Ind vs WI ರವೀಂದ್ರ ಜಡೇಜಾ ಫಿಟ್ನೆಸ್ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ನಾಯಕ ಶಿಖರ್ ಧವನ್..!
ಟ್ರಿನಿಡ್ಯಾಡ್: ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಪೈಕಿ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರವಾದ ಇಂದು(ಜು.22) ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಲಭ್ಯತೆಯ ಕುರಿತಂತೆ ತಂಡದ ನಾಯಕ ಶಿಖರ್ ಧವನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಧವನ್ ಏನಂದ್ರೂ ಎನ್ನೋದನ್ನು ನೀವೇ ನೋಡಿ...

ಭಾರತ ಕ್ರಿಕೆಟ್ ತಂಡದ ಹಲವು ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ಕೆರಿಬಿಯನ್ನರ ಎದುರು 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
ವಿಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಗೆ ತಾರಾ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಅವರಂತಹ ಆಟಗಾರರು ಗೈರಾಗಿದ್ದಾರೆ. ಹೀಗಾಗಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾಗೆ ಕೆರಿಬಿಯನ್ನರ ನಾಡಿನಲ್ಲಿ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ.
ಇನ್ನು ವೆಸ್ಟ್ ಇಂಡೀಸ್ ಎದುರಿನ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನೆಡೆಯಾಗುವ ಸಾಧ್ಯತೆಯಿದ್ದು, ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಭಾರತ ಪರ ಮೊದಲ ಪಂದ್ಯಕ್ಕೆ ಅಲಭ್ಯರಾಗುವ ಸುಳಿವನ್ನು ಶಿಖರ್ ಧವನ್ ನೀಡಿದ್ದಾರೆ.
ರವೀಂದ್ರ ಜಡೇಜಾ ತಮ್ಮ ಬಲಗೈ ಕೊಂಚ ಗಾಯ ಮಾಡಿಕೊಂಡಿದ್ದು, ಮೊದಲ ಪಂದ್ಯಕ್ಕೆ ಅವರು ಲಭ್ಯರಾಗುವರೇ ಅಥವಾ ಇಲ್ಲವೇ ಎನ್ನುವುದರ ಕುರಿತಂತೆ ಸದ್ಯಕ್ಕಂತೂ ಯಾವುದೇ ಮಾಹಿತಿಯಿಲ್ಲ ಎಂದು ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಅವರು ಸಣ್ಣ ಇಂಜುರಿಯಾಗಿದೆ. ಅವರು ಮೊದಲ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿರಲಿದ್ದಾರೆಯೇ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ. ಇನ್ನೊಂದೆಡೆ ವೇಗದ ಬೌಲಿಂಗ್ ವಿಭಾಗದಲ್ಲಿ ಸಿರಾಜ್ ಹಾಗೂ ಪ್ರಸಿದ್ಧ್ ಒಳ್ಳೆಯ ಟಚ್‌ನಲ್ಲಿದ್ದಾರೆ. ಸ್ಪಿನ್ನರ್‌ಗಳಾಗಿ ಅಕ್ಷರ್ ಪಟೇಲ್ ಹಾಗೂ ಯುಜುವೇಂದ್ರ ಚಹಲ್ ಕೂಡಾ ಇದ್ದಾರೆ ಎಂದು ಧವನ್ ಹೇಳಿದ್ದಾರೆ.