ನರಗುಂದ[ಅ.25]: ಪಟ್ಟಣದ ಹಳೇ ಎಪಿಎಂಸಿ ಯಾರ್ಡ್‌ ಶಾಲೆಗಳ ಪ್ರದೇಶವೆಂದೇ ಖ್ಯಾತಿ ಪಡೆದಿದೆ. ನಾಲ್ಕೈದು ಶಾಲೆಗಳನ್ನು ಹೊಂದಿರುವ ಮತ್ತು ಪ್ರತಿನಿತ್ಯ ಸಾವಿರಾರು ಮಕ್ಕಳು ಮತ್ತು ಪಾಲಕರೂ ಸಂಚರಿಸುವ ರಸ್ತೆಗಳ ಸ್ಥಿತಿ ಗಲೀಜು ಮಯವಾಗಿದೆ. ತಗ್ಗು ದಿನ್ನೆಗಳನ್ನೊಳಗೊಂಡ ಇಲ್ಲಿನ ರಸ್ತೆಗಳು ಮಳೆ ಬಂದರೆ ಸಾಕು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುವ ಸ್ಥಿತಿಯಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪುರಸಭೆಯವರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಬಳಗವು ಸೇರಿಕೊಂಡು ರಸ್ತೆಯನ್ನು ಬೇಗ ದುರಸ್ತಿಗೊಳಿಸಿರೆಂದು ಹಲವಾರು ಬಾರಿ ಮನವಿ ಮಾಡಿಕೊಂಡಿರುತ್ತಾರೆ. ಆದರೆ ರಸ್ತೆ ಮಾತ್ರ ಇನ್ನೂ ಸುಧಾರಣೆಗೊಂಡಿಲ್ಲ. ಶಿಕ್ಷಣಕ್ಕಾಗಿ ಸರ್ಕಾರವು ಕೋಟ್ಯಂತರ ಅನುದಾನವನ್ನು ಮೀಸಲಿಟ್ಟಿದೆ. ಆದರೆ ಈ ರಸ್ತೆಗಳು ಸುಧಾರಣೆಯಾಗಿಲ್ಲ.

ಶಾಲೆಗೆ ಬರಲು ಹಿಂದೇಟು

ಹಳೇ ಎಪಿಎಂಸಿ ಯಾರ್ಡ್‌ನಲ್ಲಿರುವ ವಿವೇಕಾನಂದ ವಿದ್ಯಾಲಯ, ಜಗನ್ನಾಥ್‌ ಅಕ್ಷರಮ್‌ ವಿದ್ಯಾಮಂದಿರ, ಜ್ಞಾನೋದಯ ಕೋಚಿಂಗ್‌ ಸೆಂಟರ್‌ ಹಾಗೂ ಜ್ಞಾನ ಮುದ್ರಾ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಸಾವಿರಾರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಗಲೀಜು ಮತ್ತು ಕೆಸರನ್ನು ಹೊಂದಿರುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಾರೆ. ಚರಂಡಿ ದಡದಲ್ಲಿ ನಡೆದು ಹೋಗುವಾಗ ಅನೇಕ ಮಕ್ಕಳು ಚರಂಡಿಯಲ್ಲಿ, ಗಲೀಜಿನಲ್ಲಿ ಬಿದ್ದು ಶಾಲಾ ಸಮವಸ್ತ್ರಗಳನ್ನು ಹೊಲಸು ಮಾಡಿಕೊಂಡು ಮನೆಗೆ ಹೋಗುವ ಘಟನೆಗಳು ಜರುಗಿವೆ.

ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಇಲ್ಲಿ ವಾಹನಗಳು ಸಂಚರಿಸಲಿಕ್ಕೂ ಸಾಧ್ಯವಾಗದಷ್ಟು ರಸ್ತೆಗಳು ಕೆಸರಿನಿಂದ ತುಂಬಿ ಹೋಗಿದೆ. ಇಂತಹದ್ದರಲ್ಲಿಯೇ ಚಿಕ್ಕ ಚಿಕ್ಕ ಮಕ್ಕಳು ಹರಸಾಹಸಪಟ್ಟು ಸಾಗುತ್ತಿದ್ದಾರೆ. ಪುರಸಭೆಯವರು ಕೊನೆಯ ಪಕ್ಷ ಮಕ್ಕಳಿಗಾಗಿಯಾದರೂ ರಸ್ತೆಯನ್ನು ತಾತ್ಕಾಲಿವಾಗಿ ದುರಸ್ತಿಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಮಕ್ಕಳ ಪಾಲಕರ ಆಗ್ರಹ.

ಈ ಬಗ್ಗೆ ಮಾತನಾಡಿದ ಜಗನ್ನಾಥ್‌ ಅಕ್ಷರಮ್‌ ವಿದ್ಯಾಮಂದಿರ ಮುಖ್ಯೋಪಾಧ್ಯಾಯ ಎಸ್‌.ಎಂ. ಕೆಂಚನಗೌಡ್ರ ಅವರು, ಶಾಲಾ ಪ್ರದೇಶವಾಗಿರುವ ಈ ಭಾಗದಲ್ಲಿ ಎಷ್ಟೋ ವರ್ಷಗಳಿಂದ ಒಳ್ಳೆಯ ರಸ್ತೆಗಳು ಇಲ್ಲವೇ ಇಲ್ಲ. ಮಳೆಯಾದರಂತೂ ರಸ್ತೆ ತುಂಬೆಲ್ಲಾ ಕೆಸರೋ ಕೆಸರು. ಶಾಲಾ ಮಕ್ಕಳೆಲ್ಲರೂ ಕೆಸರಿನಲ್ಲಿ ನಡದುಕೊಂಡೆ ಬರಬೇಕಾಗುತ್ತದೆ. ಎಷ್ಟೋ ಮಕ್ಕಳು ಕೆಸರಿನಲ್ಲಿ ಬಿದ್ದು ಸಮವಸ್ತ್ರಗಳನ್ನು ಗಲೀಜು ಮಾಡಿಕೊಂಡು ಬರುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಶಾಲಾ ಮಕ್ಕಳಿಗಾಗಿ ಬೇಗ ರಸ್ತೆಗಳನ್ನು ಸರಿಮಾಡಿಕೊಡಬೇಕು ಎಂದು ಹೇಳಿದ್ದಾರೆ.

ನಮ್ಮ ಮಕ್ಕಳು ಇಲ್ಲಿನ ಶಾಲೆಗಳಿಗೆ ಬರುತ್ತಾರೆ. ಆದರೆ ಇಲ್ಲಿನ ರಸ್ತೆಗಳು ಮಳೆಯಿಂದ ಸಂಪೂರ್ಣ ಗಲೀಜು ಆಗಿರುವುದರಿಂದ ಶಾಲೆಗಳಿಗೆ ಕಳಿಸಲು ಮನಸ್ಸು ಬರುತ್ತಿಲ್ಲ. ಎಷ್ಟೋ ಸಾರಿ ಈ ರಸ್ತೆಯಲ್ಲಿ ಹಲವಾರು ಮಕ್ಕಳು ಕೆಸರಿನಲ್ಲಿ ಬಿದ್ದು ಸಮವಸ್ತ್ರಗಳನ್ನು ಗಲೀಜು ಮಾಡಿಕೊಂಡು ಮರಳಿ ಮನೆಗೆ ಹೋಗಿದ್ದುಂಟು, ಪುರಸಭೆಯವರು ಕೂಡಲೇ ತಾತ್ಕಾಲಿಕವಾದರೂ ರಸ್ತೆಯನ್ನು ಸರಿಮಾಡಬೇಕು ಎಂದು ಪಾಲಕ ಶ್ರೀಶೈಲಗೌಡ ಪಾಟೀಲ ಅವರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ]