ರೋಣ(ಅ.9): ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌ ಅವರ ತವರು ಜಿಲ್ಲೆ ಗದಗಿನಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ರೋಣ ತಾಲೂಕಿನ 10 ಕ್ಕೂ ಹೆಚ್ಚು ಹಳ್ಳದಲ್ಲಿ ಹಗಲು-ರಾತ್ರಿ ಎನ್ನದೇ ಟ್ರ್ಯಾಕ್ಟರ್‌, ಟಿಪ್ಪರ್‌ ಮೂಲಕ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಯಾರೂ ಕೇಳುವವರಿಲ್ಲ.

ಮನೆ, ಶಾಲೆ, ಸರ್ಕಾರಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮರಳು ಅಭಾವ ನೀಗಿಸಲು ಸರ್ಕಾರ ರಾಯಧನ ನೀಡಿ, ಕೆಲವು ನಿಯಮಗಳಡಿ ಮರಳು ಸಾಗಾಟಕ್ಕೆ ಪರವಾನಗಿ ನೀಡಿದೆ. ಆದರೆ ಇಲ್ಲಿನ ಕೆಲವು ಖದೀಮರು ಸರ್ಕಾರಕ್ಕೆ ಯಾವುದೇ ರಾಯಧನ ಕಟ್ಟದೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ.

ತಾಲೂಕಿನ ಹೊನ್ನಿಗನೂರ, ತಳ್ಳಿಹಾಳ, ಸವಡಿ, ಗುಳಗುಳಿ, ಮುಗಳಿ, ಕುರಬನಾಳ, ಚಿಕ್ಕ ಅಳಗುಂಡಿ ಮತ್ತಿತರ ಗ್ರಾಮಗಳ ಹಳ್ಳಗಳಲ್ಲಿ ಅನೇಕ ತಿಂಗಳಿನಿಂದ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದೆ. ಅದರಲ್ಲೂ ಕಳೆದ 20 ದಿನಗಳಿಂದ ದಂಧೆ ಮಿತಿಮೀರಿದೆ. ಮರಳು ವಾಹನ ಸಂಚಾರದಿಂದ ಈ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ನಿತ್ಯ ರೈತರು ಎತ್ತು, ಚಕ್ಕಡಿ ಮೂಲಕ ತಮ್ಮ ಜಮೀನಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ.

ರಸ್ತೆಯಲ್ಲಿಯೇ ದಾಸ್ತಾನು:

ಹಗಲು ವೇಳೆ ಹಳ್ಳದಿಂದ ಮರಳು ತೆಗೆದು ರಸ್ತೆಯ ಮೇಲೆ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಲಾದ ಮರಳನ್ನು ರಾತ್ರಿ ಟಿಪ್ಪರ್‌ ಮೂಲಕ ಬೇರೆಡೆ ಸಾಗಿಸುತ್ತಿದ್ದಾರೆ. ರಾತ್ರಿಯಿಡೀ ವಾಹನಗಳ ಸದ್ದಿನಿಂದ ಈ ಗ್ರಾಮಗಳ ಜನರ ನೆಮ್ಮದಿ ಹಾಳಾಗಿದೆ. ಹೊನ್ನಿಗನೂರ- ತಳ್ಳಿಹಾಳ ಹಳ್ಳದಲ್ಲಿ ನಿತ್ಯ ಬೆಳಗ್ಗೆ 6ರಿಂದ 10 ಗಂಟೆವರೆಗೆ 40ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ಮೂಲಕ ಮರಳು ಸಾಗಿಸಲಾಗುತ್ತಿದೆ.

ಹಿರೇಹಾಳ ಹೊರ ವಲಯ ಪೊಲೀಸ್‌ ಠಾಣೆಯಿಂದ ಕೇವಲ 3 ಕಿ.ಮೀ. ದೂರ, ರೋಣದಿಂದ 10 ಕಿ.ಮೀ. ದೂರದಲ್ಲಿ ಅಕ್ರಮ ಮರಳು ಸಾಗಾಟ ದಂಧೆ ನಡೆಯುತ್ತದೆ. ಪೊಲೀಸರ ಎದುರೇ ಟ್ರ್ಯಾಕ್ಟರ್‌, ಟಿಪ್ಪರ್‌ಗಳಲ್ಲಿ ಮರಳು ಸಾಗಾಟ ಮಾಡಲಾಗುತ್ತಿದ್ದರೂ ತಪಾಸಣೆ ಮಾಡುವುದಿರಲಿ, ಅತ್ತ ನೋಡುವುದೂ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಡವರಿಗೆ ಆಶ್ರಯ ಮನೆ ಕಟ್ಟಿಸಿಕೊಳ್ಳಲು ಮರಳು ಸಿಗುತ್ತಿಲ್ಲ. ಅನಿವಾರ್ಯವಾಗಿ ದಂಧೆಕೋರರಿಂದ ಹೆಚ್ಚಿನ ಬೆಲೆ ನೀಡಿ ಮರಳು ಖರೀದಿಸಬೇಕಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಹೇಳುತ್ತಾರೆ.
ಅಕ್ರಮ ಮರಳು ಸಾಗಾಟ ಮತ್ತು ಪಟ್ಟಾಜಮೀನಿನಲ್ಲಿ ಮರಳು ತೆಗೆಯುವವರ ಪತ್ತೆಗಾಗಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸಿ.ಸಿ. ಪಾಟೀಲ್‌ ತಿಳಿಸಿದ್ದರು. ಆಯಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದ್ದರು. ತಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪೊಲೀಸ್‌ ಇಲಾಖೆ ನೆರವು ಪಡೆಯಲಾಗುವುದು ಎಂದು ತಿಳಿಸಿದ್ದರು. ಆದರೆ ಅವು ಕಾರ್ಯರೂಪಕ್ಕೆ ಬರಬೇಕಿದೆ.

ಈ ಬಗ್ಗೆ ಮಾತನಾಡಿದ ತಳ್ಳಿಹಾಳ ಗ್ರಾಮದ ರೈತರು ಹೊನ್ನಿಗನೂರ ಅವರು, ಉಸುಕಿನ (ಮರಳು) ಗಾಡಿಯಿಂದ ರಸ್ತೆಗಳೆಲ್ಲ ಹದಗೆಟ್ಟಿವೆ. ಹೊಲಕ್ಕ ಹೋಗಾಕ ಬಾಳ್‌ ತೊಂದರೆಯಾಗೇತ್ರಿ. ಚಕ್ಕಡಿ ತಗೊಂಡು ಹೊಲಕ ಹೋಗಿ ಬರಬೇಕಂದ್ರ ಜೀವ ಕೈಯಾಗ ಹಿಡ್ಕೊಂಡು ಹೋಗಬೇಕ್ರಿ. ದಾರಿಗುಂಟ ದೊಡ್ಡ ದೊಡ್ಡ ತೆಗ್ಗ ಬಿದ್ದಾವ್ರಿ. ಸ್ವಲ್ಪ ಬ್ಯಾಲೆನ್ಸ್‌ ತಪ್ಪಿದ್ರ ಚಕ್ಕಡಿ ಪಲ್ಟಿಯಾಗತ್ರಿ, ಟ್ರ್ಯಾಕ್ಟರ್‌ ಅವರಿಗ ಹೇಳಿದ್ರ ನಮ್ಮ ಜತೆ ಜಗಳ ಮಾಡ್ತಾರ್ರೀ. ಅವರ ಮೇಲೆ ಕ್ರಮ ಕೈಗೊಳ್ಳಾಕ ಯಾವುದೇ ಅಧಿಕಾರಿ ಬಂದಿಲ್ರಿ ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಶ್ರೀನಾಥ ಜೋಶಿ ಅವರು, ಈ ಕೂಡಲೇ ರೋಣ ಪಿಎಸ್‌ಐಗೆ ಸ್ಥಳಕ್ಕೆ ತೆರಳಿ ಮರಳು ದಂಧೆಕೋರರನ್ನು ಪತ್ತೆ ಹಚ್ಚುವಂತೆ ಸೂಚಿಸಲಾಗುವುದು. ಅಕ್ರಮವಾಗಿ ಹಳ್ಳದಿಂದ ಮರಳು ತೆಗೆಯುವರರ ಮೇಲೆ ಸದಾ ನಿಗಾ ಇಡುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ. 

ಮಲಪ್ರಭಾ ನದಿ ಪ್ರವಾಹದಿಂದ ತೊಂದರೆಗೀಡಾದ ಗ್ರಾಮಗಳಿಗೆ ಆದ್ಯತೆ ನೀಡಿದ್ದರಿಂದ ಅಕ್ರಮ ಮರಳು ದಂಧೆ ಮಾಡುವವರಿಗೆ ಯಾವುದೇ ಭಯವಿಲ್ಲದಂತಾಗಿದೆ. ಈ ಹಿಂದೆ ಅನೇಕ ಬಾರಿ ಟ್ರ್ಯಾಕ್ಟರ್‌ ಹಿಡಿದು ಕೇಸ್‌ ಹಾಕಲಾಗಿದೆ. ಈವರೆಗೂ 40ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ನಾನೇ ಖುದ್ದಾಗಿ ಹೊನ್ನಿಗನೂರ, ತಳ್ಳಿಹಾಳ ಹಳ್ಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆದರೂ ಕದ್ದುಮುಚ್ಚಿ ಅಕ್ರಮ ಮರಳು ಸಾಗಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟ ತಡೆಗೆ ಗುಪ್ತಚರ ತಂಡ ರಚಿಸಿ, ಈ ಮೂಲಕ ದಂಧೆಕೋರರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರೋಣ ತಹಸೀಲ್ದಾರ್‌ ಶರಣಮ್ಮ ಕಾರಿ ಅವರು ಹೇಳಿದ್ದಾರೆ.