ಗದಗ[ಅ.21]: ಗದಗ-ಬೆಟಗೇರಿ ಅವಳಿ ನಗರದ 34 ನೇ ವಾರ್ಡನ ಸಿದ್ದಲಿಂಗನಗರ (ಹುಡ್ಕೋ ಕಾಲನಿ)ಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಬಸವೇಶ್ವರ ಶಾಲೆ ಹಾಗೂ ಸರ್ಕಾರಿ ಶಾಲೆ ನಂ. 22 ರ ಶಾಲಾ ಆವರಣದಲ್ಲಿ ಮಳೆಯ ನೀರು ನುಗ್ಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಈಗಾಗಲೇ ಹಲವು ಬಾರಿ ಗದಗ-ಬೆಟಗೇರಿ ನಗರಸಭೆಯ ಈ ಹಿಂದಿನ ಸದಸ್ಯರಿಗೆ, ನಗರಾಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ, ಡಿಡಿಪಿಐ ಹಾಗೂ ಬಿಇಒ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. 

ಇದರಿಂದಾಗಿ ಈ ಭಾಗದ ಸಾರ್ವಜನಿಕರು ನಗರಸಭೆ ಹಾಗೂ ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ದುರಾಡಳಿತಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ದತ್ತಣ್ಣ ಪುಣೇಕರ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ವರ್ಷದಿಂದಲೂ ಈ ಪ್ರದೇಶದ ಸಾರ್ವಜನಿಕರು ಸರಿಯಾದ ರಸ್ತೆ, ಚರಂಡಿ ಇಲ್ಲದೆ, ಕಸ ಎತ್ತುವಳಿ ಮಾಡದಿರುವುದನ್ನು ಹಂದಿ ಮತ್ತು ಬಿಡಾಡಿ ದನಗಳ, ಗೂಳಿಗಳ ಕಿರುಕುಳದಿಂದಾಗಿ ಬೇಸತ್ತಿದ್ದಾರೆ. ವಾಕರಿಕೆ ಬರುವ ರೀತಿಯಲ್ಲಿ ಗಬ್ಬು ನಾರುತ್ತಿರುವ ಕಸ, ನಿಂತ ನೀರು, ಹಂದಿಗಳ ಚೆಲ್ಲಾಟದಿಂದಾಗಿ ಇಲ್ಲಿನ ಶಾಲಾ ಮಕ್ಕಳು, ವೃದ್ಧರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಇಲ್ಲಿ ಸಂಚರಿಸುವುದೇ ಕಷ್ಟವಾಗಿದೆ.

ಸಾಗಾಟ ಆಗದ ಕಸ ಕೊಳೆತು ರೋಗಗಳ ಉತ್ಪಾದನಾ ಕೇಂದ್ರವಾಗಿವೆ. ಶಾಲಾ ಮಕ್ಕಳು ಶಾಲೆಗೆ ಬರುವುದು ದುಸ್ತರವಾಗಿದೆ. ರಸ್ತೆಯಲ್ಲಿ ಜಾರಿ ಬೀಳುವ, ನಿಂತ ಗಲೀಜು ನೀರು, ಕೊಳೆತ ಕಸವನ್ನು ದಾಟಿ ಶಾಲೆಗೆ ಹೋಗಲು ಹರಸಾಹಸ ಮಾಡುವಂತಹ ಸ್ಥಿತಿ ಉಂಟಾಗಿದೆ. ಈ ಬಗ್ಗೆ ನಗರಸಭೆ ಹಾಗೂ ಶಿಕ್ಷಣ ಇಲಾಖೆ, ಶಾಲೆಯ ಮುಖ್ಯಸ್ಥರು ಅಗತ್ಯ ಕ್ರಮಕೈಗೊಳ್ಳದಿದ್ದರೆ ಈ ಭಾಗದ ಎಲ್ಲ ಪ್ರಜ್ಞಾವಂತರು ಸಂಘಟಿಕರಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.