ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲನೇ ದಿನ ಊರಿನವರು ಮನೆಯಲ್ಲಿ ಹಬ್ಬ ಆಚರಿಸಿದರೆ, ಎರಡನೇ ದಿನ ಸ್ಥಳೀಯರು ಹಬ್ಬ ಆಚರಿಸುತ್ತಾರೆ. 

ಉತ್ತರಕನ್ನಡ(ಜು.28):  ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸುಪ್ರಸಿದ್ಧ ಮಾರಿ ಜಾತ್ರೆಯು ಬುಧವಾರ ಮಾರಿಕಾಂಬೆ ದೇವಸ್ಥಾನದ ಗದ್ದುಗೆ ಏರುವುದರ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು.‌ ಮಂಗಳವಾರ ರಾತ್ರಿ ಮಾರಿಕಾಂಬೆ ದೇವಿ ಮೂರ್ತಿಯ ತಯಾರಕರಾದ ವಿಶ್ವಕರ್ಮ ಸಮಾಜದವರಿಂದ ವಿಶೇಷ ಪೂಜೆ ಸಂಪನ್ನಗೊಂಡ ಬಳಿಕ ಮಾರಿ ದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಸಂಪ್ರದಾಯದಂತೆ ಜೈನ ಸಮುದಾಯದವರಿಂದ ದೇವಿಗೆ ಮೊದಲ ಪೂಜೆ ಸಲ್ಲಿಸಲಾಯಿತು. 

Add Asianetnews Kannada as a Preferred SourcegooglePreferred

ಸುಮಾರು 25 ವರ್ಷಗಳ ಹಿಂದೆ ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ವಿಶಿಷ್ಠ ಜಾತ್ರೆಯಾಗಿತ್ತು. ಆದರೆ, ಇಂದು ಜಿಲ್ಲೆಯಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯುವ ಮಾರಿ ಜಾತ್ರೆಗಳಲ್ಲಿ ಭಟ್ಕಳ ತಾಲೂಕಿನ ಮಾರಿ ಜಾತ್ರೆಯೂ ಒಂದಾಗಿದೆ. 

ಭಟ್ಕಳದಲ್ಲಿ ಇಂದು,ನಾಳೆ ಸುಪ್ರಸಿದ್ಧ ಮಾರಿ ಜಾತ್ರೆ

ಬುಧವಾರ ತರಲಾದ ಮಾರಿಕಾಂಬೆ ದೇವಿಯ ಮೂರ್ತಿಯನ್ನು ದೇವಳದ ಎದುರಿನ ಪ್ರಾಂಗಣದ ಗರ್ಭಗುಡಿಯ ಹೊರಗಡೆಯಿರಿಸಿ, ಬಳಿಕ ಪ್ರತಿಷ್ಠಾಪನೆ ಮಾಡಲಾಯಿತು. ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷಗಳ ಕಾಲ ದೇವಸ್ಥಾನದ ಆಡಳಿತ ಮಂಡಳಿ ವಿಧಿ ವಿಧಾನಗಳ ಮೂಲಕ ಮಾರಿ ಜಾತ್ರೆ ಆಚರಿಸಿದ್ದು, ಈ ಬಾರಿ ಮಾತ್ರ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 

ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿನ ಊರಿನವರು ಮನೆಯಲ್ಲಿ ಹಬ್ಬ ಆಚರಿಸಿದರೆ, ಎರಡನೇ ದಿನ ಸ್ಥಳೀಯರು ಹಬ್ಬ ಆಚರಿಸುತ್ತಾರೆ. ಈ ಹಬ್ಬದ ಹೆಸರಿನಲ್ಲಿ ಭಕ್ತರು ಕೋಳಿಯನ್ನು ತಮ್ಮ ಮನೆಯಲ್ಲಿಯೇ ಕತ್ತರಿಸಿ ದೇವಿಗೆ ರಕ್ತ ಸಮರ್ಪಿಸುವ ಆಚರಣೆಯನ್ನೂ ಪಾಲಿಸಲಾಗುತ್ತದೆ. ಸಂಭ್ರಮದಿಂದ ಜರುಗುವ ಈ ಜಾತ್ರೆಯಲ್ಲಿ ಮೊದಲನೇ ದಿನ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದಿದ್ದು, ಜಾತ್ರಾ ಸಂಭ್ರಮ ಮುಗಿಯುವವರೆಗೂ ಅಕ್ಕ ಪಕ್ಕದ ತಾಲೂಕಿನಿಂದಲೂ ಭಕ್ತರು ಬಂದು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಮಾರಿ ರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟಲು ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುವುದು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದು.

Ramanagara: ಶ್ರವಣಬೆಳಗೊಳದ ಗೊಮ್ಮಟೇಶ್ವರ ನಂತರ ಶ್ರೀ ಚಾಮುಂಡೇಶ್ವರಿ ತಾಯಿಗೆ ಮಹಾಮಸ್ತಾಭಿಷೇಕ

ಪ್ರತಿ ವರ್ಷವೂ ಕೂಡ ತಮ್ಮ ಕಷ್ಟ ಕಾರ್ಪಣ್ಯಗಳು ದೂರಾಗಲಿ ಎಂದು ಹರಕೆ ಹೊರುವ ಭಕ್ತರು, ವಾರ್ಷಿಕ ಜಾತ್ರೆಯಲ್ಲಿ ಹರಕೆ ತೀರಿಸುವುದು ವಾಡಿಕೆಯಾಗಿದೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಕೆ ತೀರಿಸುವಲ್ಲಿ ಪಾಲ್ಗೊಂಡಿದ್ದರು. 

ಇಂದು(ಗುರುವಾರ) ಸಂಜೆ 4.30ಕ್ಕೆ ಮಾರಿ ಮೂರ್ತಿಯನ್ನು ವಾಹನದಲ್ಲಿ ಕೊಂಡೊಯ್ದು ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಜಾತ್ರೆ ಹಿನ್ನೆಲೆ 2 ದಿನಗಳ ಕಾಲ ಪೊಲೀಸ್ ಭಿಗಿ ಬಂದೋಬಸ್ತ್ ನಡೆಸಲಾಗಿದ್ದು, ಮಾರಿ ಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೊದಲು ಬಾಂಬ್ ನಿಷ್ಕ್ರಿಯ ದಳದಿಂದ ದೇವಸ್ಥಾನವನ್ನು ತಪಾಸಣೆ ಮಾಡಲಾಯ್ತು. ಅಲ್ಲದೇ, ದೇವಿಯ ದರ್ಶನಕ್ಕೆ ಬಂದಂತಹ ಭಕ್ತರ ತಪಾಸಣೆ ಕೂಡ ಮುಂದುವರಿದಿದೆ.