ಅನಿಲ್ ಅಂಬಾನಿಯ 3 ಸಾವಿರ ಕೋಟಿ ಆಸ್ತಿ ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಅವರ 3,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಅನಿಲ್ ಅಂಬಾನಿ ಒಡೆತನದ 3,000 ಕೋಟಿ ರೂ
ಉದ್ಯಮಿ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಸಮೂಹ ಸಂಸ್ಥೆ ವಿರುದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಗದಿಂದ ಸಾಗುತ್ತಿದೆ. ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅನಿಲ್ ಅಂಬಾನಿ ಒಡೆತನದ 3,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಯಾವೆಲ್ಲಾ ಆಸ್ತಿ ವಶಕ್ಕೆ?
ಮುಂಬೈನ ಪಾಲಿ ಹಿಲ್‌ನಲ್ಲಿರುವ ಅನಿಲ್ ಅಂಬಾನಿ ನಿವಾಸ, ದೆಹಲಿಯ ರಿಲಯನ್ಸ್ ಕಮ್ಯುನಿಕೇಶನ್ ಮತ್ತು ರಿಲಯನ್ಸ್ ಇಂಫ್ರಾಸ್ಟ್ರಕ್ಚರ್ ಲಿಮಿಟೆಡ್, ನೊಯ್ದಾ, ಗೋವಾ, ಪುಣೆ, ಹೈದರಾಬಾದ್, ಮುಂಬೈ ಮತ್ತು ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿರುವ ಫ್ಲ್ಯಾಟ್, ಕಚೇರಿ ಮತ್ತು ನಿವೇಶನಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆಯಲಿದೆ.
ದೆಹಲಿಯ ಅಂಬಾನಿ ಕಚೇರಿ
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ದೆಹಲಿಯ ರಂಜಿತ್ ಹೋಟೆಲ್‌ನಲ್ಲಿರುವ ಅಂಬಾನಿ ಪ್ರಧಾನ ಕಚೇರಿಯನ್ನು ಸಹ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡ ಆಸ್ತಿಗಳಲ್ಲಿ ಒಂದಾಗಿದೆ. ದೆಹಲಿಯ ಮಹಾರಾಜ ರಂಜಿತ್ ಸಿಂಗ್ ಮಾರ್ಗದಲ್ಲಿರುವ ಈ ಹೋಟೆಲ್ ಮೂರು ಎಕರೆ ವಿಸ್ತೀರ್ಣದಲ್ಲಿದೆ. 20 ಸಾವಿರ ಕೋಟಿಗೂ ಅಧಿಕ ಬ್ಯಾಂಕ್ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅನಿಲ್ ಅಂಬಾನಿ ಸಿಲುಕಿದ್ದಾರೆ.
ಅಶೋಕ್ ಕುಮಾರ್ ಅರೆಸ್ಟ್
ಅಕ್ಟೋಬರ್‌ನಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಲಿಮಿಟಡ್ ಸಿಎಫ್ಒ ಹಾಗೂ ಕಾರ್ಯಾಕಾರಿ ನಿರ್ದೇಶಕ ಅಶೋಕ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. 2023ರ ನಕಲಿ ಗ್ಯಾರೆಂಟಿ ಪ್ರಕರಣದಲ್ಲಿ ಅಶೋಕ್ ಬಂಧನವಾಗಿತ್ತು. ಅನಿಲ್ ಅಂಬಾನಿ ಉದ್ಯಮಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಇಡಿ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: ರಿಲಯನ್ಸ್ ಕಂಪನಿ ವಿರುದ್ಧ ಬ್ಯಾಂಕ್ ಆಫ್ ಬರೋಡಾದಿಂದ ವಂಚನೆ ಆರೋಪ
ನಕಲಿ ಬ್ಯಾಂಕ್ ಗ್ಯಾರೆಂಟಿ, ಶೇ. 8 ರಷ್ಟು ಕಮಿಷನ್ ಆರೋಪ
ರಿಲಯನ್ಸ್ ಪವರ್ ಲಿಮಿಟೆಡ್ ಬ್ಯಾಂಕ್‌ನಿಂದ ಹಣ ಪಡೆಯಲು ನಕಲಿ ಬ್ಯಾಂಕ್ ಗ್ಯಾರೆಂಟಿ ಹಾಗೂ ಶೇಕಡಾ 8 ರಷ್ಟು ಕಮಿಷನ್ ಆರೋಪಗಳು ಕೇಳಿಬಂದಿತ್ತು. ಇದಕ್ಕಾಗಿ ನಕಲಿ ಬಿಲ್‌ಗಳನ್ನು ಸಲ್ಲಿಕೆ ಮಾಡಲಾಗಿತ್ತು. ಈ ಸಮಯದಲ್ಲಿನ ಬ್ಯಾಂಕ್ ವಹಿವಾಟುಗಳು ಹಲವು ಅನುಮಾನ ಮೂಡಿಸಿತ್ತು. ಸಾವಿರಾರು ಕೋಟಿ ರೂಪಾಯಿ ಹಣದ ವ್ಯವಹಾರ ಅಕ್ರಮವಾಗಿ ನಡೆದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಶಾಕ್, 2,796 ಕೋಟಿ ರೂಪಾಯಿ ಅಕ್ರಮ ಕುರಿತು ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ