ಅರ್ಜೆಂಟೀನಾ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶಾಪ ಕಾರಣವಾಯಿತಾ? ಈ ಚರ್ಚೆ ಜೋರಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಟ್ರಂಪ್ ಯಾರ ಮೇಲೆಲ್ಲೆ ಕೈ ಇಟ್ಟಿದ್ದಾರೋ ಅವರಿಗೆಲ್ಲಾ ಸೋಲೇ ಗತಿ.
ನ್ಯೂಜರ್ಸಿ (ಜು.20) ಫಿಫಾ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಅಂತರದಲ್ಲಿ ಗೆದ್ದು ಬೀಗಿದೆ. ಅರ್ಜೆಂಟೀನಾ ಒಂದು ಗೋಲು ಸಿಡಿಸಲು ಸಾಧ್ಯವಾಗದೆ, ಸ್ಪೇನ್ ಸಿಡಿಸಿದ ಗೋಲು ತಡೆಯಲು ಸಾಧ್ಯವಾಗದೇ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಫುಟ್ಬಾಲ್ ಜಗತ್ತಿನಲ್ಲಿ ಅರ್ಜೆಂಟೀನಾ ಹಾಗೂ ಲಿಯೋನಲ್ ಮೆಸ್ಸಿ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಆದರೆ ಅರ್ಜೆಂಟೀನಾ ಗೆಲ್ಲಲಿಲ್ಲ. ಅರ್ಜೆಂಟೀನಾ ಸೋಲಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಾರಣ ಅನ್ನೋ ಚರ್ಚೆ ಶುರುವಾಗಿದೆ. ಡೋನಾಲ್ಡ್ ಟ್ರಂಪ್ ಯಾರ ಪರ ನಿಂತಿದ್ದಾರೋ ಅವರೆಲ್ಲರು ಸೋಲು ಕಂಡಿದ್ದಾರೆ. ಇದು ಟ್ರಂಪ್ ಅಂಟಿಕೊಂಡಿರುವ ಶಾಪ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಅರ್ಜೆಂಟೀನಾಗೆ ತಟ್ಟಿದ ಟ್ರಂಪ್ ಶಾಪವೇನು?
ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯಕ್ಕೂ ಮುನ್ನ ಡೋನಾಲ್ಡ್ ಟ್ರಂಪ್ ಫುಟ್ಬಾಲ್ ನೇರ ಪ್ರಸಾರದ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ಯಾವ ತಂಡಕ್ಕೆ ನಿಮ್ಮ ಬೆಂಬಲ, ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಉತ್ತರಿಸಿದ ಟ್ರಂಪ್, ನಾನು ಇಲ್ಲಿ ಯಾವ ತಂಡದ ಹೆಸರನ್ನು ಹೇಳುವುದಿಲ್ಲ. ಆದರೆ ಲಿಯೋನಲ್ ಮೆಸ್ಸಿ ಪರ ಇದ್ದೇನೆ. ಮೆಸ್ಸಿ ಉತ್ತಮ ಪ್ರತಿಭಾನ್ವಿತ ಫುಟ್ಬಾಲ್ ಪಟು. ಆತ ಗ್ರೇಟ್ ಕ್ರೀಡಾಪಟು, ಹೀಗಾಗಿ ಮೆಸ್ಸಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಟ್ರಂಪ್ ಹೇಳಿದ್ದರು. ಯಾವಾಗ ಟ್ರಂಪ್ ಮೆಸ್ಸಿ ಪರ ಬ್ಯಾಟ್ ಬೀಸಿದ್ದರೂ ಅವಾಗಲೇ ಹಲವು ಅಭಿಮಾನಿಗಳು ಅರ್ಜೆಂಟೀನಾ ತಂಡದ ಸೋಲು ನಿರೀಕ್ಷೆ ಮಾಡಿದ್ದರು.
ಟ್ರಂಪ್ ಹೊಗಳಿದವರಿಗೆ ಸೋಲೇ ಗತಿ
ಡೋನಾಲ್ಡ್ ಟ್ರಂಪ್ ಕ್ರೀಡೆಯಲ್ಲಿ ಯಾರ ಪರ, ಯಾವ ತಂಡದ ಪರ ನಿಲ್ಲುತ್ತಾರೋ ಅವರು ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು ಅನ್ನೋ ಚರ್ಚೆಗಳಿವೆ. ಟ್ರಂಪ್ ಶಾಪ ಹೊಗಳಿದ ತಂಡ, ಕ್ರೀಡಾಪಟುಗಳ ಮೇಲೆ ಅಂಟಿಕೊಳ್ಳುತ್ತೆ ಎಂದಿದ್ದಾರೆ. ಇದಕ್ಕೆ ಅಭಿಮಾನಿಗಳು ಹಲವು ಉದಾಹರಣೆ ನೀಡುತ್ತಾರೆ.
ಅಮೆರಿಕ ಫುಟ್ಬಾಲ್ ತಂಡಕ್ಕೆ ಹೀನಾಯ ಸೋಲು
ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಫಿಫಾ ವಿಶ್ವಕಪ್ ಆರಂಭದಲ್ಲಿ ಅಮೆರಿಕ ತಂಡದ ಪರ ಅತೀಯಾಗಿ ಬ್ಯಾಟ್ ಬೀಸಿದ್ದರು. ಅಮೆರಿಕದ ಫುಟ್ಬಾಲ್ ಪಟು ಪೊಲರಿಗನ್ ಬ್ಯಾಲೋಗನ್ ರೆಡ್ ಕಾರ್ಡ್ ಶಿಕ್ಷೆ ಹಿಂಪಡೆಯುವಂತೆ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋಗೆ ಮನವಿ ಮಾಡಿದ್ದರು. ಜಿಯಾನಿ ಇನ್ಫಾಂಟಿನೋ ಉತ್ತಮ ಕ್ರೀಡಾಪಟು ಎಂಬ ಸರ್ಟಿಫಿಕೇಟನ್ನು ಟ್ರಂಪ್ ನೀಡಿದ್ದರು. ಪೊಲರಿಗನ್ ಶಿಕ್ಷೆ ರದ್ದಾದ ಬೆನ್ನಲ್ಲೇ ಅಮೆರಿಕ ತಂಡ ಬೆಲ್ಜಿಯಂ ವಿರುದ್ದ 1-4 ಅಂತರದಲ್ಲಿ ಸೋಲು ಕಂಡಿತ್ತು. ಇಷ್ಟೇ ಅಲ್ಲ ಫಿಫಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತ್ತು.
ಎನ್‌ಬಿಎ ಫೈನಲ್
ಎನ್‌ಬಿಎ ಫೈನಲ್ ಪಂದ್ಯಕ್ಕೆ ಡೋನಾಲ್ಡ್ ಟ್ರಂಪ್ ಖುದ್ದು ಹಾಜರಾಗಿದ್ದರು. ಈ ವೇಳೆ ನ್ಯೂರ್ಕ್ ನಿಕ್ಸ್ ತಂಡವನ್ನು ಟ್ರಂಪ್ ಬೆಂಬಲಿಸಿದ್ದರು. ಆದರೆ 13 ಪಂದ್ಯಗಳಲ್ಲಿ ಸೋಲಿಲ್ಲದ ಸರದಾರನಾಗಿದ್ದ ನ್ಯೂಯಾರ್ಕ್ ನಿಕ್ಸ್ ಮುಗ್ಗರಿಸಿತ್ತು.
2025ರಲ್ಲಿ ಟ್ರಂಪ್ ವಾಶಿಂಗ್ಟನ್ ಕಮಾಂಡರ್ಸ್ ಹಾಗೂ ಡೆಟ್ರಾಯಿಟ್ ಲೈಯನ್ಸ್ ಪಂದ್ಯಕ್ಕೆ ಹಾಜರಾಗಿದ್ದರು. ಟ್ರಂಪ್ ವಾಶಿಂಗ್ಟನ್ ಪರ ಬೆಂಬಲ ನೀಡಿದ್ದರು. ಆದರೆ ವಾಶಿಂಗ್ಟನ್ ಸೋಲು ಕಂಡಿತ್ತು. ಗೆದ್ದ ಲಯನ್ಸ್ ತಂಡವನ್ನು ಟ್ರಂಪ್ ಹೊಗಳಿದ್ದರು. ದುರಂತ ಅಂದರೆ NFL ಟೂರ್ನಿಯಲ್ಲಿ ಲಯನ್ಸ್ ತಂಡ 8 ಪಂದ್ಯದಲ್ಲಿ ಸತತ 5 ಪಂದ್ಯ ಸೋತು ಮೊದಲ ಬಾರಿಗೆ NFL ಪ್ಲೇಆಫ್ ಪ್ರವೇಶಿಸದೆ ಹೊರಬಿದ್ದಿತ್ತು. ಇದೀಗ ಅರ್ಜೆಂಟೀನಾ ಸೋಲಿನ ಬೆನ್ನಲ್ಲೇ ಅಭಿಮಾನಿಗಳು ಟ್ರಂಪ್ ಕ್ರೀಡಾ ಶಾಪದ ಕುರಿತು ಭಾರಿ ಚರ್ಚೆಯಾಗುತ್ತಿದೆ.


