ಗದಗ(ಅ.10): ರಾಜ್ಯದ ಬೊಕ್ಕಸ ಖಾಲಿ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೂರಕ್ಕೆ ನೂರು ಸತ್ಯವಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಜಿಗಜಿಣಗಿ ಅವರು ಸಮರ್ಥಿಸಿಕೊಂಡಿದ್ದಾರೆ. 

ಬುಧವಾರ ನಗರದ ಲಿಂಗೈಕ್ಯ ತೋಂಟದ ಶ್ರೀಗಳ ಪ್ರಥಮ ಪುಣ್ಯಸ್ಮರಣೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹೇಳಿಕೆ ಸತ್ಯ. ಈ ಹಿಂದಿನ ಸರ್ಕಾರ ಖಜಾನೆ ಖಾಲಿ ಮಾಡಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಹಿಂದೆ ರಾಜ್ಯದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಬೇಕಾಬಿಟ್ಟಿ ಆಡಳಿತ ಮಾಡಿದೆ. ಬೊಕ್ಕಸದಲ್ಲಿ ಒಂದು ರೂಪಾಯಿ ಇಲ್ಲದಿದ್ದರೂ ಬೇಕಾಗಿದ್ದು ಮಂಜೂರು ಮಾಡಿದ್ದಾರೆ. ಹಾಳೆ ಮೇಲೆ ಮಂಜೂರು ಮಾಡಿದರಾಯಿತು ಎಂಬ ಭಾವನೆ ಹೊಂದಿದ್ದ ಮೈತ್ರಿ ಸರ್ಕಾರ ನಡೆಸಿದವರು ರಾಜ್ಯದ ಖಜಾನೆಯನ್ನು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದ್ದಾರೆ ಎಂದು ವಿಶ್ಲೇಷಿಸಿದರು. 

ಬಿಎಸ್‌ವೈ ಮುಗಿಸಲು ರಾಜ್ಯದ ಇಬ್ಬರು ಕೇಂದ್ರ ಸಚಿವರ ಯತ್ನ ಮಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಯತ್ನಾಳ್ ಅವರನ್ನೇ ಕೇಳಿ, ನನ್ನನ್ನೇನೂ ಕೇಳಬೇಡಿ, ವಿಷಯ ಹೇಳಿದವರನ್ನು ಬಿಟ್ಟು ನಮಗ್ಯಾಕೆ ಗಂಟು ಬಿದ್ದೀರಿ ಎಂದು ಮಾತು ಮುಗಿಸಿದರು.