ್ರೀತ್ ಬುಮ್ರಾ. ಬುಮ್ರಾ, ಮುಂಬೈ ಇಂಡಿಯನ್ಸ್ ಪರ 120 ಐಪಿಎಲ್ ಪಂದ್ಯಗಳನ್ನಾಡಿ 145 ವಿಕೆಟ್ ಕಬಳಿಸಿದ್ದಾರೆ.
ಡೆತ್ ಓವರ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ, 8 ಮೇಡನ್ ಓವರ್ ಮಾಡಿದ್ದು, ಪ್ರತಿ 19 ಎಸೆತಗಳಿಗೆ ಒಂದು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬುಮ್ರಾ, 16ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ