- Home
- Karnataka Districts
- Bengaluru Rural
- ಹಿಂದೆ ನೋಡಬೇಡ...ನಂದಿಹಿಲ್ಸ್ ರಸ್ತೆಯಲ್ಲಿ ಬೈಕ್ ಸವಾರನಿಗೆ ಕೇಳಿಸಿದ ಆ ನಿಗೂಢ ಧ್ವನಿ ಯಾರದ್ದು?
ಹಿಂದೆ ನೋಡಬೇಡ...ನಂದಿಹಿಲ್ಸ್ ರಸ್ತೆಯಲ್ಲಿ ಬೈಕ್ ಸವಾರನಿಗೆ ಕೇಳಿಸಿದ ಆ ನಿಗೂಢ ಧ್ವನಿ ಯಾರದ್ದು?
ನಂದಿಘಾಟ್‌ನಲ್ಲಿ ಮಧ್ಯರಾತ್ರಿ ಬೈಕ್ ರೈಡ್ ವೇಳೆ ಅಪರಿಚಿತ ಕರೆಗಳು, ಭಯಾನಕ ಅನುಭವಗಳು ಮತ್ತು ಮೃತ ಮಾಜಿ ಪ್ರೇಯಸಿಯ ಆತ್ಮ ಕಾಡಿದೆಯೆಂಬ ವೈರಲ್ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ನಂದಿಘಾಟ್ ರಸ್ತೆಯಲ್ಲಿ ದೆವ್ವ
ಕರ್ನಾಟಕದ ನಂದಿ ಹಿಲ್ಸ್ ಸಮೀಪದ ನಂದಿಘಾಟ್ ರಸ್ತೆಯಲ್ಲಿ 2025ರಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಮಧ್ಯರಾತ್ರಿ ಸ್ನೇಹಿತನ ಮನೆಯಿಂದ ಬೈಕ್‌ನಲ್ಲಿ ಮನೆಗೆ ಹೊರಟಿದ್ದ ಸುಪ್ರೀತ್‌ಗೆ ಅಪರಿಚಿತ ಸಂಖ್ಯೆಯಿಂದ ನಿರಂತರ ಕರೆಗಳು ಬರಲು ಆರಂಭವಾಗುತ್ತವೆ. ಮೊದಲಿಗೆ ಕರೆ ಸ್ವೀಕರಿಸಿದಾಗ ಯಾವುದೇ ಉತ್ತರ ಸಿಗಲಿಲ್ಲ. ಆದರೆ ಕೆಲವೇ ಕ್ಷಣಗಳಲ್ಲಿ ಕರೆ ಬಂದಾಗ ಮಹಿಳೆಯ ಧ್ವನಿಯಲ್ಲಿ "ಹಿಂದೆ ನೋಡಬೇಡ..." ಎಂಬ ಮಾತು ಕೇಳಿಬಂದಿದೆ.
ಕತ್ತಲೆಯ ನಡುವೆ ಹೆಜ್ಜೆಗಳ ಶಬ್ದ
ಭಯಗೊಂಡ ಸುಪ್ರೀತ್ ಕನ್ನಡಿಯಲ್ಲಿ ಹಿಂದೆ ನೋಡಿದಾಗ ಬೈಕ್‌ನ ಹಿಂಬದಿ ಸೀಟಿನಲ್ಲಿ ಯಾರೋ ಕುಳಿತಿರುವಂತೆ ನೆರಳು ಕಾಣಿಸಿಕೊಂಡಿತ್ತಂತೆ. ಆತ ತಿರುಗಿ ನೋಡಿದರೂ ಯಾರೂ ಇರಲಿಲ್ಲ. ಆದರೆ ಅಪರಿಚಿತ ಸಂಖ್ಯೆಯಿಂದ ಕರೆಗಳು ನಿಲ್ಲಲಿಲ್ಲ. ಕೆಲವೇ ಹೊತ್ತಿನಲ್ಲಿ ಬೈಕ್ ಕೂಡ ಏಕಾಏಕಿ ನಿಂತುಹೋಗಿದ್ದು, ಕತ್ತಲೆಯ ನಡುವೆ ಹೆಜ್ಜೆಗಳ ಶಬ್ದ ಕೇಳಿಸತೊಡಗಿದೆಯಂತೆ.
ಮತ್ತೊಮ್ಮೆ ಕರೆ ಸ್ವೀಕರಿಸಿದಾಗ "ನಾನು ಹೇಳಿದ್ದಲ್ಲವೇ... ಹಿಂದೆ ನೋಡಬೇಡ. ನಾನು ನಿನ್ನ ಹಿಂದೆ ಕುಳಿತಿದ್ದೇನೆ" ಎಂಬ ಧ್ವನಿ ಕೇಳಿಬಂದಿದೆ ಎನ್ನಲಾಗಿದೆ. ಇದರಿಂದ ಆತ ಭಯದಿಂದ ವೇಗವಾಗಿ ಬೈಕ್ ಚಲಾಯಿಸಲು ಆರಂಭಿಸಿದ್ದಾನೆ. ಇದೇ ವೇಳೆ ತನ್ನ ಭುಜದ ಮೇಲೆ ಯಾರೋ ಕೈ ಇಟ್ಟಂತೆ, ಬೈಕ್‌ನಲ್ಲಿ ಹೆಚ್ಚುವರಿ ತೂಕ ಇದ್ದಂತೆ ಹಾಗೂ ರಿಯರ್ ವ್ಯೂ ಮಿರರ್‌ಗಳು ತಾವಾಗಿಯೇ ಕೆಳಕ್ಕೆ ತಿರುಗಿದಂತೆ ಅನುಭವವಾಗಿದೆ ಎಂದು ಹೇಳಲಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತನ್ನ ಮಾಜಿ ಪ್ರೇಯಸಿ
ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಪ್ರೀತ್‌ಗೆ ತಲೆ ಸುತ್ತಿ ಪ್ರಜ್ಞೆ ತಪ್ಪಿದ್ದು, ಬಳಿಕ ಆಸ್ಪತ್ರೆಯಲ್ಲಿ ಕಣ್ಣು ತೆರೆದಿದ್ದಾನೆ. ಆದರೆ ಆಸ್ಪತ್ರೆಯಲ್ಲಿಯೂ ಅದೇ ಅಪರಿಚಿತ ಸಂಖ್ಯೆಯಿಂದ ನಿರಂತರ ಕರೆಗಳು ಬರುತ್ತಿದ್ದವೆಯಂತೆ. ಮನೆಗೆ ಹಿಂತಿರುಗಿದ ಬಳಿಕ ತಾಯಿಯ ಸಲಹೆಯಂತೆ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದಾಗ, ಕೆಲವು ದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತನ್ನ ಮಾಜಿ ಪ್ರೇಯಸಿಯ ಆತ್ಮವೇ ತನ್ನನ್ನು ಕಾಡುತ್ತಿದೆ ಎಂಬ ವಿವರಣೆ ಸಿಕ್ಕಿತ್ತೆಂದು ಕಥೆಯಲ್ಲಿ ಹೇಳಲಾಗಿದೆ.
ಪೂಜೆ ಹಾಗೂ ಹವನ
ಅದರ ನಂತರ ವಿಶೇಷ ಪೂಜೆ ಹಾಗೂ ಹವನ ನಡೆಸಿ, ಆಕೆಗೆ ಸಂಬಂಧಿಸಿದ ವಸ್ತುಗಳನ್ನು ವಿಸರ್ಜಿಸಿದ ಬಳಿಕ ಕರೆಗಳು ಮತ್ತು ವಿಚಿತ್ರ ಘಟನೆಗಳು ಸಂಪೂರ್ಣ ನಿಂತವು ಎಂದು ಸುಪ್ರೀತ್ ಹೇಳಿಕೊಂಡಿದ್ದಾನೆ.
ಗಮನಿಸಿ: ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿರುವ ಮಾಹಿತಿಯಾಗಿದ್ದು, ಈ ಸುದ್ದಿಗೆ ಏಷ್ಯಾನೆಟ್ ನ್ಯೂಸ್ ಕನ್ನಡಕ್ಕೆ ಯಾವುದೇ ಸಂಬಂಧವಿಲ್ಲ ಇದಕ್ಕೆ ವೈಜ್ಞಾನಿಕ ಅಥವಾ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಇದನ್ನು ಮನರಂಜನೆ ಅಥವಾ ಜನಪ್ರಿಯ ನಂಬಿಕೆಗಳ ಕಥೆಯಾಗಿ ಮಾತ್ರ ಪರಿಗಣಿಸಬೇಕು.