100 ರೂ ತರಕಾರಿ ಖರೀದಿಸಲು 75 ಲಕ್ಷ ರೂಪಾಯಿ ಬೈಕ್‌ನಲ್ಲಿ ಬಂದ ಮಾಲೀಕ!
ತರಕಾರಿ, ಹಣ್ಣು ಸೇರಿದಂತೆ ಕಲ ವಸ್ತುಗಳನ್ನು ಖರೀದಿಸಲು ವಿಶ್ವದ ಅತ್ಯಂತ ದುಬಾರಿ ಬೈಕ್ ಹೊಂಡಾ ಗೋಲ್ಡ್ ವಿಂಗ್ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳೋ ಮೂಲಕ ಭಾರಿ ಸದ್ದು ಮಾಡಿದೆ. ಲೋಕಲ್ ಮಾರ್ಕೆಟ್‌ನಲ್ಲಿ ವಸ್ತುಗಳ ಖರೀದಿಗೆ 75 ಲಕ್ಷ ರೂಪಾಯಿ ಬೈಕ್ ಕಂಡ ಸ್ಥಳೀಯರಿಗೆ ಅಚ್ಚರಿಯಾಗಿದೆ.
ಹೋಂಡಾ ಗೋಲ್ಡ್ ವಿಂಗ್ ಬೈಕ್ ಭಾರತದಲ್ಲಿ ಲಭ್ಯವಿಲ್ಲ. ಕೆಲವೇ ಕೆಲವು ದೇಶಗಳಲ್ಲಿ ಈ ಬೈಕ್ ಲಭ್ಯವಿದೆ. ಕಾರಣ ಇದು ವಿಶ್ವದ ಅತೀ ದುಬಾರಿ ಬೈಕ್ ಆಗಿದೆ. ಈ ಬೈಕ್ ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ ದಿನ ನಿತ್ಯ ಬಳಕೆಗೆ ಉಪಯೋಗವಾಗಿರುವುದೇ ಸುದ್ದಿಯಾಗಿದೆ.
ಕೇರಳದ ಬಾಬು ಜಾನ್‌ಗೆ ಸೇರಿದ ಈ ಹೋಂಡಾ ಗೋಲ್ಡ್ ವಿಂಗ್ ಬೈಕ್ ಬೆಲೆ ಸರಿಸುಮಾರು 75 ಲಕ್ಷ ರೂಪಾಯಿ. NRI ಆಗಿರುವ ಬಾಬು ಜಾನ್ ತವರಿಗೆ ಆಗಮಿಸಿ ಈ ಬೈಕ್‌ನ್ನೇ ಉಪಯೋಗಿಸುತ್ತಿದ್ದಾರೆ.
ಇತ್ತೀಚೆಗೆ ಕೇರಳದ ಸ್ಥಳೀಯ ಮಾರುಕಟ್ಟೆಗೆ ತರಕಾರಿ, ಹಣ್ಣು ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಲು ಈ ಗೋಲ್ಡ್ ವಿಂಗ್ ಬೈಕ್ ಮೂಲಕ ತೆರಳಿದ್ದಾರೆ.
100 ರೂಪಾಯಿ ತರಕಾರಿ ಖರೀದಿಸಲು 75 ಲಕ್ಷ ರೂಪಾಯಿ ಬೈಕ್‌ನ್ನು ಸ್ಥಳೀಯ ಮಾರುಕಟ್ಟೆ ತೆಗೆದುಕೊಂಡು ಬಂದಿದ್ದಾರೆ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಈ ಹೊಂಡಾ ಗೋಲ್ಡ್ ವಿಂಗ್ ಬೈಕ್ ಹಿಂದೆ ರೋಚಕ ಕತೆ ಇದೆ. ಈ ಬೈಕ್ ಭಾರತಕ್ಕೆ ಆಮದು ಮಾಡಿಕೊಂಡ ಹಾಗೂ ಬಳಿಕ ನಡೆದ ಕಾನೂನು ಹೋರಾಟವನ್ನು ಈ ಹಿಂದೆ ಬಾಬು ಜಾನ್ ಅವರೇ ನೋವಿನಿಂದ ಹೇಳಿಕೊಂಡಿದ್ದರು.
ದುಬೈನಲ್ಲಿ ಉದ್ಯಮಿಯಾಗಿರುವ ಕೇರಳ ಮೂಲದ ಬಾಬು ಜಾನ್, ಅರಬ್ ರಾಷ್ಟ್ರದಿಂದ ಬೈಕ್ ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಂಡಿದ್ದಾರೆ.
ಈ ಬೈಕ್ ಖರೀದಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೂ ಬಾಬು ಜಾನ್ ಪಾತ್ರರಾಗಿದ್ದಾರೆ. ಆದರೆ ಭಾರತಕ್ಕೆ ಆಮದು ಮಾಡಿಕೊಂಡ ಈ ಗೋಲ್ಡ್ ವಿಂಗ್ ಬೈಕ್ ನೋಡಿದ ಕಸ್ಟಮ್ ಅಧಿಕಾರಿಗಳು ಬೆರಗಾಗಿದ್ದಾರೆ. ಇದರ ಬೆಲೆ ತಿಳಿದು ಮಾಲೀಕನಿಂದ ಕಸ್ಟಮ್ ಡ್ಯೂಟಿ ಹೆಸರಲ್ಲಿ ಒಂದಷ್ಟ ಹಣ ಪೀಕಲು ಮುಂದಾಗಿದ್ದಾರೆ.
ಕೇರಳದ ಕಸ್ಟಮ್ ಅಧಿಕಾರಿಗಳು ಆಮದುಗೊಂಡ ಬೈಕ್ ಹಿಡಿದಿಟ್ಟು ಬರೋಬ್ಬರಿ 42 ಲಕ್ಷ ರೂಪಾಯಿ ಆಮದು ಸುಂಕ ಕಟ್ಟುವಂತೆ ಸೂಚಿಸಿದ್ದಾರೆ. ಹೀಗಾಗಿ ಬಾಬು ಜಾನ್ ಕೋರ್ಟ್ ಮೆಟ್ಟಿಲೇರಿದ್ದರು. ಸತತ 14 ತಿಂಗಳು ಕಾನೂನು ಹೋರಾಟ ಮಾಡಿ ಬೈಕ್ ಬಿಡಿಸಿಕೊಂಡಿದ್ದರು. ಆದರೂ 24 ಲಕ್ಷ ರೂಪಾಯಿ ಆಮದು ಸುಂಕ ಪಾವತಿಸಬೇಕಾಯಿತು.
ಕಸ್ಟಮ್ ಅಧಿಕಾರಿಗಳು ಚಾಟಿ ಬೀಸಿದ ಕೋರ್ಟ್ ತಕ್ಷಣವೇ ಬೈಕ್ ಬಿಡುಗಡೆ ಮಾಡುವಂತೆ ಸೂಚಿಸಿತು. ಆದರೆ 14 ತಿಂಗಳು ಪೊಲೀಸ್ ವಶದಲ್ಲಿದ್ದ ಬೈಕ್ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ಈ ಬೈಕ್ ರಿಪೇರಿ ಮಾಡಲು ಬಾಬು ಜಾನ್ ದುಬೈನಿಂದ ಮೆಕಾನಿಕ್‌ನ್ನು ಕೇರಳಕ್ಕೆ ಕರೆಯಿಸಿಕೊಂಡು ಸರಿ ಮಾಡಿದ್ದರು.