ಚೆಸ್ & ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಏಕೈಕ ಪ್ರತಿಭೆ ಯುಜುವೇಂದ್ರ ಚಹಲ್
ಬೆಂಗಳೂರು: ಟೀಂ ಇಂಡಿಯಾ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಇಂದು(23/7/20) 30ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಹರ್ಭಜನ್ ಸಿಂಗ್ ಹಾಗೂ ಅಶ್ವಿನ್ ಅನುಪಸ್ಥಿತಿಯಲ್ಲಿ ಚಹಲ್ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ವಿದೇಶಿ ನೆಲದಲ್ಲೂ ಭರ್ಜರಿ ಪ್ರದರ್ಶನ ತೋರುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ತೆಳ್ಳನೆಯ ಮೈಕಟ್ಟು ಹೊಂದಿರುವ ಚಹಲ್ ಟೀಂ ಇಂಡಿಯಾ ಕ್ರಿಕೆಟಿಗನಾಗಿ ಗುರುತಿಸಿಕೊಳ್ಳುವುದಕ್ಕಿಂತ ಮುಂಚೆ ಚೆಸ್ ಆಟಗಾರನಾಗಿದ್ದರು. ಚೆಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಚೆಸ್ ಹಾಗೂ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಏಕೈಕ ಆಟಗಾರನೆಂದರೆ ಅದು ಯುಜುವೇಂದ್ರ ಚಹಲ್. RCB ಸ್ಪಿನ್ನರ್ ಚೆಸ್ ಬಿಟ್ಟು ಕ್ರಿಕೆಟ್‌ಗೆ ಬರಲು ಕಾರಣವೇನು? ಚಹಲ್ ಕುರಿತಾದ ಹತ್ತು ಹಲವು ಸಂಗತಿಗಳ ಮೇಲೆ ಸುವರ್ಣ ನ್ಯೂಸ್.ಕಾಂ ಬೆಳಕು ಚೆಲ್ಲಿದೆ ನೋಡಿ.
1. ಯುಜುವೇಂದ್ರ ಸಿಂಗ್ ಚಹಲ್ 23 ಜುಲೈ 1990ರಲ್ಲಿ ಹರ್ಯಾಣದ ಜಿಂದ್ ಜಿಲ್ಲೆಯಲ್ಲಿ ಜನಿಸಿದರು.
2. ಚಹಲ್ 7 ವರ್ಷದವರಿದ್ದಾಗಲೇ ಚೆಸ್ ಆಡಲು ಆರಂಭಿಸಿದರು. ಹಲವು ವಯೋಮಾನಗಳ ವಿಭಾಗದಲ್ಲಿ ಚಹಲ್ ದೇಶವನ್ನು ಪ್ರತಿನಿಧಿಸಿದ್ದಾರೆ.
3. ಯುಜಿ 12 ವರ್ಷದೊಳಗಿನವರ ನ್ಯಾಷನಲ್ ಚಿಲ್ಡ್ರೆನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ 2002ರಲ್ಲಿ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಟಾಪ್ 20 ಯಲ್ಲಿ ಸ್ಥಾನ ಪಡೆದಿದ್ದರು.ಇದರ ಜತೆಗೆ ಅಂಡರ್ 16 ವಿಭಾಗದಲ್ಲಿ ಗ್ರೀಸ್‌ನಲ್ಲಿ ನಡೆದ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು.
4. ಚಹಲ್‌ಗೆ ಸರಿಯಾದ ಸ್ಪಾನ್ಸರ್‌ಶಿಪ್ ಸಿಗದ ಕಾರಣ ಚೆಸ್ ಕ್ರೀಡೆ ತೊರೆದು ಕ್ರಿಕೆಟ್‌ನತ್ತ ಮುಖ ಮಾಡಬೇಕಾಗಿ ಬಂತು. ಈಗಲು ಹವ್ಯಾಸಕ್ಕೆ ಚಹಲ್ ಚೆಸ್ ಆಡುತ್ತಾರೆ.
5. ಚಹಲ್ ಸ್ಪಿನ್ನರ್ ಆಗುವುದಕ್ಕಿಂತ ಮುಂಚೆ ಮದ್ಯಮ ವೇಗದ ಬೌಲರ್ ಆಗಲು ಯತ್ನಿಸಿದ್ದರು. ಆದರೆ ಲೆಗ್ ಸ್ಪಿನ್‌ನತ್ತ ಗಮನ ಹರಿಸಿ ಯಶಸ್ಸು ಕಂಡರು.
6. ಚೆಸ್ ಹಾಗೂ ಕ್ರಿಕೆಟ್ ಜತಗೆ ಫುಟ್ಬಾಲ್ ಕ್ರೀಡೆಯನ್ನು ಚಹಲ್ ಇಷ್ಟಪಡುತ್ತಾರೆ. ರಿಯಲ್ ಮ್ಯಾಡ್ರೀಡ್ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಅವರ ದೊಡ್ಡ ಅಭಿಮಾನಿ ಚಹಲ್.
7. ಚಹಲ್ ಅವರನ್ನು ಐಪಿಎಲ್‌ನಲ್ಲಿ 2011ರಲ್ಲಿ ಮೊದಲು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಆದರೆ ಐಪಿಎಲ್‌ನಲ್ಲಿ ಚಹಲ್ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಗಲಿಲ್ಲ. ಆದರೆ ಚಾಂಪಿಯನ್ಸ್ ಲೀಗ್ ಟಿ20ಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಚಹಲ್‌ಗೆ ಆಡಲು ಅವಕಾಶ ಸಿಕ್ಕಿತ್ತು. ರಾಯಲ್ ಚಾಲೆಂಜರ್ಸ್ ವಿರುದ್ಧ ಮೂರು ಓವರ್ ಬೌಲಿಂಗ್ ಮಾಡಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದಿದ್ದರು.
8. ಚಹಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2014ರಲ್ಲಿ ಖರೀದಿಸಿತು. ಆ ಬಳಿಕ RCB ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಮೋಸ್ಟ್ ವ್ಯಾಲ್ಯುಯೇಬಲ್ ಆಟಗಾರ ಪ್ರಶಸ್ತಿಗೂ ಚಹಲ್ ಭಾಜನರಾಗಿದ್ದರು.
9. ಲೆಗ್ ಸ್ಪಿನ್ನರ್ ಚಹಲ್‌ಗೆ ತಂದೆಯೇ ಮೊದಲ ರೋಲ್ ಮಾಡೆಲ್ ಅಂತೆ. ಬಳಿಕ ಕ್ರಿಕೆಟ್‌ನಲ್ಲಿ ಲೆಗ್ ಸ್ಪಿನ್ ದಂತಕತೆ ಶೇನ್ ವಾರ್ನ್‌ಗೆ ಮಾರು ಹೋಗಿದ್ದಾರಂತೆ.
10. ಐಪಿಎಲ್‌ನಲ್ಲಿ ತೋರಿದ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ 2016ರಲ್ಲಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟರು. ಇದೀಗ ಚಹಲ್ ಸೀಮಿತ ಓವರ್‌ಗಳ ತಂಡದಲ್ಲಿ ಕೊಹ್ಲಿಯ ಮೊದಲ ಆಯ್ಕೆಯಾಗಿ ಗುರುತಿಸಿಕೊಂಡಿದ್ದಾರೆ.