ಇಂದು ಈದ್‌ ಮಿಲಾದ್‌: ಸಮ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್, ನವಾಝ್‌ ಅಬ್ಬೆಟ್ಟು

ಪೈಗಂಬರ್‌ ಅವರ ಸಂದೇಶ ಒಂದು ಪ್ರದೇಶ, ಕಾಲಕ್ಕೆ ಸೀಮಿತಲ್ಲ, ಅದು ವಿಶ್ವಕ್ಕೇ ಮಾದರಿ: ಎಂ.ನವಾಝ್‌ ಅಬ್ಬೆಟ್ಟು

Prophet Muhammad's Message is Model for the World grg

ಬೆಂಗಳೂರು(ಸೆ.28):  ಇಸ್ಲಾಮಿನ ಅಂತ್ಯ ಪ್ರವಾದಿ ಮುಹಮ್ಮದರ ಜನ್ಮ ದಿನ ಇಂದು. ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಕೇವಲ ಬೋಧನೆಗೆ ಸೀಮಿತಗೊಳಿಸದ ಪ್ರವಾದಿ ಮುಹಮ್ಮದರು, ಅಂಧಕಾರದಲ್ಲಿ ಮುಳುಗಿದ್ದ ಸಮಾಜವನ್ನು ತನ್ನ 23 ವರ್ಷಗಳ ಪ್ರವಾದಿತ್ವದ ಕಾಲದಲ್ಲಿ ನಾಗರೀಕತೆಯ ಉನ್ನತ ಮಟ್ಟಕ್ಕೆ ಏರಿಸಿದರು.

ಇಸ್ಲಾಮಿನ ಅಂತ್ಯ ಪ್ರವಾದಿ ಮುಹಮ್ಮದರ ಜನ್ಮ ದಿನ ಮತ್ತೆ ಆಗಮಿಸಿದೆ. ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಕೇವಲ ಬೋಧನೆಗೆ ಸೀಮಿತಗೊಳಿಸದ ಪ್ರವಾದಿ ಮುಹಮ್ಮದರು, ಅಂಧಕಾರದಲ್ಲಿ ಮುಳುಗಿದ್ದ ಅರಬರನ್ನು ತನ್ನ 23 ವರ್ಷಗಳ ಪ್ರವಾದಿತ್ವದ ಕಾಲದಲ್ಲಿ ನಾಗರೀಕತೆಯ ಉನ್ನತ ಮಟ್ಟಕ್ಕೆ ಏರಿಸಿದರು. ವಿಶ್ವದೆಲ್ಲೆಡೆ ಇಂದು ಪ್ರವಾದಿ ಜನ್ಮದಿನವನ್ನು ಆಚರಿಸಲಾಗುತ್ತಿದೆ.

ಸಂಕಷ್ಟ ಪರಿಹರಿಸುವ ಜೋಕುಮಾರ ಸ್ವಾಮಿ..!

ವಿಶ್ವದಲ್ಲೇ ಮನುಷ್ಯ ಸೃಷ್ಟಿಕರ್ತನಾದ ದೇವನ ವಿಶೇಷ ಸೃಷ್ಟಿ. ಮನುಷ್ಯನ ಜೀವನಕ್ಕೊಂದು ಉದ್ದೇಶವಿದೆ. ಅದೇ ರೀತಿ ಮನುಷ್ಯನಿಗೆ ಘನತೆ ಗೌರವ ಔನ್ನತ್ಯವೂ ಇದೆ. ಘನತೆ ಮತ್ತು ಗೌರವವು ವ್ಯಕ್ತಿ ಮತ್ತು ಸಮಾಜದ ಪಾಲಿಗೆ ಊಟ, ಉಡುಗೆ ಮತ್ತು ಭೌತಿಕ ಅವಶ್ಯಕತೆಗಳಿಗಿಂತಲೂ ಮುಖ್ಯವಾದುದು. ಘನತೆ ಮತ್ತು ಗೌರವವಿಲ್ಲದ ಜೀವನಕ್ಕಿಂತ ಮರಣವೇ ಉತ್ತಮವೆಂದು ಹೇಳಲಾಗುತ್ತದೆ. ಅದೇ ರೀತಿ ಒಂದು ಸಮಾಜದಲ್ಲಿ ವ್ಯಕ್ತಿಗಳ ನಡುವೆ ಸಮಾನತೆ ಇಲ್ಲದಿದ್ದರೆ ಅಥವಾ ಉಚ್ಚ ನೀಚತೆಯ ಯಾವುದೇ ರೂಪವು ಕಂಡು ಬಂದರೆ ಆ ಸಮಾಜವು ಎಂದೂ ಸುಭಿಕ್ಷೆ ಮತ್ತು ಶಾಂತಿ ಪೂರ್ಣವಾಗಿರಲು ಸಾಧ್ಯವಿಲ್ಲ.

ಮನುಷ್ಯರಲ್ಲಿ ಕಂಡು ಬರುವ ವರ್ಣ ಜನಾಂಗ, ಅನುವಂಶೀಯತೆ, ಭಾಷೆ ವೈವಿಧ್ಯಮಯ ಜೀವನ ಶೈಲಿ ದೇಶೀಯ ಭೌಗೋಳಿಕ ಭಿನ್ನತೆಗಳು ಸೃಷ್ಟಿಕರ್ತನಾದ ದೇವನ ಅನೇಕ ದೃಷ್ಟಾಂತಗಳ ಪೈಕಿ ಕೆಲವು ದೃಷ್ಟಾಂತಗಳು ಎಂದು ಇಸ್ಲಾಮ್ ಪರಿಗಣಿಸುತ್ತದೆ. ಈ ವೈವಿದ್ಯತೆಯನ್ನು ದೇವನ ಸಾಮರ್ಥ್ಯದ ಒಂದು ಸಂಕೇತವೆಂದು ಮನುಷ್ಯ ಕಂಡುಕೊಳ್ಳದಿರುವುದು ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಈ ಭಿನ್ನತೆಗಳನ್ನು ಉಚ್ಚ-ನೀಚತೆಯ ಆಚರಣೆಗೆ ಬುನಾದಿಯನ್ನಾಗಿ ಪರಿಗಣಿಸುವುದು ದುರದೃಷ್ಟಕರವಾಗಿದೆ.

ಪೈಗಂಬರರ ಸಂದೇಶದ ಸಾರ

ಮಾನವ ಪ್ರೇಮವು ಪ್ರವಾದಿ ಮುಹಮ್ಮದ್‌ರವರ ಶಿಕ್ಷಣದ ವಿಶೇಷತೆಯಾಗಿದೆ. ಅದರಂತೆಯೇ ಅವರ ಶಿಕ್ಷಣದ ಇನ್ನೊಂದು ಉಜ್ವಲ ಮುಖ ಸಮಾನತೆಯಾಗಿದೆ. ಪ್ರವಾದಿವರ್ಯರಿಗೆ ದೇವನಿಂದ ಅವತೀರ್ಣಗೊಂಡ ದೈವಿಕ ವಾಣಿ ಕುರ್‌ಆನ್ ಈ ರೀತಿಯಾಗಿ ಪ್ರತಿಪಾದಿಸುತ್ತದೆ. “ಜನರೇ ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಗಳನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ -ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು. (ಕುರ್‌ಆನ್: 4:1)

“ಜನರೇ ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟು ಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಳನ್ನು ಗೋತ್ರಗಳನ್ನೂ ಮಾಡಿದೆವು” (ಕುರ್‌ಆನ್ 49:13)
ಆದ್ದರಿಂದ ಮಾನವ ಕುಲದ ಮೂಲ ಒಂದೇ ಆಗಿದೆ. ಅದೇ ವಂಶ ಪರಂಪರೆಯಿಂದ ಅವನು ಕುಲ ಗೋತ್ರ ದೇಶ ಮತ್ತು ವರ್ಗಗಳಲ್ಲಿ ಹರಿ ಹಂಚಿ ಹೋಗಿದ್ದಾನೆ. ಆ ವ್ಯತ್ಯಾಸದ ಹೊರತಾಗಿಯೂ ಅವರಲ್ಲಿ ಪರಸ್ಪರ ಐಕ್ಯ ಮತ್ತು ಸಹಕಾರದ ಸಂಬಂಧವಿರುತ್ತದೆ.

“ತಿಳಿಯಿರಿ! ರಕ್ತ ಮತ್ತು ಸಂಪತ್ತಿನ ಆಧಾರದಲ್ಲಿರುವ ಎಲ್ಲಾ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು”

ವಿಶ್ವ ಬಾಂಧವ್ಯ ಮತ್ತು ಮಾನವ ಸಮಾನತೆಯ ಸಂದೇಶವು ಮಾನವ ಕುಲದ ಉದ್ದಾರಕ್ಕೆ ಮುಹಮ್ಮದರು ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಲೋಕದ ಅನೇಕ ಪ್ರಮುಖ ಧರ್ಮಗಳು ಮತ್ತು ಸಿದ್ಧಾಂತಗಳು ಈ ಸಂದೇಶವನ್ನು ಪ್ರತಿಪಾದಿಸಿದೆ. ಆದರೆ ಪ್ರವಾದಿ ಮುಹಮ್ಮದ್(ಸ)ರ ವಿಶೇಷತೆ ಅಂದರೆ ಅವರದನ್ನು ಕಾರ್ಯರೂಪಕ್ಕೆ ತಂದರು. ಅವರು ತಮ್ಮ ಕೊನೇಯ ಭಾಷಣದಲ್ಲಿ ತಮ್ಮ ಅನುಯಾಯಿಗಳಿಗೆ ನೀಡಿದ ಸಂದೇಶವು ಜಗತ್ತು ಇಂದಿಗೂ ಸ್ಮರಿಸುತ್ತದೆ. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು. ತಿಳಿಯಿರಿ! ರಕ್ತ ಅಥವಾ ಸಂಪತ್ತಿನ ಆಧಾರದಲ್ಲಿರುವ ಎಲ್ಲಾ ಶ್ರೇಷ್ಠತೆಗಳನ್ನು ನಾನು ನನ್ನ ಕಾಲಿನಿಂದ ತುಳಿದಿರುವೆನು."

ಸಮಾಜಕ್ಕಂಟಿದ ಮಾರಕ ರೋಗ

ವಿಜ್ಞಾನ- ತಂತ್ರಜ್ಞಾನಗಳ ಅಭೂತಪೂರ್ವ ಬೆಳವಣಿಗೆಯಿಂದ ನಾವು ಬಹಳಷ್ಟು ಪ್ರಗತಿಯನ್ನು ಖಂಡಿತವಾಗಿಯೂ ಸಾಧಿಸಿದ್ದೇವೆ. ಚಂದ್ರಯಾನ -3ರ ಯಶಸ್ಸು ನಮ್ಮ ಕಣ್ಣ ಮುಂದಿದೆ. ಆದರೆ, ನಾಗರೀಕತೆಯು ಉತ್ತುಂಗಕ್ಕೆ ಏರಿದ್ದರೂ ನಮ್ಮ ''ಮಾನಸಿಕತೆ'' ಬದಲಾಗಿದೆಯೇ? ನಾವೊಮ್ಮೆ ನಮ್ಮ ಸಮಾಜದ ಕಡೆಗೆ ಕಣ್ಣು ಹಾಯಿಸೋಣ. ಸಂಪತ್ತು ಮತ್ತು ಅಧಿಕಾರ ಉಳ್ಳವರಿಗಷ್ಟೇ ಇಂದು ಗೌರವ ಮತ್ತು ಔನ್ನತ್ಯವಿದೆ. ಈ ವರ್ಷ ಬಿಡುಗಡೆಯಾಗಿರುವ ಆಕ್ಸ್ ಫಾಮ್ ಇಂಡಿಯಾದ (OXFAM INDIA) ಅಧ್ಯಯನ ವರದಿಯ ಪ್ರಕಾರ 5% ಜನರಲ್ಲಿ ಭಾರತದ ಒಟ್ಟು 60% ಸಂಪತ್ತಿದೆ ಮತ್ತು ತಳದಲ್ಲಿರುವ 50% ಜನರಲ್ಲಿ ದೇಶದ ಸಂಪತ್ತಿನ ಕೇವಲ 3% ಹಂಚಿ ಹೋಗಿದೆ. ದೇಶದಲ್ಲಿ ಆರ್ಥಿಕ ಅಸಮಾನತೆಯು ತಾಂಡವಾಡುತ್ತಿದೆ ಮತ್ತೆ ಬಡತನ ಹೆಚ್ಚಾಗುತ್ತಿದೆ. ಜಾಗತಿಕ ಹಸಿವು ಸೂಚ್ಯಂತ 2022ರ ಪ್ರಕಾರ ಒಟ್ಟು 121 ದೇಶಗಳ ಸಾಲಿನಲ್ಲಿ ಭಾರತವು 107ನೇ ಸ್ಥಾನಕ್ಕೆ ಕುಸಿದಿದೆ. ಈ ಕಾರಣದಿಂದಾಗಿ ನಿರುದ್ಯೋಗ ಮತ್ತೆ ಆರೋಗ್ಯ ಸಮಸ್ಯೆಗಳು ದಿನನಿತ್ಯ ಹೆಚ್ಚಾಗುತ್ತಿದೆ.

ಜಾತಿ ತಾರತಮ್ಯದ ಸಮಸ್ಯೆ ಕೂಡ ನಮ್ಮಲ್ಲಿ ತಲೆತಲಾಂತರದಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ. ಜಾತಿ ಹೆಸರಿನಲ್ಲಿ ನಡೆಯುವ ಹಿಂಸೆ ಮತ್ತು ಅಪರಾಧಗಳು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ ಮತ್ತು ಜನರನ್ನ ಒಂದು ರೀತಿ ಆಧುನಿಕ ಗುಲಾಮಗಿರಿಯಲ್ಲಿ ಇಡಲಾಗುತ್ತಿದೆ. ಆದರೆ ಪ್ರವಾದಿ ಮುಹಮ್ಮದರು ಸಮಾನತೆಯ ಉದಾತ್ತ ಸಿದ್ಧಾಂತಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಬೋಧಿಸಿದ್ದರು. ಮಾತ್ರವಲ್ಲದೆ, ತಮ್ಮ ಜೀವಿತಾವಧಿಯಲ್ಲಿಯೇ ಸಮಾನತೆಯ ತತ್ವಗಳ ಆಧಾರದಲ್ಲಿ ಒಂದು ಆದರ್ಶ ನಿಷ್ಠ ಸಮಾಜವನ್ನು ನಿರ್ಮಿಸಿ ಅದನ್ನು ಪ್ರಳಯ ಕಾಲದವರೆಗೆ ಮಾದರಿಯನ್ನಾಗಿ ಒದಗಿಸಿದ್ದಾರೆ.

ಅವರು ತೋರಿಸಿದ ಆರಾಧನೆಗಳಂತೂ ಮಾನವ ಸಮಾನತೆಯ ಸಾಕ್ಷಾತ್ ಉದಾಹರಣೆಗಳಾಗಿವೆ. ನಮಾಜ್‌ ನಲ್ಲಿ ರಾಜ - ಪ್ರಜೆ, ಬಡವ - ಬಲ್ಲಿದ, ಬಿಳಿಯ - ಕರಿಯ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಸಾಲಿನಲ್ಲಿ ಭುಜಕ್ಕೆ ಭುಜ ಕೊಟ್ಟು ನಿಲ್ಲುತ್ತಾರೆ. ರಾಜ, ವಿದ್ವಾಂಸ, ಶ್ರೀಮಂತ, ಜನನಾಯಕರಿಗೆಂದು ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗುವುದಿಲ್ಲ. ಈ ಸಮಾನತೆಯನ್ನು ಲೋಕದ ಎಲ್ಲೆಡೆ ಮಸೀದಿಗಳಲ್ಲಿ ಕಾಣಬಹುದು. ಇದು ಮನುಷ್ಯ ಸಮಾನತೆಯ ಪ್ರಾಯೋಗಿಕ ರೂಪ. ಪ್ರಮುಖ ಆರಾಧನಾ ಕರ್ಮವಾದ ಉಪವಾಸ ವ್ರತವನ್ನು ಎಲ್ಲರೂ ಒಟ್ಟಿಗೆ ಒಂದೇ ಸಮಯದಲ್ಲಿ ಆಚರಿಸುತ್ತಾರೆ. ಹಸಿವು ಬಡವನಿಗೆಂಬಂತೆ ಶ್ರೀಮಂತನಿಗೂ ರಾಜನಿಗೂ ಆಗುತ್ತದೆ. ಅದು ಎಲ್ಲರ ಮೇಲೂ ಕಡ್ಡಾಯವಾಗಿದೆ.

ಇದೇ ಸಮಾನತೆಯನ್ನು ಹಜ್ ಕರ್ಮದಲ್ಲೂ ಕಾಣ ಬಹುದು. ಅಲ್ಲಿ ವಿವಿಧ ಪ್ರದೇಶ - ನಾಡುಗಳ, ವಿವಿಧ ಗೋತ್ರ - ಜನಾಂಗಗಳ ಮತ್ತು ವಿವಿಧ ವರ್ಣ - ವರ್ಗಗಳ ಜನರು ಒಂದುಗೂಡಿ ಒಂದೇ ಸಮವಸ್ತ್ರ ಧರಿಸಿ ಹಜ್ ನಿರ್ವಹಿಸುವಾಗ ಮಾನವ ನಿರ್ಮಿತ ತಾರತಮ್ಯದ ಎಲ್ಲಾ ಗೋಡೆಗಳು ಕುಸಿದು ಬೀಳುತ್ತವೆ. ಇಲ್ಲಿ ಯಾರೂ ದೊಡ್ಡವರಿಲ್ಲ, ಯಾರೂ ಸಣ್ಣವರಲ್ಲ. ಸೃಷ್ಟಿಕರ್ತನಾದ ದೇವನು ಮಾತ್ರ ದೊಡ್ಡವನು ಎಂಬುದರ ಪ್ರಾಯೋಗಿಕ ದೃಶ್ಯ ಗೋಚರಿಸುತ್ತದೆ.

ಸಮಾನತೆಯ ಸಂದೇಶ

ಮಾನವನಿಗೆ ಸಲ್ಲಬೇಕಾದ ನಿಜವಾದ ಗೌರವದ ಪರಾಕಾಷ್ಠೆಯ ದೃಶ್ಯವನ್ನೊಮ್ಮೆ ನೋಡೋಣ. ಮಕ್ಕಾ ವಿಜಯವಾದ ಬಳಿಕ ಪವಿತ್ರ ಕಾಬಾಲಯವನ್ನು ಸ್ವಚ್ಛಗೊಳಿಸಿದ ಬಳಿಕ, ಅಜ್ಞಾನ ಕಾಲದಲ್ಲಿ ಸ್ಥಾನಮಾನದಲ್ಲೂ ಮೈ ಬಣ್ಣದಲ್ಲೂ ಅತೀ ನಿಕೃಷ್ಟನೆಂದು ಪರಿಗಣಿಸಲ್ಪಟ್ಟಿದ್ದ ಬಿಲಾಲ್ ರನ್ನು ಪ್ರವಾದಿ ಮುಹಮ್ಮದರು ಹತ್ತಿರ ಕರೆಯುತ್ತಾರೆ. ಪವಿತ್ರ ಕಾಬಾದ ಗೋಡೆಗಳ ಮೇಲೇರಿ ಸೃಷ್ಟಿಕರ್ತನ ಮಹಾನತೆಯ ಘೋಷಣೆ (ಆಜಾನ್ ಅಥವಾ ಬಾಂಗ್)ಯನ್ನು ಸಾರ್ವತ್ರಿಕವಾಗಿ ಸಾರುವಂತೆ ಅವರಿಗೆ ಆಜ್ಞಾಪಿಸುತ್ತಾರೆ. ಇಂತಹ ಉದಾಹರಣೆಯು ಇಂದಿನ ಅತ್ಯಂತ ಸುಸಂಸ್ಕೃತ ಸಮಾಜದಲ್ಲೂ ಊಹಿಸಲಿಕ್ಕೆ ಸಾಧ್ಯವಿಲ್ಲ.

ಅಸ್ಪೃಶ್ಯತೆ ಮತ್ತು ಉಚ್ಚ- ನೀಚತೆಯ ಆಚರಣೆಯು ಅತ್ಯಂತ ನಿಕೃಷ್ಟ ಮನಸ್ಥಿತಿಯಾಗಿದೆ. ನಮ್ಮ ದೇಶದಲ್ಲಿ ಇಂದಿಗೂ ಇದನ್ನು ಆಚರಿಸುವುದು ಅತ್ಯಂತ ದುರದೃಷ್ಟಕರವಾಗಿದೆ. ಜಾತಿಯ ಆಧಾರದಲ್ಲಿ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ಮಾತ್ರವಲ್ಲದೆ, ಆರಾಧಾನಾಲಯಗಳಿಗೂ ಬಹಿಷ್ಕಾರ ಹಾಕುವಂತಹ ಮತ್ತು ಬಾವಿಯ ನೀರನ್ನು ಕುಡಿದರೆಂಬ ಕಾರಣಕ್ಕೆ ಇಡೀ ಬಾವಿಯನ್ನೇ ಶುದ್ಧಿಗೊಳಿಸುವಂತಹ ಅಮಾನವೀಯ ಘಟನೆಗಳು ನಡೆಯುತ್ತಿವೆ. ಪ್ರವಾದಿ ಮುಹಮ್ಮದರು 14 ಶತಮಾನಗಳ ಹಿಂದೆಯೇ ಈ ಭೇದಭಾವವನ್ನು ಅಳಿಸಿ ಹಾಕಿ ಮಾನವನಿಗೆ ಶ್ರೇಷ್ಠ ಪದವಿ ಪ್ರದಾನ ಮಾಡಿದ್ದರು.

ಸಮಾನತೆಯ ನುಡಿಮುತ್ತುಗಳು

ಇಡೀ ಮಾನವ ಕುಲಕ್ಕೆ ಶ್ರೇಷ್ಠತೆಯನ್ನು ದಯಪಾಲಿಸಲಾಗಿದೆ ಎಂದು ಕುರ್ ಆನ್ ಸಾರುತ್ತದೆ. "ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದುದೂ ಅವರಿಗೆ ನೆಲ ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಡತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ." (ಕುರ್''ಆನ್, 17:70)

ಅನಂತ ಚತುರ್ದಶಿ,ಶಿವನ ಆಶೀರ್ವಾದ ಪಡೆಯುವ 5 ರಾಶಿಯವರು ಇವರೇ..!

ಅಷ್ಟೇ ಅಲ್ಲ, ''ಮಾನವನನ್ನು ಅತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಟಿಸಿರುತ್ತೇವೆ'' ಎಂದೂ ಕುರ್ ಆನ್ ಹೇಳುತ್ತದೆ. ''ಮನುಷ್ಯನು ಹುಟ್ಟುವಾಗ ಪಾಪದಿಂದ ವಿಮುಕ್ತನಾಗಿದ್ದು ಪರಿಶುದ್ಧನಾಗಿರುತ್ತಾನೆ'' ಎಂದು ಪ್ರವಾದಿ (ಸ) ಹೇಳಿರುವರು. ಆತನ ಪೂರ್ವಿಕರು ಮಾಡಿರಬಹುದಾದ ಯಾವುದೇ ಪಾಪ ಕಾರ್ಯಗಳಿಗೆ ಆತನನ್ನು ಹೊಣೆಗಾರರನ್ನಾಗಿ ಮಾಡುವಂತಿಲ್ಲ.

"ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊರೆಯನ್ನು ಹೊರುವುದಿಲ್ಲ."
(ಕುರ್ ಆನ್, 6:164)

ಪ್ರವಾದಿ ಮುಹಮ್ಮದರು ಹೇಳಿರುವರು, "ಎಲ್ಲಾ ಸೃಷ್ಟಿಗಳೂ ಅಲ್ಲಾಹನ ಕುಟುಂಬವಾಗಿದ್ದು ಆತನ ಕುಟುಂಬದವರೊಂದಿಗೆ ಸದ್ವರ್ತನೆ ತೋರುವವನೇ ಅಲ್ಲಾಹನಿಗೆ ಅತೀ ಹೆಚ್ಚು ಪ್ರಿಯನು”. "ಎಲ್ಲಾ ಮನುಷ್ಯರು ಪರಸ್ಪರ ಸಹೋದರರು ಎಂಬುದಕ್ಕೆ ನಾನು ಸಾಕ್ಷ್ಯ ವಹಿಸುತ್ತೇನೆ." "ಅಲ್ಲಾಹನು ನಿಮ್ಮ ರೂಪ ಮತ್ತು ನಿಮ್ಮ ಸಂಪತ್ತನ್ನು ನೋಡುವುದಿಲ್ಲ. ಅಲ್ಲಾಹ್ ನಿಮ್ಮ ಅಂತರಂಗವನ್ನೂ ನಿಮ್ಮ ಕರ್ಮವನ್ನು ನೋಡುತ್ತಾನೆ."

ಒಂದು ಆದರ್ಶಪ್ರಾಯ ಸಮ ಸಮಾಜವನ್ನು ನಿರ್ಮಿಸಿದ ಪ್ರವಾದಿ ಮುಹಮ್ಮದರು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾದವರಲ್ಲ. ಈ ಭೂಲೋಕದಲ್ಲಿರುವ ಪ್ರತಿಯೊಬ್ಬರಿಗೂ ಅವರು ಪ್ರವಾದಿಯಾಗಿದ್ದಾರೆ. ಅವರ ಸಂದೇಶವು ಯಾವುದೇ ಒಂದು ಪ್ರದೇಶ, ಕಾಲಕ್ಕೆ ಸೀಮಿತವಾದುದಲ್ಲ. ಅದು ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಿದೆ.

ಪೈಗಂಬರ್‌ ಅವರ ಸಂದೇಶ ಒಂದು ಪ್ರದೇಶ, ಕಾಲಕ್ಕೆ ಸೀಮಿತಲ್ಲ, ಅದು ವಿಶ್ವಕ್ಕೇ ಮಾದರಿ: ಎಂ.ನವಾಝ್‌ ಅಬ್ಬೆಟ್ಟು

Latest Videos
Follow Us:
Download App:
  • android
  • ios