Ind vs Eng: ಶತಕವಿಲ್ಲದೆ ಸಾವಿರ ದಿನ ಪೂರೈಸ್ತಾರಾ ವಿರಾಟ್ ಕೊಹ್ಲಿ?
ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯಕ್ಕೆ ಇಲ್ಲಿನ ಟ್ರೆಂಟ್‌ಬ್ರಿಡ್ಜ್ ಮೈದಾನ ಆತಿಥ್ಯವನ್ನು ವಹಿಸಿದ್ದು, ಎಲ್ಲರ ಚಿತ್ತ ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ. ಕಳೆದ ಕೆಲ ವರ್ಷ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗುತ್ತಾ ಬಂದಿರುವ ಕೊಹ್ಲಿ, ಇದೀಗ ಇಂಗ್ಲೆಂಡ್ ಎದುರಿನ ಮೂರನೇ ಪಂದ್ಯದಲ್ಲಾದರೂ ಶತಕ ಬಾರಿಸುತ್ತಾರಾ ಕಾದು ನೋಡಬೇಕಾಗಿದೆ. ಒಂದು ವೇಳೆ ಮೂರನೇ ಪಂದ್ಯದಲ್ಲಿ ಶತಕ ಸಿಡಿಸಲು ವಿಫಲವಾದರೇ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ 1000 ದಿನಗಳನ್ನು ಪೂರೈಸುವುದು ಖಚಿತವಾಗಲಿದೆ.

‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿ ಶತಕದ ಬರ ಎದುರಿಸುತ್ತಿದ್ದು ಭಾನುವಾರ ಟ್ರೆಂಟ್‌ಬ್ರಿಡ್ಜ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ 3ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸದೆ ಇದ್ದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ 1,000 ದಿನಗಳನ್ನು ಪೂರೈಸುವುದು ಖಚಿತವಾಗಲಿದೆ.
Image credit: Getty
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದು 2019ರ ನವೆಂಬರ್ 23ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ. ಶತಕವಿಲ್ಲದೆ ಇಲ್ಲಿಯವರೆಗೆ 966 ದಿನಗಳನ್ನು ಕಳೆದಿರುವ ಕೊಹ್ಲಿ, 3ನೇ ಏಕದಿನದ ಬಳಿಕ ವಿಶ್ರಾಂತಿಗೆ ತೆರಳಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಜುಲೈ 22ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಏಷ್ಯಾಕಪ್‌ನಲ್ಲಿ ಅವರು ಆಡುವ ಹೊತ್ತಿಗೆ 1000 ದಿನಗಳು ಕಳೆಯಲಿವೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 70 ಶತಕಗಳನ್ನು ವಿರಾಟ್ ದಾಖಲಿಸಿದ್ದಾರೆ. ಈ ಮೈಲಿಗಲ್ಲು ತಲುಪಲು ಅವರು 4,114 ದಿನಗಳನ್ನು ತೆಗೆದುಕೊಂಡಿದ್ದರು. ಆದರೆ 2019ರ ನವೆಂಬರ್‌ರಿಂದೀಚೆಗೆ ಕೊಹ್ಲಿ ಮೂರಂಕಿ ಮೊತ್ತ ದಾಖಲಿಸಲು ವಿಫಲವಾಗುತ್ತಲೇ ಬಂದಿದ್ದಾರೆ
ಇನ್ನು ರನ್ ಬರ ಅನುಭವಿಸುತ್ತಿರುವ ಕಾರಣ ಹಲವರ ಟೀಕೆಗಳ ನಡುವೆಯೂ ತಮಗೆ ಬೆಂಬಲ ವ್ಯಕ್ತಪಡಿಸಿದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಬಾಬರ್ ಅಜಂ, ಈ ಸಮಯವೂ ಕಳೆದು ಹೋಗಲಿದೆ. ದೃಢವಾಗಿ ನಿಲ್ಲಿ ಎಂದು ಕೊಹ್ಲಿ ಜತೆಗಿರುವ ಫೋಟೊವನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದರು.
Image Credit: Getty Images
ಇದೀಗ ಬಾಬರ್ ಅಜಂ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಧನ್ಯವಾದಗಳು. ನೀವೂ ಸದಾ ಕಾಲ ಮಿಂಚುತ್ತಲೇ ಇರಿ, ನಿಮಗೆ ಒಳ್ಳೆಯದಾಗಲಿ ಎಂದು ಬರೆಯುವ ಮೂಲಕ ಪಾಕ್ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.