ಗದಗ(ಅ.26): ಸರ್ಕಾರದ ಖಜಾನೆ ಖಾಲಿಯಿದೆ ಎಂದು ಹೇಳುವ ಮೂಲಕ ಸಚಿವ ಸಿ ಸಿ ಪಾಟೀಲ್ ಅವರು ತಮ್ಮ ಅಜ್ಞಾನದ ಪ್ರದರ್ಶನವನ್ನು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಿ ಸಿ ಪಾಟೀಲ್ ವಿರುದ್ಧ ಕೆಂಡಾಮಂಡಲರಾದ ಸಿದ್ದರಾಮಯ್ಯ ಅವರು, ಪ್ರತಿ ತಿಂಗಳು ರಾಜ್ಯ ಸರ್ಕಾರಕ್ಕೆ ತೆರಿಗೆ ಬರುತ್ತೆ, ಕೇಂದ್ರದಿಂದ ರಾಜ್ಯದ ತೆರಿಗೆ ಪಾಲು ಬರುತ್ತೆ, ವಿವಿಧ ಬಗೆಯ ತೆರಿಗೆಗಳು ಬರುತ್ತೆ. ಇವೆಲ್ಲಾ ಇದ್ರೂ ಖಜಾನೆ ಖಾಲಿಯಾಗಿದೆ ಅಂದ್ರೆ ಏನರ್ಥ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಚಿವರಿಗೆ ಸಂತ್ತಸ್ತರ ಕಷ್ಟಕ್ಕೆ ಸ್ಪಂದಿಸೋ ಮನಸ್ಸಿಲ್ಲ, ಇಚ್ಚಾಶಕ್ತಿನೂ ಇಲ್ಲ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅದಕ್ಕೆ ಈ ಬಗೆಯ ಏನೋ ಒಂದು ನೆಪ ಹೇಳ್ತಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಅದ್ಧೂರಿ ಸ್ವಾಗತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅವರ ಅಭಿಮಾನಿಗಳು ಸ್ವಾಗತ ಮಾಡ್ತರ್ರೀ, ಅಭಿಮಾನಿಗಳು ಸ್ವಾಗತ ಮಾಡೋದನ್ನು ಬೇಡ ಎನ್ನೋಕಾಗುತ್ತಾ, ವಾಲೆಂಟರಿಯಾಗಿ ಅವರು ಸ್ವಾಗತ ಮಾಡ್ತಿದ್ದಾರೆ‌ ಎಂದು ತಿಳಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೈ ಎಲೆಕ್ಷನ್ ಬಗ್ಗೆ ಸಭೆ ಮಾಡೋಕೆ ಅವರಿಗೆ ಸಮಯವಿರುತ್ತೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ಹೋಗೋಕೆ ಸಮಯವಿರಲ್ಲ. ನಾನು ಬರಬೇಕಾದ್ರೆ ದಾರಿಯಲ್ಲಿ ಸಂತ್ರಸ್ತರು ಸಂಕಟ ಹೇಳಿಕೊಂಡಿದ್ದಾರೆ. ಸರ್ಕಾರ ಮಾತ್ರ ಯಾವ ಪರಿಹಾರನೂ ನೀಡಿಲ್ಲ ಎಂದು ಹೇಳಿದ್ದಾರೆ. 

ಉಪಚುನಾವಣೆಗೆ ನಾವು ಎಲ್ಲ ಬಗೆಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸುಪ್ರೀಂ ಕೋರ್ಟ್ ನಿಂದ ಬರುವ ಅನರ್ಹ ಶಾಸಕರ ತೀರ್ಪಿನ ಬಗ್ಗೆ ನಾವು ಕಾಯುತ್ತಿದ್ದೇವೆ. ಇಷ್ಟೇ ಸ್ಥಾನ ಗೆಲ್ತೀವಿ ಅಂತ ಶಾಸ್ತ್ರ ಹೇಳೋಕಾಗುತ್ತಾ, ಮೆಜಾರಿಟಿಯಲ್ಲೇ ಗೆಲ್ತೀವಿ, ನಾವು ಗೆದ್ದ ಮೇಲೆ ಸರ್ಕಾರ ಅದಾಗಿಯೇ ಬೀಳುತ್ತೆ. ನಾವು ಜಾಸ್ತಿ ಗೆದ್ದ ಮೇಲೆ ಅವರೇಗೆ ಸರ್ಕಾರದಲ್ಲಿ ಮುಂದುವರೀತಾರೆ ಎಂದು ಪ್ರಶ್ನಿಸಿ ಮುನ್ನೆಡೆದರು. 

ಅಕ್ಟೋಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ