ವಾಪಸ್ ಕಾಂಗ್ರೆಸ್ ಗೆ ಹೋಗೋ ಪ್ರಶ್ನೆಯೇ ಇಲ್ಲ: ಬಿಸಿ ಪಾಟೀಲ್
ಬಿಜೆಪಿಯ 17 ಶಾಸಕರು ಮರಳಿ ಕಾಂಗ್ರೆಸ್ ಗೆ ಹೋಗುವ ಆರೋಪಕ್ಕೆ ಉತ್ತರಿಸಿದ ಬಿ.ಸಿ.ಪಾಟೀಲ್ , ನಾವ್ಯಾಕೆ ಅಲ್ಲಿಗೆ ಹೋಗೋಣ. ಬಿಜೆಪಿ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮೊಳೆ ಹೊಡೆದು ಮನೆಯ ಮಗಳಾಗಿದ್ದೇವೆ. ಕಾಂಗ್ರೆಸ್ ನವರೇ ಬಹಳ ಜನ ಬಿಜೆಪಿಗೆ ಬರುತ್ತಾರೆ. ನಾವು ಮತ್ತೇ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಗದಗ (ಫೆ.3): ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕರು ಯಾವುದೇ ಕಾರಣಕ್ಕೂ ವಾಪಸ್ ಕಾಂಗ್ರೆಸ್ ಗೆ ಹೋಗುವುದಿಲ್ಲ, ಇದು ಸ್ವಾಭಿಮಾನದ ವಿಚಾರ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಗದಗದಲ್ಲಿ ಹೇಳಿಕೆ ಹೇಳಿದ್ದಾರೆ. ಬಿಜೆಪಿಯ 17 ಶಾಸಕರು ಮರಳಿ ಕಾಂಗ್ರೆಸ್ ಗೆ ಹೋಗುವ ಆರೋಪಕ್ಕೆ ಉತ್ತರಿಸಿದ ಬಿ.ಸಿ.ಪಾಟೀಲ್ , ನಾವ್ಯಾಕೆ ಅಲ್ಲಿಗೆ ಹೋಗೋಣ. ಬಿಜೆಪಿ ಮನೆಗೆ ಸೊಸೆಯಾಗಿ ಬಂದು ಬಾಗಿಲಿಗೆ ಮೊಳೆ ಹೊಡೆದು ಮನೆಯ ಮಗಳಾಗಿದ್ದೇವೆ. ಹೀಗಾಗಿ ಮತ್ತೆ ಸಹಕರಿಸುವ ಪ್ರಶ್ನೆ ಇಲ್ಲ. ಕಾಂಗ್ರೆಸ್ ನವರೇ ಬಹಳ ಜನ ಬಿಜೆಪಿಗೆ ಬರುತ್ತಾರೆ. ನಾವು ಮತ್ತೇ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ.
ಕಾಂಗ್ರೆಸ್ ಅವರಿಗೆ ಯಾಕೆ ಬಿಜೆಪಿಯವರ ಮೇಲೆ ಅಷ್ಟೊಂದು ಆಸಕ್ತಿ ಮತ್ತು ಮಮಕಾರ ಎಂದು ಗೊತ್ತಿಲ್ಲ. ನಾವು ಭಾರೀ ಸ್ಟ್ರಾಂಗ್ ಇದ್ದೇವೆ. ನಾವೇ ಅಧಿಕಾರಕ್ಕೆ ಬರ್ತೇವೆ ಅನ್ನೋ ಕಾಂಗ್ರೆಸ್ ನವರು ಅಲ್ಲಿದ್ದವರಿಗೆ ಟಿಕೇಟ್ ಕೊಡಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ಪಕ್ಷದಿಂದ ಬರ್ತಾರೆ ಅಂತ ನೀರಿಕ್ಷೆ ಮಾಡ್ತಾರೆ ಅಂದ್ರೆ ಕಾಂಗ್ರೆಸ್ ಪಕ್ಷ ಪೂರ್ಣ ನಶಿಸಿ ಹೋಗಿದೆ ಅವರ ತಳಪಾಯ ಕುಸಿದು ಹೋಗಿದೆ ಅಂತಾನೇ ಅರ್ಥ ಎಂದಿದ್ದಾರೆ
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ ಪಾಟೀಲ , ಐದು ಬೆರಳುಗಳೂ ಒಂದೇ ಸಮ ಇರುವುದಿಲ್ಲ. ನಾಲ್ಕು ಸ್ಥಾನಗಳು ಖಾಲಿ ಇವೆ. ಸಚಿವರಾಗುವ ಆಸೆ ಆಸೆ ಎಲ್ಲರಿಗೂ ಇರುತ್ತದೆ. ಪುನರ್ ರಚನೆ ಅಥವಾ ವಿಸ್ತರಣೆ ಆಗೋದರ ಬಗ್ಗೆ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವು ಸಚಿವರ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದ ಪ್ರತಿಕ್ರಿಯಿಸಿದ ಅವರು ದೆಹಲಿಗೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಹೋಗಿರುತ್ತಾರೆ. ಪಕ್ಷದ ವರಿಷ್ಟರು ಯಾರನ್ನು ತೀರ್ಮಾನ ಮಾಡ್ತಾರೋ ಅವರು ಮಂತ್ರಿಗಳಾಗ್ತಾರೆ ಎಂದರು.
ಸಿಎಂ ಬದಲಾವಣೆ ವಿಚಾರ: ಆರು ತಿಂಗಳ ಅವಧಿ ಮುಗಿದ ಹಿನ್ನೆಲೆ ಸಿಎಂ ಬದಲಾವಣೆ ಆಗ್ತಾರೆ ಅನ್ನೋ ಕಾಂಗ್ರೆಸ್ ಹೇಳಿಕೆಗೆ ಉತ್ತರಿಸಿದ ಬಿ.ಸಿ ಪಾಟೀಲ್, ಮುಖ್ಯಮಂತ್ರಿ ಬದಲಾವಣೆ ಸಾಧ್ಯವೇ ಇಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್ ಹಾಗೂ ಪ್ರಲ್ಹಾದ್ ಜೋಷಿಯವರೇ ಹೇಳಿದ್ದಾರೆ. 2023 ರವರೆಗೂ ಬಸವರಾಜ ಬೊಮ್ಮಾಯಿವರೇ ಮುಖ್ಯಮಂತ್ರಿಯಾಗಿರ್ತಾರೆ ಇದರಲ್ಲಿ ಯಾವುದೇ ಸಂಶಯ ಬೇಡ. ಆರು ತಿಂಗಳ ಮುಖ್ಯಮಂತ್ರಿ ಅಂತ ಕಾಂಗ್ರೆಸ್‌ನವರಿಗೆ ಯಾರಾದ್ರು ಬರೆದುಕೊಟ್ಟಿದ್ರಾ ?
ಅವರೊಳಗೆ ಅವರಿಗೆ ಅನುಮಾನವಿದೆ. ಅವರ ಕಾಲ ಕೆಳಗೆ ಹಳ್ಳ, ಹೊಳೆಗಳು ಹರಿತಿವೆ. ಅವರೇ ಎಲ್ಲಿಲ್ಲಿ ಜಾರಿಕೊಂಡು ಯಾವಾಗ ಬೀಳ್ತಾರೆ ಗೊತ್ತಿಲ್ಲ. ಭಾರತ ದೇಶದಲ್ಲೇ ಕಾಂಗ್ರೆಸ್ ಪಕ್ಷ ಮುಗಿದುಹೋಗಿದೆ. ಡಿಕೆಶಿ ಹಾಗೂ ಸಿದ್ಧರಾಮಯ್ಯ ಕಚ್ಚಾಟದಲ್ಲಿ ಆದಷ್ಟು ಬೇಗ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಪಕ್ಷ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸ್ವಪಕ್ಷದ ಸಚಿವರೇ ನನ್ನ ಫೋನ್ ಕರೆ ಸ್ವೀಕರಿಸುತ್ತಿಲ್ಲ ಅನ್ನೋ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ್, ಯಾರು ಅವರಿಗೆ ಸ್ಪಂದನೆ ಮಾಡಿಲ್ಲ ಅವರಿಗೆ ರೇಣುಕಾಚಾರ್ಯ ಹೇಳಲಿ. ಬಸನಗೌಡ ಯತ್ನಾಳ್ ಅವರು ಎಲ್ಲಾ ಸಚಿವರು ಸ್ಪಂದಿಸುತ್ತಾರೆ. ಎಲ್ಲ ಸಚಿವರು ಚೆನ್ನಾಗಿ ಕೆಲಸ ಮಾಡ್ತಾರೆ ಅಂತ ಹೇಳುತ್ತಾರೆ. ಒಬ್ಬೊಬ್ಬರು ಒಂದೊಂದು ತರ ಹೇಳುತ್ತಿದ್ದು, ಅದು ಅವರ ಭಾವನೆ ಎಂದು ಹೇಳಿದರು. ಒಬ್ಬ ತಾಯಿಗೆ ಐದು ಜನ ಮಕ್ಕಳಿದ್ದಲ್ಲಿ ಐದೂ ಜನ ಸರಿ ಇರಲ್ಲ. ಅವರಿಗೂ ಮಂತ್ರಿ ಆಗುವ ಆಸೆ ಇರುತ್ತದೆ ಆಗಿಲ್ಲ ಹೀಗಾಗಿ ಅಸಮಾಧಾನ ಸಹಜ ಎಂದರು.