ವಿಜಯಪುರ: ಗಣೇಶ ಹೋದ, ಜೋಕುಮಾರಸ್ವಾಮಿ ಬಂದ ದಾರಿ ಬಿಡಿ..!

ಜೋಕ್ಯಾನನ್ನ ಪೂಜಿಸಿದ್ರೆ ಆಗುತ್ತವಂತೆ ಮಕ್ಕಳು, ಉತ್ತರ ಕರ್ನಾಟಕ ಗ್ರಾಮೀಣ ಪ್ರದೇಶಗಳಲ್ಲಿ ಜೋಕುಮಾರನ ಹಬ್ಬ, ಜೋಕುಮಾರನನ್ನ ಬುಟ್ಟಿಯಲ್ಲಿಟ್ಟು ಮೆರೆಸುವ ಮಹಿಳೆಯರು 

Women Perfom Special Pooja to Jokumaraswamy in Vijayapura grg

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಸೆ.08):  ಆಧುನಿಕತೆಯ ಭರಾಟೆಯಲ್ಲಿ ಅದೆಷ್ಟೋ ಅರ್ಥಪೂರ್ಣ ಆಚರಣೆಗಳು ಮೂಲೆ ಹಿಡಿದಿವೆ. ಇದ್ರಲ್ಲಿ ಜೋಕುಮಾರಸ್ವಾಮಿ ಹಬ್ಬ ಕೂಡ ಒಂದು. ಕಾಮನನ್ನ ಪೂಜಿಸುವಂತೆ ಉತ್ತರ ಕರ್ನಾಟಕದಲ್ಲಿ ಜೋಕುಮಾರನನ್ನು ಪೂಜೆ ಮಾಡ್ತಾರೆ. ಕುಂಬಾರ ಮನೆಯಲ್ಲಿ ಹುಟ್ಟಿದ ಜೋಕುಮಾರನನ್ನ ತಳವಾರ ಸಮುದಾಯದ ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಮನೆ ಮನೆಗೆ ಹೋಗ್ತಾರೆ. ಮಕ್ಕಳಾಗದವ್ರು ಮಣ್ಣಿನ ಜೋಕುಮಾರ ಸ್ವಾಮಿಗೆ ಬೆಣ್ಣೆ ಹಚ್ಚಿ ಪೂಜೆ ಮಾಡ್ತಾರೆ. ರೈತ ಸಮೂದಾಯದವ್ರು ಕಾಳು, ದಾನ್ಯಗಳನ್ನ ನೀಡಿ ಮಳೆಗಾಗಿ ಪ್ರಾರ್ಥಿಸುತ್ತಾರೆ. ಈ ವಿಚಿತ್ರ ಸಂಪ್ರದಾಯವೀಗ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜೀವಂತವಾಗಿದೆ..

ಜೋಕುಮಾರಸ್ವಾಮಿ ಬಂದ ದಾರಿ ಬಿಡಿ

ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಹತ್ತ ಹಲವು ಆಚರಣೆಗಳು, ಸಂಪ್ರದಾಯಗಳಲ್ಲಿ ಜೋಕುಮಾರ ಸ್ವಾಮಿ ಆರಾಧನೆಯು ಒಂದು. ಗಣೇಶ ಚತುರ್ಥಿಯ ನಂತ್ರ 5ನೇ ದಿನಕ್ಕೆ ಗಣೇಶ ಹೋದ ಮೇಲೆ ಬರೋದೆ ಜೋಕುಮಾರನ ಹಬ್ಬ. ಗಣೇಶನಂತೆಯೇ ಜೋಕುಮಾರ ಕೂಡ ಪಾರ್ವತಿ ಪರಮೇಶ್ವರನ ಪುತ್ರ ಎನ್ನಲಾಗುತ್ತೆ.

ಅನಂತ ಚತುರ್ದಶಿ ಮಾಡ್ತಿದ್ದೀರಾ? ಈ ಹಬ್ಬದ ಹಿನ್ನಲೆ ತಿಳಿಯಿರಿ!

ಜೋಕುಮಾರನ ಹುಟ್ಟು-ಸಾವು ಒಳಗೊಂಡ ಹಬ್ಬವಿದು

ಹರಿಜನ ಸಮೂದಾಯದಲ್ಲಿ ಹುಟ್ಟುವ ಜೋಕುಮಾರನಿಗೆ ಕುಂಬಾರ ಸಮೂದಾಯದವರು ಮಣ್ಣಿನಲ್ಲಿ ಮೂರ್ತಿ ಮಾಡಿ ಜೀವ ನೀಡ್ತಾರೆ. ಬಡಿಗ ಸಮುದಾಯದವ್ರು ಕಣ್ಣು ಕೊಡ್ತಾರೆ. ಹಾಗೇ ಜೋಕುಮಾರನನ್ನ ಬುಟ್ಟಿಯಲ್ಲಿಟ್ಟುಕೊಂಡು ಗೌಡರು, ರೈತರ ಮನೆಗಳಿಗೆ ಹೋಗೋರು ತಳವಾರ ಸಮುದಾಯದವ್ರು. 

ಗಣೇಶನಂತೆ ಜೋಕುಮಾರನದ್ದು ಸಡಗರ

ಗಣೇಶ 5 ರಿಂದ 11, 21 ದಿನಗಳ ವರೆಗು ಭಕ್ತರ ಮನೆಯಲ್ಲಿದ್ದು ಸಂಭ್ರಮಕ್ಕೆ ಕಾರಣನಾಗ್ತಾನೆ. ಹಾಗೇ ಜೋಕುಮಾರ ಬಂದಾಗಲು ಸಹ ಸಡಗರ, ಸಂಭ್ರಮಕ್ಕೆ ಕಡಿಮೆ ಏನು ಇರೋದಿಲ್ಲ. ಜೋಕುಮಾರನನ್ನ ಮನೆ ಮನೆಗಳಿಗೆ ಕೊಂಡೊಯ್ಯುವ ಮಹಿಳೆಯರು ಜೋಕುಮಾರನ ಕುರಿತಾದ ಹಾಡು ಹೇಳ್ತಾರೆ. ಗಣೇಶನ ಹಬ್ಬದ ನಂತ್ರ 9 ದಿನಗಳ ಕಾಲ ಜೋಕುಮಾರನ ಆರಾಧನೆ ಮಾಡಲಾಗುತ್ತೆ.

ರೈತರಿಗೆ ಮಳೆ-ಬೆಳೆ ತಂದು ಕೊಡುವ ಜೋಕುಮಾರ..!

ರೈತರು ತಾವು ಬೆಳೆದ ಕಾಳು, ದವಸ-ಧಾನ್ಯಗಳನ್ನ ನೀಡಿ ಪೂಜೆ ಮಾಡ್ತಾರೆ. ಹೀಗೆ ಮನೆ-ಮನೆ ಅಡ್ಡಾಡುವ ಜೋಕುಮಾರ ಪೂಜೆಗೊಂಡು ಜೋಕ್ಯಾನ ಹುಣ್ಣಿಮೆಯಂದು ಕೆರೆಯ ದಡದಲ್ಲಿ ಮಡಿವಾಳ ಕಟ್ಟೆಯಲ್ಲಿ ಸಾಯ್ತಾನೆ ಅನ್ನೋ ನಂಬಿಕೆ ಇದೆ.. ಹೀಗೆ ಬಂದು ಹೋಗುವ ಜೋಕುಮಾರ ಮಳೆ ತರ್ತಾನೆ ಅನ್ನೋ ನಂಬಿಕೆ ರೈತಾಪಿ ಸಮೂದಾಯದಲ್ಲಿ ಗಾಢವಾಗಿದೆ..

ಜೋಕುಮಾರನ ಹಬ್ಬದ ಹಿಂದಿದೆ ಜನಪದ ಕಥೆ

ಜೋಕುಮಾರನ ಹಬ್ಬದ ಹಿಂದೆ ಒಂದು ಜನಪದ‌ ಕಥೆ ಇದೆ. ಈ ಕಥೆ ಅನಾದಿಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಆಗುತ್ತ ಬಂದಿದೆ. ಜೋಕುಮಾರ ಹುಟ್ಟವಾಗ ತಾನು ಸ್ಪುರದೃಪಿಯಾರ್ಬೇಕು ಅಂತ ಶಿವನ ಬಳಿ ವರ ಪಡೆದು ಭೂಮಿಗೆ ಬಂದು ಕಡು ಕಾಮುಕನಾಗಿರ್ತಾನಂತೆ. ಈತನ ಕಾಮುಕತನಕ್ಕೆ ಮಹಿಳೆಯರೆಲ್ಲಾ ತೀವ್ರ ತೊಂದರೆಗೆ ಒಳಗಾಗುತ್ತಾರಂತೆ. ಹೀಗಾಗಿ ಮಹಿಳೆಯರು ನೊಂದು ಜೋಕುಮಾರನಿಗೆ ನೀನು ಕೂರುಪಿಯಾಗಬೇಕೆಂದು ಶಾಪ ಹಾಕುತ್ತಾರಂತೆ. ಕಾಮಚೇಷ್ಟೆ ನಿಲ್ಲದೆ ಇದ್ದಾಗ ಒಂದು ಕೋಮಿನ ಮಹಿಳೆಯರು ಈತನ ಕಾಮಚೇಷ್ಟೆಗೆ ಬೇಸತ್ತು ನದಿಪಾತ್ರದಲ್ಲಿ ಜೋಕುಮಾರನನ್ನು ಕೊಲೆ ಮಾಡಿ ಮಡಿವಾಳರ ಕಲ್ಲಿನ ಕೆಳಗೆ ಬಿಸಾಕಿ ಹೋಗಿರ್ತಾರಂತೆ. ಇದರ ಪ್ರತೀಕವಾಗಿ 9 ದಿನಗಳ ಕಾಲ ಜೋಕುಮಾರನನ್ನ ಆರಾಧನೆ ಮಾಡಲಾಗುತ್ತೆ. 

ಪರಸ್ತ್ರಿಯರನ್ನ ಗೌರವಿಸಬೇಕು ಎನ್ನುವ ನೀತಿಪಾಠ

ಪರಸ್ತ್ರೀಯರನ್ನ ಗೌರವಿಸಬೇಕು ಅನ್ನೋದನ್ನ ಈ ಮೂಲಕ ಜನಪದರು ಹೇಳಿದ್ದಾರೆ. ಪರಸ್ತ್ರೀಯರನ್ನ ಮೋಹಿಸಿದರೆ ಶಿವನಿಂದಲೇ ವರ ಪಡೆದರು ಪ್ರಯೋಜನವಾಗಲಾರದು. ಎಷ್ಟೆ ಬಲಾಢ್ಯ, ಶಕ್ತಿವಂತನಾದರು ಪರಸ್ತ್ರೀಯರನ್ನ ಕಾಮಿಸಿದರೆ ಶಿಕ್ಷೆ ಪಿಕ್ಸ್ ಎನ್ನುವ ಅರ್ಥವು ಈ ಜನಪದ ಕಥೆಯಲ್ಲಿದೆ..

ಮಹಿಳೆಯರು ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?

ಮಕ್ಕಳಿಲ್ಲದವರಿಗೆ ಮಕ್ಕಳನ್ನ ಕರುಣಿಸುವ ಜೋಕುಮಾರ

ವಿಶೇಷ ಅಂದ್ರೆ ಮಕ್ಕಳಿಲ್ಲದವ್ರು ಜೋಕುಮಾರನ ಮುಖಕ್ಕೆ ಬೆಣ್ಣೆ ಹಚ್ಚಿ ಪೂಜೆ ಮಾಡಿದ್ರೆ ಮಕ್ಕಳಾಗುತ್ವೆ ಅನ್ನೋ ನಂಬಿಕೆ ಇದೆ. ಕಣ್ಣಿನ ಸೊಂಕಿಗೆ ಒಳಗಾದವ್ರು ಈ ಬೆಣ್ಣೆಯನ್ನ ಹಚ್ಚಿಕೊಳ್ತಾರೆ. ಮಣ್ಣಿನಲ್ಲಿ ತಯಾರಿಸಿರುವ ಜೋಕುಮಾರನ ಮೂರ್ತಿ ಬಿರುಕು ಬಿಟ್ರೆ ಆ ವರ್ಷ ಉತ್ತಮವಾಗಿ ಮಳೆಯಾಗತ್ತೆ ಅನ್ನೋ ನಂಬಿಕೆಯು ಸಹ ಇದೆ. ಹೀಗಾಗಿ ಈ ಜೋಕುಮಾರ ಹಬ್ಬ ತೀರಾ ವಿಶೇಷ ಎನಿಸಿಕೊಂಡಿದೆ.

ಪರರ ಹೆಣ್ಣುಮಕ್ಕಳ ಬಗ್ಗೆ ಗೌರವ ಇರಲಿ

ಪರಸ್ತ್ರೀಯರ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಕಾಮುಕನಾಗಿ ವರ್ತಿಸಬಾರದು, ಯಾವುದೇ ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ನೊಡಬಾರದು. ಇಲ್ಲದಿದ್ದರೆ ಅಂಥವರಿಗೆ ಕೆಟ್ಟ ಪರಿಣಾಮ ಆಗುತ್ತದೆ ಎಂಬ ತತ್ವ ಜೋಕುಮಾರನ ಹಬ್ಬದಲ್ಲಿ ಅಡಗಿದೆ. ನಮ್ಮ ಜನಪದ ಸಾಹಿತ್ಯದ ಮೂಲಕ ಜೋಕುಮಾರನ ಬಗ್ಗೆ ಹಾಡುಗಳಿಗೆ. ಅಂಥ ಹಾಡುಗಳ ಮೂಲಕ ತಿಳವಳಿಕೆ ನೀಡಲಾಗುತ್ತಿದೆ.
 

Latest Videos
Follow Us:
Download App:
  • android
  • ios