ನರಗುಂದ(ಅ.26): ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯ ಮಲಪ್ರಭಾ ನದಿಗೆ ನಿರ್ಮಿಸಿದ ಸೇತುವೆ ಬಳಿ ತಾತ್ಕಾಲಿಕ ರಸ್ತೆ ನದಿಗೆ ಪ್ರವಾಹ ಬಂದು ಕಿತ್ತು ಹೋಗಿ ಕಳೆದ 5 ದಿನಗಳಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿತ್ತು. ಶುಕ್ರವಾರ ನದಿಗೆ ಪ್ರವಾಹ ಬರುವುದು ಕಡಿಮೆಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರವಾಹಕ್ಕೆ ಕಿತ್ತು ಹೋದ ತಾತ್ಕಾಲಿಕ ರಸ್ತೆಯನ್ನು ಕಡಿ ಮತ್ತು ಗರಸ ಹಾಕಿ ರಿಪೇರಿ ಮಾಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಹೋಗುವ ಖಾಸಗಿ ವಾಹನ ಮತ್ತು ಬಸ್‌ಗಳ ಸಂಚಾರ ಪ್ರಾರಂಭಗೊಂಡಿವೆ.

ರಾತ್ರಿ ವಾಹನ ಸಂಚಾರಕ್ಕೆ ನಿಷೇಧ

ನದಿಗೆ ಪ್ರವಾಹ ಕಡಿಮೆಯಾಗಿದ್ದರಿಂದ ಶುಕ್ರವಾರ ಹೆದ್ದಾರಿ ಸೇತುವೆ ಬಳಿ ತಾತ್ಕಾಲಿಕ ರಸ್ತೆ ರಿಪೇರಿ ಮಾಡುವ ಸಮಯದಲ್ಲಿ ಪದೇ ಪದೇ ಮಳೆ ಬಂದಿದ್ದರಿಂದ ರಸ್ತೆಯನ್ನು ಅಚ್ಚುಕಟ್ಟಾಗಿ ಮಾಡಲು ನಮಗೆ ಸಾಧ್ಯವಾಗಿಲ್ಲ. ಸದ್ಯದ ಮಟ್ಟಿಗೆ ಮಳೆಯಲ್ಲೇ ತಾತ್ಕಾಲಿಕವಾಗಿ ವಾಹನಗಳು ಓಡಾಡಲು ಅನುಕೂಲ ಮಾಡಿದ್ದೇವೆ. ಆದರೆ ಮತ್ತೆ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗಿ ನದಿಗೆ ಹೆಚ್ಚುವರಿ ನೀರು ಬಿಟ್ಟಿದ್ದಾರೆಂದು ತಿಳಿದು ಬಂದಿದೆ. ಆದ್ದರಿಂದ ರಾತ್ರಿ ಸಮಯದಲ್ಲಿ ನೀರು ಯಾವ ಪ್ರಮಾಣದಲ್ಲಿ ಬರುತ್ತದೆ ಹೇಳಲಾಗದು. ಹಾಗಾಗಿ ರಾತ್ರಿ ಸಮಯದಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನದಿ ಸೇತುವೆ ಪಕ್ಕ ತಾತ್ಕಾಲಿಕ ರಸ್ತೆಯನ್ನು ಸದ್ಯ ತಾತ್ಕಾಲಿಕವಾಗಿ ರಿಪೇರಿ ಮಾಡಿದ್ದೇವೆ, ಶನಿವಾರ ಮಳೆ ವಾತಾವರಣ ನೋಡಿಕೊಂಡು ಈ ರಸ್ತೆಗೆ ಗರಸು, ಕಡಿ ತಂದು ಜೆಸಿಬಿ ಮತ್ತು ರೂಲರ್‌ ಯಂತ್ರಗಳ ಮೂಲಕ ಅಚ್ಚುಕಟ್ಟಾಗಿ ರಸ್ತೆ ರಿಪೇರಿ ಮಾಡಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡುತ್ತೆವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪಿ. ರಾಜೇಂದ್ರ ಅವರು ಹೇಳಿದ್ದಾರೆ.