ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆ ವಿಐಪಿ ಪೇಷಂಟ್ ವಾರ್ಡ್‌ನಲ್ಲಿ ಬೆಂಕಿ: ಮೂವರಿಗೆ ಗಾಯ!
ಬೆಂಗಳೂರು (ಸೆ.19): ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಒಂದಾಗಿರುವ ಎಂ.ಎಸ್. ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ಬೆಂಕಿ ಅವಘಡ ಸಂಭವಿಸುತ್ತಿದ್ದಂತೆಯೇ ಆಸ್ಪತ್ರೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಎಲ್ಲ ರೋಗಿಗಳನ್ನು ಬೇರೆಡೆ ಶಿಫ್ಟ್ ಮಾಡಲಾಗಿದೆ.
ಸಿಲಿಕಾನ್ ಸಿಟಿ ಪ್ರಸಿದ್ಧ ಆಸ್ಪತ್ರೆಯಾಗಿರುವ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಆಸ್ಪತ್ರೆಯ ಹೃದಯ ರೋಗ ಯುನಿಟ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಯಾವ ಕಾರಣಕ್ಕೆ ಬೆಂಕಿ ಬಿದ್ದಿದೆ ಎನ್ನುವುದರ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆಯಲ್ಲಿ ಒಟ್ಟು ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.
ಆಸ್ಪತ್ರೆಯ ಫೈಯರ್ ಸೇಫ್ಟಿ ಮ್ಯಾನೇಜ್ಮೆಂಟ್‌ನಿಂದ ಬೆಂಕಿ ನಂದಿರೋ ಕಾರ್ಯ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿದ್ದರಿಂದ ಸ್ಥಳಕ್ಕೆ ಅಗ್ನಿಶಾಮಕ ವಾಹನವನ್ನೂ ಕರೆಸಲಾಗಿದೆ. ಅಗ್ನಿ ಶಾಮಕದಳದ ವಾಹನದಿಂದ ಬೆಂಕಿ ನಂದಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗಿದೆ.
ಎಸಿ ಶಾರ್ಟ್ ಸರ್ಕೂಟ್ ನಿಂದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದಾಗಿ ಹೇಳಲಾಗುತ್ತಿದೆ. ಆರಂಭದಲ್ಲಿ ಮೂರನೇ ಮಹಡಿಯ ಒಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಇತರೆ ಮಹಡಿಗಳಿಗೂ ಹರಡಿಕೊಂಡಿದೆ. ಇದರಿಂದಾಗಿ ಆಸ್ಪತ್ರೆಯ ಮೂರನೇ ಮಹಡಿಯ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.
ಒಂದು ಅಗ್ನಿಶಾಮಕ ದಳದ ವಾಹನದಿಂದ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಮತ್ತೊಂದು ವಾಹನವನ್ನು ತರಿಸಿಕೊಳ್ಳಲಾಗಿದೆ. ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ. ಇನ್ನು ಆಸ್ತ್ರೆಯಲ್ಲಿದ್ದ ರೋಗಿಗಳನ್ನು ಪಕ್ಕದ ಆಸ್ಪತ್ರೆಯ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದ್ದು, ರೋಗಿಗಳ ಸಂಬಂಧಿಕರು ಭಯಪಡುವ ಅಗತ್ಯವಿಲ್ಲ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಮಾಹಿತಿ ನೀಡಿದೆ.
ಎಂ.ಎಸ್.ರಾಮಯ್ಯ ಆಸ್ಪತ್ರೆ ಸಿಇಓ ಶ್ರೀನಿವಾಸ್ ಮೂರ್ತಿ ಮಾತನಾಡಿ, ಮಧ್ಯಾಹ್ನ 1.15 ಕ್ಕೆ ಕಾರ್ಡಿಕ್ ಯುನಿಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಎಲ್ಲಾ ಸಿಬ್ಬಂದಿ ರೋಗಿಗಳನ್ನ ಶಿಫ್ಟ್ ಮಾಡಿಲಾಗಿದೆ. ಆಸ್ಪತ್ರೆಯಲ್ಲಿ ಇದ್ದ ಅಗ್ನಿಶಾಮಕ ಪರಿಕರಿಗಳಿಂದ ಬೆಂಕಿ ನಂದಿಸಿಸುವ ಪ್ರಯತ್ನ ಆಗಿದೆ. ಹೀಗಾಗಿ ಅರ್ಧ ಆಸ್ಪತ್ರೆಯ ಅರ್ಧದಷ್ಟು ಭಾಗದಲ್ಲಿ ವಿದ್ಯುತ್ ಸಂಪರ್ಕ ನಿಲ್ಲಿಸಿ, ರೋಗಿಗಳನ್ನ ಶಿಫ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನಮ್ಮ ಆಸ್ಪತ್ರೆಯಲ್ಲಿ ಬೆಂಕಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸೇಫ್ಟಿ ಮೆಜರ್ ತೆಗೆದುಕೊಳ್ಳಲಾಗಿತ್ತು. ಈ ಬೆಂಕಿ ಅವಘಡ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ ಎನ್ನಿಸುತ್ತಿದೆ. ಇಲ್ಲಿ ಬಹುತೇಕ ವಿಐಪಿ ರೋಗಿಗಳೇ ಹೆಚ್ಚಾಗಿದ್ದು, ಯಾರಿಗೂ ಏನೂ ತೊಂದರೆಯಾಗಿಲ್ಲ. ಬೆಂಕಿ ಕಾಣಿಸಿಕೊಂಡ ಬ್ಲಾಕ್ ನಲ್ಲಿದ್ದ ಎಲ್ಲಾ ರೋಗಿಗಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ ಎಂದು ಆಸ್ಪತ್ರೆ ಸಿಇಓ ಶ್ರೀನಿವಾಸ್ ಮೂರ್ತಿ ತಿಳಿಸಿದರು.