ಅಯ್ಯೋ, ಅಡುಗೆಮನೆಯಲ್ಲೇ ನನ್ನ ಜೀವನವೆಲ್ಲ ಕಳೆಯಿತಲ್ಲಾ ಎಂದು ಕೊರಗುವವರು ಹಲವರು. ಯಾರಿಗಾದರೂ ಬೇಕು ಈ ಅಡುಗೆ ಕೆಲಸ ಎಂದು ಅನಿಸುತ್ತದೆ ಒಮ್ಮೊಮ್ಮೆ. ಆದರೆ, ವಿಧಿಯಿಲ್ಲ. ಹೊಟ್ಟೆಗೆ ಬೇಕೆಂದರೆ ಮಾಡಲೇಬೇಕು. ಇಂಥ ಸಂದರ್ಭದಲ್ಲಿ ಅಡುಗೆಯನ್ನೇ ಎಂಜಾಯ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅದಕ್ಕಾಗಿ ಕಿಚನ್‌ಗೆ ಒಂದಿಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕು. 

ಸರಿಯಾಗಿ ಜೋಡಿಸಿಟ್ಟ ಕಿಚನ್

ಕುಕಿಂಗ್ ವಿಷಯಕ್ಕೆ ಬಂದರೆ ಚೆನ್ನಾಗಿ ಜೋಡಿಸಿಟ್ಟ ಅಡುಗೆಮನೆ ಯಾರಿಗಾದರೂ ಖುಷಿ ಕೊಡುತ್ತದೆ. ಉತ್ತಮವಾದ ಸ್ಟೋರೇಜ್‌ಗಳನ್ನೊಳಗೊಂಡ ಅಡುಗೆಕೋಣೆಯನ್ನು ಮಾಡಿಕೊಳ್ಳುವುದು ಮುಖ್ಯ. ಎಷ್ಟು ಜಾಗವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳಿ. ದೊಡ್ಡ ದೊಡ್ಡ ಪ್ಯಾಕೇಜ್‌ಗಳನ್ನೆಲ್ಲ ಒಳಗಿಟ್ಟು ಬಾಗಿಲು ಮುಚ್ಚುವಂಥ ವ್ಯವಸ್ಥೆ ಇರಬೇಕು.

ಅಡುಗೆ ಮನೆಯಲ್ಲಿ ಬಿದ್ದಿದ್ದ ಪೇಂಟಿಂಗ್'ಗೆ ಸಿಕ್ತು ಕೋಟಿ ಕೋಟಿ ದುಡ್ಡು!

ದಿನಬಳಕೆಯ ದಿನಸಿಯನ್ನು ಪಾರದರ್ಶಕ ಜಾರ್‌ಗೆ ಹಾಕಿ ಕೈಯಳತೆ ದೂರದಲ್ಲಿಟ್ಟುಕೊಳ್ಳಿ. ಇದರಿಂದ ಗೊಂದಲಕ್ಕೆ ಅವಕಾಶವಿಲ್ಲ. ಜಾರ್‌ಗಳನ್ನು ಆರಿಸುವಾಗ ಕೂಡಾ ಒಂದೇ ರೀತಿಯ ಹಲವು ಜಾರ್‌ಗಳನ್ನು ತನ್ನಿ. ಇದರಿಂದ ಅವನ್ನು ಜೋಡಿಸಿಟ್ಟಾಗ ಕಿಚನ್ ಶೋಕೇ‌ಸ್‌ನಂತೆ ಕಂಗೊಳಿಸುತ್ತದೆ. ಜೊತೆಗೆ, ಯಾವುದು ಖಾಲಿಯಾಗುತ್ತಾ ಬಂದಿದೆ, ಯಾವುದು ಹೆಚ್ಚಿದೆ ಎಂಬುದೆಲ್ಲ ಕಣ್ಣಳತೆಯಲ್ಲೇ ಗುರುತಿಸಲು ಸಹಾಯವಾಗುತ್ತದೆ. ಫ್ರಿಡ್ಜ್‌ನ್ನು ಅಡುಗೆಮನೆಯಲ್ಲೇ ಇಟ್ಟುಕೊಳ್ಳಿ. ಪದೇ ಪದೆ ತೆಗೆವ ವಸ್ತುಗಳು ಮುಂದಕ್ಕಿರಲಿ. 

ಉತ್ತಮ ಗಾಳಿಬೆಳಕು

ಅಡುಗೆಕೋಣೆಯಲ್ಲಿ ಉತ್ತಮ ಗಾಳಿಬೆಳಕಿದ್ದರೆ ಅಲ್ಲಿ ಸಮಯ ಕಳೆವವರ ಮನಸ್ಸು ಆಹ್ಲಾದಕರವಾಗಿರುತ್ತದೆ. ಇಲ್ಲದಿದ್ದಲ್ಲಿ ಅಡುಗೆಕೋಣೆ ಬೇಗ ಮಲಿನವಾಗುವುದಲ್ಲದೆ, ಆಹಾರಪದಾರ್ಥಗಳು ಬೇಗ ಕೆಡುತ್ತವೆ. ಪದೇ ಪದೇ ಅಡುಗೆಕೋಣೆಯನ್ನು ಸ್ವಚ್ಛಗೊಳಿಸುತ್ತಿರಬೇಕಾಗುತ್ತದೆ. ಇದು ಮೂಡ್ ಹಾಳು ಮಾಡುತ್ತದೆ. ಮೂಡ್ ಹಾಳಾದಾಗ ಮಾಡಿದ ಅಡುಗೆ ರುಚಿಯಾಗುವುದಾದರೂ ಹೇಗೆ? ಇನ್ನು ಮಹಿಳೆಯರು ದಿನದ 4ರಿಂದ 5 ಗಂಟೆಯನ್ನು ಕಿಚನ್‌ನಲ್ಲಿ ಕಳೆಯುತ್ತಾರೆ. ಸ್ಟೌ ಎದುರು ನಿಂತು ಕೆಲಸ ಮಾಡುವುದೆಂದರೆ ಎಷ್ಟು ಶೆಖೆಯಲ್ಲವೇ? ಬೆಂಕಿ ಆರುವ ಭಯದಿಂದ ಫ್ಯಾನ್ ಕೂಡಾ ಬಳಸಲಾಗುವುದಿಲ್ಲ. ಹಾಗಾಗಿ, ಉತ್ತಮ ಗಾಳಿಬೆಳಕು ಕಿಚನ್‌ನಲ್ಲಿರುವಂತೆ ಎಚ್ಚರ ವಹಿಸಿ. 

ಅಡುಗೆಮನೆಗೆ ಸಂಬಂಧಿಸಿದ ಈ ತಪ್ಪು ಅಭ್ಯಾಸಗಳು ನಿಮಗೂ ಇವೆಯೇ?

ಸ್ಮಾರ್ಟ್ ಅಪ್ಲೈಯನ್ಸಸ್

ಟೆಕ್ನಾಲಜಿ ಎಂಬುದು ಬದುಕಿನ ಎಲ್ಲ ಹಂತಕ್ಕೂ ಕಾಲಿಟ್ಟಿದೆ. ಅಂಥದರಲ್ಲಿ ಕಿಚನ್‌ಗೆ ಬರದಿದ್ದರೆ ಹೇಗೆ? ಅಡುಗೆಕೋಣೆಯಲ್ಲಿ ಉತ್ತಮವಾದ ಸ್ಮಾರ್ಟ್ ಅಪ್ಲೈಯನ್ಸ್‌ಗಳಿದ್ದಾಗ ಅವುಗಳನ್ನು ಬಳಿಸಿ ಅಡುಗೆ ಮಾಡುವುದೂ ಮಜಾ ಕೊಡುತ್ತದೆ. ಜೊತೆಗೆ ಅಡುಗೆ ಬೇಗವೂ ಆಗುತ್ತದೆ. ಕಂಫರ್ಟ್ ಲೆವೆಲ್ ಹೆಚ್ಚಿಸುವಂಥ ಓವನ್, ಬ್ಲೆಂಡರ್, ಜ್ಯೂಸರ್, ಎಲೆಕ್ಟ್ರಿಕ್ ಸ್ಟೌವ್ ಸೇರಿದಂತೆ ಅಗತ್ಯವಾದ ಎಲ್ಲ ರೀತಿಯ ಕಾವಲಿಗಳು, ಹೊಸ ವಿನ್ಯಾಸದ ಪಾತ್ರೆಗಳು, ಸ್ಟೈಲಿಶ್ ಗ್ಲಾಸ್ ಹಾಗೂ ಪ್ಲೇಟ್‌ಗಳು ಮುಂತಾದವಿದ್ದರೆ ಎಲ್ಲರಿಗೂ ಅಡುಗೆ ಮಾಡುವ ಬಯಕೆ ಒತ್ತಿಕೊಂಡು ಬರುವುದು.

ಸ್ವಚ್ಛ ಸ್ಥಳ

ನಾವು ಕೆಲಸ ಮಾಡುವ ಸ್ಥಳ ಸ್ವಚ್ಛವಾಗಿದ್ದಾಗ ಮಾತ್ರ ಕೆಲಸ ಮಾಡಲು ಮನಸ್ಸು ಬರುತ್ತದೆ. ಹಾಗಾಗಿ, ಕಿಚನ್‌ನಲ್ಲಿ ಡಸ್ಟ್‌ಬಿನ್‌‌ಗಳು ಕಾಣದಂತೆ ಇಡಲು ರೂಢಿ ಮಾಡಿ. ಹಸಿ ಕಸಕ್ಕೆ ಒಂದು, ಒಣಕಸಕ್ಕೆ 1 ಡಸ್ಟ್‌ಬಿನ್ ಇಟ್ಟುಕೊಳ್ಳಿ. ಹಸಿಕಸವನ್ನು ಮನೆಯ ಗಿಡದ ಪಾಟ್‌ಗಳಿಗೇ ದಿನಕ್ಕೆರಡು ಬಾರಿ ಹಾಕಿದರೆ ಅವಕ್ಕೆ ಗೊಬ್ಬರವೂ ಆಯಿತು, ಅಡುಗೆಮನೆಯಲ್ಲೂ ನುಸಿಯಾಡುವುದಿಲ್ಲ. ಇನ್ನು ಪ್ರತಿ ದಿನ ಅಡುಗೆಯಾದ ಕೂಡಲೇ ಇಡೀ ಅಡುಗೆಕೋಣೆಯನ್ನು ಧೂಳು ಹಾಗೂ ಜಿಡ್ಡು, ಕಸಗಳನ್ನು ಗುಡಿಸಿ ಒರೆಸಿ ಸ್ವಚ್ಛವಾಗಿಡುವ ಅಭ್ಯಾಸ ಮಾಡಿಕೊಳ್ಳಿ. ವಾರಕ್ಕೊಮ್ಮೆ ಫ್ರಿಡ್ಜ್ ಮೇಲೆ, ಕಬೋ‌ರ್ಡ್‌ಗಳನ್ನು ಸ್ವಚ್ಛಗೊಳಿಸಿ. ಇದರಿಂದ ಅಡುಗೆಯೂ ಸ್ವಚ್ಛವಾಗಿರುತ್ತದೆ. ಇನ್ಫೆಕ್ಷನ್ ಭಯವೂ ಇರುವುದಿಲ್ಲ. 

ಹುಳಿ ಹಿಂಡೋಕೆ ಮಾತ್ರವಲ್ಲ, ಲಿಂಬೆ ಹೀಗೂ ಬಲು ಉಪಕಾರಿ!

ಅಡುಗೆ ಯೋಜನೆ

ಅಡುಗೆ ಮಾಡುವವರೆಗೆ ಬೆಳಗ್ಗೆ ಏನು ಮಾಡಲಿ, ಸಂಜೆ ಏನು ಮಾಡಲಿ ಎಂಬ ಗೊಂದಲ ಪ್ರತಿ ದಿನ ಕಾಡಿ ಅದೇ ಒಂದು ಕಿರಿಕಿರಿಯಾಗಿಬಿಟ್ಟಿರುತ್ತದೆ. ಹೀಗಾಗಿ, ಭಾನುವಾರ ಕುಳಿತು ವಾರ ಪೂರ್ತಿಯ ಅಡುಗೆ ಪ್ಲ್ಯಾನ್ ಬರೆದಿಟ್ಟುಕೊಳ್ಳಿ. ಇಂತಿಂಥ ವಾರ, ಈ ಹೊತ್ತಿಗೆ ಇಂಥದನ್ನು ಮಾಡುತ್ತೇನೆಂದುಕೊಂಡರೆ, ಆಗ ದಿನ ಬೆಳಗ್ಗೆದ್ದು ತಲೆ ಕೆಡಿಸಿಕೊಳ್ಳುವ ಪ್ರಮೇಯವೂ ಬರುವುದಿಲ್ಲ. ಜೊತೆಗೆ, ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಳ್ಳಲು ಸಹಾಯವಾಗುತ್ತದೆ. ಇದು ಹಲವು ಸಮಯ ಹಾಗೂ ಪ್ರಯತ್ನಗಳನ್ನು ಉಳಿಸುತ್ತದೆ.