- Home
- Automobile
- ಮರದಿಂದ ಬರುವ ರಬ್ಬರ್ ಹಾಲು ಬೆಳ್ಳಗಿದ್ದರೂ, ವಾಹನಗಳ ಟೈರ್ ಮಾತ್ರ ಕಪ್ಪಾಗಿರೋದು ಏಕೆ? ಇಲ್ಲಿದೆ ಅಸಲಿ ಕಾರಣ!
ಮರದಿಂದ ಬರುವ ರಬ್ಬರ್ ಹಾಲು ಬೆಳ್ಳಗಿದ್ದರೂ, ವಾಹನಗಳ ಟೈರ್ ಮಾತ್ರ ಕಪ್ಪಾಗಿರೋದು ಏಕೆ? ಇಲ್ಲಿದೆ ಅಸಲಿ ಕಾರಣ!
ಮರದಿಂದ ಬರುವ ರಬ್ಬರ್ ಬೆಳ್ಳಗಿರುತ್ತದೆ. ಆದರೆ ಆ ರಬ್ಬರ್ನಿಂದ ತಯಾರಾದ ಟೈರ್ಗಳು ಮಾತ್ರ ಕಪ್ಪಗಿರುತ್ತವೆ. ಈ ಕಪ್ಪು ಬಣ್ಣ ಹೇಗೆ ಬರುತ್ತದೆ? ಟೈರ್ಗಳ ತಯಾರಿಕೆ ಬಗ್ಗೆ ನೀವು ತಿಳಿದುಕೊಂಡರೆ, ಟೈರ್ಗಳಿಗೆ ಕಪ್ಪು ಬಣ್ಣ ಬರಲು ಕಾರಣ ಏನೆಂಬುದು ಅರ್ಥವಾಗುತ್ತದೆ.

ನಾವು ಪ್ರತಿದಿನ ರಸ್ತೆಗಳಲ್ಲಿ ಓಡಾಡುವ ಬೈಕ್, ಕಾರು, ಬಸ್, ಲಾರಿಗಳಿಂದ ಹಿಡಿದು ವಿಮಾನದವರೆಗೂ ಪ್ರತಿಯೊಂದು ವಾಹನದಲ್ಲೂ ಕಪ್ಪು ಬಣ್ಣದ ಟೈರ್ಗಳನ್ನೇ ನೋಡುತ್ತೇವೆ. ಆದರೆ ಎಂದಾದರೂ ಒಂದು ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿದೆಯಾ? ರಬ್ಬರ್ ಮರದಿಂದ ತೆಗೆಯುವ ನೈಸರ್ಗಿಕ ರಬ್ಬರ್ (Latex) ಅಪ್ಪಟ ಹಾಲಿನಂತೆ ಬೆಳ್ಳಗಿರುತ್ತದೆ. ಹಾಗಾದರೆ, ಅದರಿಂದ ತಯಾರಾಗುವ ಟೈರ್ಗಳು ಮಾತ್ರ ಕಪ್ಪಾಗಿರುವುದು ಏಕೆ? ಇದರ ಹಿಂದೆ ರೋಚಕ ಇತಿಹಾಸ ಹಾಗೂ ಅಷ್ಟೇ ಗಟ್ಟಿ ವೈಜ್ಞಾನಿಕ ಕಾರಣವಿದೆ.
1. ಆರಂಭದಲ್ಲಿ ಟೈರ್ಗಳು ಬಿಳಿಯಾಗಿಯೇ ಇದ್ದವು!
ನಿಮಗೆ ಗೊತ್ತಿರಲಿ, ಸುಮಾರು 120 ವರ್ಷಗಳ ಹಿಂದೆ (1900ರ ಆರಂಭದವರೆಗೆ) ಸೈಕಲ್ ಮತ್ತು ಕಾರುಗಳಿಗೆ ಬಳಸುತ್ತಿದ್ದ ಟೈರ್ಗಳು ನೈಸರ್ಗಿಕ ಬಿಳಿ ಅಥವಾ ಬೂದು ಬಣ್ಣದಲ್ಲೇ ಇರುತ್ತಿದ್ದವು. ಆದರೆ, ಆ ನೈಸರ್ಗಿಕ ರಬ್ಬರ್ ಟೈರ್ಗಳು ಗಟ್ಟಿಯಾಗಿರುತ್ತಿರಲಿಲ್ಲ. ಬಿಸಿಲಿಗೆ ಬೇಗನೆ ಮೆತ್ತಗಾಗುವುದು, ಘರ್ಷಣೆಗೆ ಸವೆದು ಹೋಗುವುದು ಹಾಗೂ ಕೆಲವೇ ನೂರು ಕಿಲೋಮೀಟರ್ಗಳಲ್ಲೇ ಬಿರುಕು ಬಿಟ್ಟು ಹಾಳಾಗುತ್ತಿದ್ದವು.
2. 'ಕಾರ್ಬನ್ ಬ್ಲ್ಯಾಕ್' ಎಂಬ ಮ್ಯಾಜಿಕ್ ಪದಾರ್ಥ:
ಟೈರ್ಗಳು ದೀರ್ಘ ಬಾಳಿಕೆ ಬರುವಂತೆ ತಯಾರಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸಿದರು. ಈ ವೇಳೆ ಕಾರ್ಬನ್ ಬ್ಲಾಕ್ ಎಂಬ ಕಪ್ಪು ಪುಡಿಯನ್ನು ರಬ್ಬರ್ನಲ್ಲಿ ಬೆರೆಸಲು ಆರಂಭಿಸಿದರು. ಇದನ್ನು ಪೆಟ್ರೋಲಿಯಂ ಉತ್ಪನ್ನಗಳನ್ನು ನಿಯಂತ್ರಿತ ಪರಿಸ್ಥಿತಿಗಳಲ್ಲಿ ಅಪೂರ್ಣವಾಗಿ ಸುಡುವುದರ ಮೂಲಕ ತಯಾರಿಸುತ್ತಾರೆ. 1910ರಲ್ಲಿ ಬಿಎಫ್ ಗುಡ್ರಿಚ್ ಕಂಪನಿ ಟೈರ್ಗಳ ತಯಾರಿಕೆಯಲ್ಲಿ ಕಾರ್ಬನ್ ಬ್ಲಾಕ್ ಬಳಸಲು ಆರಂಭಿಸಿತು.
ಈ ಕಾರ್ಬನ್ ಕಪ್ಪು ಪುಡಿಯಾಗಿದ್ದು, ಇದನ್ನು ಬಿಳಿ ರಬ್ಬರ್ ಜೊತೆ ಸೇರಿಸಿ ಕರಗಿಸಿದಾಗ ಇಡೀ ರಬ್ಬರ್ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಟೈರ್ಗೆ ಕಾರ್ಬನ್ ಬ್ಲ್ಯಾಕ್ ಸೇರಿಸುವುದರಿಂದ ಆಗುವ ಲಾಭಗಳೇನು?
ಅದ್ಭುತ ಶಕ್ತಿ ಮತ್ತು ಬಾಳಿಕೆ: ಕಾರ್ಬನ್ ಬ್ಲ್ಯಾಕ್ ಸೇರಿಸುವುದರಿಂದ ರಬ್ಬರ್ನ ಶಕ್ತಿ ಮತ್ತು ಬಾಳಿಕೆ ನೂರಾರು ಪಟ್ಟು ಹೆಚ್ಚಾಗುತ್ತದೆ. ಸಾಮಾನ್ಯ ಬಿಳಿ ಟೈರ್ಗಳು ಕೇವಲ 5,000 ಕಿ.ಮೀ ಓಡಿದರೆ, ಕಾರ್ಬನ್ ಬೆರೆಸಿದ ಕಪ್ಪು ಟೈರ್ಗಳು 50,000 ರಿಂದ 80,000 ಕಿ.ಮೀ ವರೆಗೂ ಸವೆಯದೆ ಓಡುತ್ತವೆ.
ಶಾಖ ನಿಯಂತ್ರಣ (Heat Dissipation): ವಾಹನ ವೇಗವಾಗಿ ಚಲಿಸುವಾಗ ರಸ್ತೆ ಮತ್ತು ಟೈರ್ ನಡುವಿನ ಘರ್ಷಣೆಯಿಂದ ವಿಪರೀತ ಶಾಖ ಉತ್ಪತ್ತಿಯಾಗುತ್ತದೆ. ಕಾರ್ಬನ್ ಬ್ಲ್ಯಾಕ್ ಈ ಶಾಖವನ್ನು ತನ್ನಲ್ಲೇ ಹಿಡಿದಿಟ್ಟುಕೊಳ್ಳದೆ ಹೊರಹಾಕಲು (Cool down) ಸಹಾಯ ಮಾಡುತ್ತದೆ, ಇದರಿಂದ ಟೈರ್ ಬ್ಲಾಸ್ಟ್ ಆಗುವುದು ತಪ್ಪುತ್ತದೆ.
ಯುವಿ ಕಿರಣಗಳಿಂದ ರಕ್ಷಣೆ: ಸೂರ್ಯನಿಂದ ಬರುವ ನೇರಳಾತೀತ (UV) ಕಿರಣಗಳು ನೈಸರ್ಗಿಕ ರಬ್ಬರ್ ಅನ್ನು ಬೇಗನೆ ಒಣಗಿಸಿ ಬಿರುಕು ಬಿಡುವಂತೆ ಮಾಡುತ್ತವೆ. ಕಾರ್ಬನ್ ಬ್ಲ್ಯಾಕ್ ಈ ಯುವಿ ಕಿರಣಗಳನ್ನು ಹೀರಿಕೊಂಡು ರಬ್ಬರ್ ಹಾಳಾಗದಂತೆ ತಡೆಯುತ್ತದೆ.
ಕೇವಲ ನೋಡಲು ಸುಂದರವಾಗಿರಲಿ ಎಂದಲ್ಲ, ವಾಹನ ಸವಾರರ ಗರಿಷ್ಠ ಸುರಕ್ಷತೆ ಮತ್ತು ದೀರ್ಘಕಾಲದ ಬಾಳಿಕೆಗಾಗಿ ಪ್ರಪಂಚದಾದ್ಯಂತ ಎಲ್ಲ ಟೈರ್ಗಳನ್ನು ಕಪ್ಪು ಬಣ್ಣದಲ್ಲೇ ತಯಾರಿಸಲಾಗುತ್ತದೆ.












