ವಾಹನ ಸವಾರರೇ ಎಚ್ಚರ : ಇನ್ಮುಂದೆ ಹಿಂಗ್ ಮಾಡಿದ್ರೆ ಪೆಟ್ರೋಲ್ ಸಿಗಲ್ಲ
ವಾಹನ ಸವಾರರೇ ಎಚ್ಚರ, ಇನ್ಮುಂದೆ ನೀವು ಹಿಂಗೆಲ್ಲಾ ಮಾಡಿದ್ರೆ ನಿಮ್ಮ ಗಾಡಿಗೆ ಪೆಟ್ರೋಲ್ ಸಿಗಲ್ಲ.
ಗದಗ[ಅ.12]: ಹೊಸ ಮೋಟಾರ್ ವಾಹನ ಕಾಯ್ದೆ ಬಂದ ನಂತರ ಪೊಲೀಸರು ವಾಹನ ಸವಾರರಿಗೆ ಕಾನೂನು ಪಾಲಿಸಲು ಜಾಗೃತಿ ಮೂಡಿಸಲು ಮುಂದಾಗಿದ್ದು, ಅದರ ಭಾಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ಪೆಟ್ರೋಲ್ ಬಂಕ್ ಅಸೋಸಿಯೇಶನ್ ಜತೆಗೂಡಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಶುಕ್ರವಾರದಿಂದ ನೋ ಹೆಲ್ಮೇಟ್, ನೋ ಪೆಟ್ರೋಲ್ ನಿಯಮವನ್ನು ಜಾರಿಗೆ ತಂದಿದ್ದಾರೆ.
ಬಂಕ್‌ಗಳಿಗೆ ಶುಕ್ರವಾರ ಪೆಟ್ರೋಲ್‌ಗಾಗಿ ಬಂದಿದ್ದ ನೂರಾರು ಸಾರ್ವಜನಿಕರು ಹೆಲ್ಮೆಟ್ ಧರಿಸದೇ ಇರುವ ಕಾರಣ ಪೆಟ್ರೋಲ್ ಇಲ್ಲದೆಯೇ ಮರಳಿದರು. ಇನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪೆಟ್ರೊಲ್ ತೆಗೆದುಕೊಂಡು ಹೋಗಲು ಬಂದವರಿಗೂ ಪೆಟ್ರೊಲ್ ಸಿಗಲಿಲ್ಲ. ಹೆಲ್ಮೆಟ್ ಹಾಕಿಕೊಂಡು ಬಂದ ಗ್ರಾಹಕರಿಗೆ ಮಾತ್ರ ಪೆಟ್ರೋಲ್ ನೀಡುವ ಮೂಲಕ ಕಾನೂನು ಪಾಲನೆ ಮಾಡಲು ಜಾಗೃತಿ ಮೂಡಿಸಿದರು.
ಪೊಲೀಸ್ ಸಿಬ್ಬಂದಿ ನಿಯೋಜನೆ:
ಹೆಲ್ಮೆಟ್ ಇಲ್ಲದೇ ಬಂಕ್‌ಗೆ ಬರುವ ಗ್ರಾಹಕರು ಹಾಗೂ ಬಂಕ್‌ನವರ ಮಧ್ಯೆ ಪೆಟ್ರೋಲ್‌ಗಾಗಿ ವಾಗ್ವಾದಗಳು ಉಂಟಾಗಬಾರದು ಎಂಬ ಉದ್ದೇಶದಿಂದ ಗದಗ ನಗರದಲ್ಲಿರುವ ಒಟ್ಟು 10 ಪೆಟ್ರೋಲ್ ಬಂಕ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಇದಲ್ಲದೇ ಹೆಲ್ಮೆಟ್ ಹಾಕಿಕೊಳ್ಳದೇ ಬರುವವರಿಗೆ . 500 ದಂಡ ವಿಧಿಸುವ ಮೂಲಕ ಕಾನೂನು ಪಾಲಿಸದವರಿಗೆ ಬಿಸಿ ಮುಟ್ಟಿಸಿದರು. ಇದರಿಂದ ಹೆಲ್ಮೆಟ್ ಇದ್ದರೂ ಹಾಕಿಕೊಳ್ಳದೇ ಮನೆಯಲ್ಲಿಟ್ಟಿದ್ದ ವಾಹನ ಸವಾರರು ಶುಕ್ರವಾರ ಪೆಟ್ರೋಲ್‌ಗಾಗಿ ಹೆಲ್ಮೆಟ್‌ನ್ನು ಹೊರತೆಗೆದರೆ, ಇನ್ನೂ ಕೆಲವರು ಹೊಸ ಹೆಲ್ಮೆಟ್ ಖರೀದಿಗೆ ಮುಂದಾದರು.
ಹೆಲ್ಮೆಟ್ ಎಕ್ಸ್‌ಚೇಂಜ್:
ಗದಗ-ಬೆಟಗೇರಿ ಅವಳಿ ನಗರದಲ್ಲಿ ನೊ ಹೆಲ್ಮೆಟ್, ನೋ ಪೆಟ್ರೋಲ್ ನಿಯಮ ಜಾರಿ ತಂದಿದೆ. ಆದರೆ, ಕೆಲವರು ಆಗಲೇ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಹೆಲ್ಮೆಟ್ ಇಲ್ಲದೇ ವಾಹನ ಸಂಚಾರ ಮಾಡುವವರು ತಮ್ಮ ವಾಹನದಲ್ಲಿ ಪೆಟ್ರೊಲ್ ಖಾಲಿಯಾಗುತ್ತಿದ್ದಂತೆಯೇ ಬೇರೆಯವರ ಹೆಲ್ಮೆಟ್ ಧರಿಸಿಕೊಂಡು ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಬರುತ್ತಿದ್ದಾರೆ. ಇದಲ್ಲದೇ ಪೆಟ್ರೋಲ್ ಬಂಕ್‌ಗೆ ಬಂದಿದ್ದ ಗ್ರಾಹಕರ ಹೆಲ್ಮೆಟ್‌ನ್ನೇ ಬಳಸಿ ತಾವೂ ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಂಕ್‌ಗಳಲ್ಲಿ ಮಾತ್ರ ಸೀಮಿತವಾದ ಹೆಲ್ಮೆಟ್
ವಾಹನ ಸವಾರರ ಹಿತದೃಷ್ಟಿಯಿಂದ ಶುಕ್ರವಾರದಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ನಿಯಮವನ್ನೇನೋ ಜಾರಿಗೆ ತರಲಾಗಿದೆ. ಆದರೆ, ಇದು ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಸೀಮಿತವಾಗಿದೆ. ಬಂಕ್‌ಗಳಿಗೆ ತೆರಳುವವರು ಇತರರ ಹೆಲ್ಮೆಟ್ ಧರಿಸಿಕೊಂಡು ಪೆಟ್ರೋಲ್ ಹಾಕಿಸಿಕೊಂಡು ಪುನಃ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ಸಂಚರಿಸುತ್ತಿದ್ದಾರೆ. ಹೀಗಾದರೆ ಎಷ್ಟರ ಮಟ್ಟಿಗೆ ಕಾನೂನು ಪಾಲನೆಯಾದಂತಾಗುತ್ತದೆ ಎಂಬುದೇ ವಿಪರ್ಯಾಸ.