ದೀಪಾವಳಿ: ಕೊಪ್ಪಳದ ಕುಷ್ಟಗಿಯಲ್ಲಿ ಲಂಬಾಣಿ ಯುವತಿಯರ ಮೇರಾ ಹಬ್ಬದ ಸಂಭ್ರಮ
Koppala News: ಲಂಬಾಣಿ ಯುವತಿಯರ ಮೇರಾ ಹಬ್ಬದ ಸಂಭ್ರಮ, ದೀಪಾವಳಿ ಸಂದರ್ಭದಲ್ಲಿ ಕುಷ್ಟಗಿ ತಾಲೂಕಿನಲ್ಲಿ ವಿಶಿಷ್ಟವಾಗಿ ಆಚರಣೆ
ಕುಷ್ಟಗಿ (ಅ. 28): ದೀಪಾವಳಿ ಹಬ್ಬ ಅಂದರೆ ಬಂಜಾರ ಸಮುದಾಯಕ್ಕೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತದೆ. ಸಮುದಾಯದ ಯುವತಿಯರು ಲಂಬಾಣಿ ಸಂಪ್ರದಾಯದ ಉಡುಗೆಗಳನ್ನು ಧರಿಸಿ ಮನೆ ಮನೆಗೆ ತೆರಳಿ ದೀಪ ಬೆಳಗುವುದು ಪದ್ಧತಿ. ಈ ಪದ್ಧತಿಯನ್ನು ಬಂಜಾರ ಸಮುದಾಯದವರು ಅನಾದಿ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದಾರೆ. ಲಂಬಾಣಿ ಸಮುದಾಯದ ಉಡುಗೆಗಳನ್ನು ಧರಿಸಿ ಹೆಜ್ಜೆ ಹಾಕುವ ಬಾಲೆಯರು, ಸಾಂಪ್ರದಾಯಿಕವಾಗಿ ಬಂಜಾರ ಸಮುದಾಯದ ದೇವರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸುತ್ತಾರೆ. ಕುಷ್ಟಗಿ ತಾಲೂಕಿನ ಬೋದೂರು ತಾಂಡಾ, ಮೆಣಸಗೇರಿ, ನಡುವಲಕೊಪ್ಪ, ತೊನಸಿಹಾಳ ಸೇರಿದಂತೆ ತಾಲೂಕಿನ ವಿವಿಧ ತಾಂಡಾಗಳಲ್ಲಿ ಅಲ್ಲಿನ ದೇವಸ್ಥಾನದಲ್ಲಿ ಆಚರಣೆ ವರ್ಣರಂಜಿತವಾಗಿ ನಡೆಯುತ್ತದೆ.
ಬಂಜಾರ ಸಮಾಜದ ನಂಬಿಕೆಯಂತೆ ಯುವತಿಯರು ಕಾಡು ಮೇಡುಗಳನ್ನು ತಿರುಗಾಡಿ ಹೂವುಗಳನ್ನು ತಂದು ಸಮಾಜದ ಎಲ್ಲ ಮಹಿಳೆಯರು ಒಂದೆಡೆ ಸೇರಿ ನೃತ್ಯ ಮಾಡುವುದರಿಂದ ಲಕ್ಷ್ಮಿ ಕಟಾಕ್ಷವಾಗುವ ನಂಬಿಕೆಯಿದೆ. ಆ ನಂಬಿಕೆಯಂತೆ ಮಹಿಳೆಯರು ಲಂಬಾಣಿ ಜನಾಂಗದ ಉಡುಗೆ ತೊಡುಗೆಗಳನ್ನು ತೊಟ್ಟು ನೃತ್ಯ ಮಾಡಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಇದನ್ನೂ ಓದಿ: Chamarajanagar: ಕರ್ನಾಟಕದ ಗಡಿ ಗ್ರಾಮ ಗುಮಟಪುರದಲ್ಲಿ ಗೊರೆ ಹಬ್ಬ ಸಂಭ್ರಮ
ಬಂಜಾರ ಸಮಾಜಕ್ಕೆ ದೀಪಾವಳಿ ವಿಶಿಷ್ಟಹಬ್ಬ. ದೀಪಾವಳಿ ಸಂದರ್ಭದಲ್ಲಿ ಲಂಬಾಣಿ ಸಮುದಾಯದವರು ಮೇರಾ ಹಬ್ಬ ಆಚರಿಸುತ್ತಾರೆ. ತಾಂಡಾದ ಯುವತಿಯರು ಮನೆ ಮನೆಗೆ ಹೋಗಿ ಹಿರಿಯರಿಗೆ ದೀಪ ಬೆಳಗಿ, ಹಾಡಿ, ಹರಸುವುದೇ ಇವರ ಮುಖ್ಯ ಆಚರಣೆ. ಅದರಲ್ಲೂ ಎಲ್ಲ ಲಂಬಾಣಿ ಜನಾಂಗದ ತಾಂಡಾಗಳಲ್ಲಿ ಮೇರಾ ಆಚರಣೆ ಸಂಪ್ರದಾಯ ಇನ್ನೂ ಜೀವಂತವಾಗಿದೆ.
ಮೇರಾ ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಬರುವ ಪ್ರಕ್ರಿಯೆ ಎಂದು ಬಂಜಾರ ಸಮುದಾಯದ ಹಿರಿಯರು ಹೇಳುತ್ತಾರೆ. ವಿಶೇಷವೆಂದರೆ ಈ ಸಂಪ್ರದಾಯ ಕೇವಲ ಬಂಜಾರ ಸಮುದಾಯದ ಯುವತಿಯರಿಗಾಗಿಯೇ ಆಚರಣೆ ಮಾಡಲಾಗುತ್ತದೆ.
ಲಂಬಾಣಿ ಯುವತಿಯರು ಬಣ್ಣ- ಬಣ್ಣದ ಬಟ್ಟೆಧರಿಸಿ ಶೃಂಗಾರ ಮಾಡಿಕೊಂಡು ತಮ್ಮ ತಮ್ಮ ಸೀಮೆಯ ಸುತ್ತಲಿನ ಹೊಲಗಳಲ್ಲಿ ನಳನಳಿಸುತ್ತಿರುವ ಅನೇಕ ಬಗೆಯ ಹೂವುಗಳನ್ನು ಬಿಡಿಸುತ್ತಾ ಲಂಬಾಣಿ ಭಾಷೆಯಲ್ಲಿ ಹಾಡನ್ನು ಹಾಡುತ್ತಾ ಕುಣಿಯುತ್ತ ಹೂವುಗಳನ್ನು ಸಂಗ್ರಹಿಸುತ್ತಾರೆ. ಹೀಗೆ ಹೂವು ತೆಗೆದುಕೊಂಡು ಹಾಡನ್ನು ಹಾಡುತ್ತಾ ದಾರಿಯಲ್ಲಿ ಬರುವಾಗ ತಮಗೆ ಎದುರಾಗುವ ಜನರನ್ನು, ವಾಹನಗಳನ್ನು ತಡೆದು ಅವರ ಮುಂದೆ ಹಾಡನ್ನು ಹಾಡಿ ಕುಣಿಯುತ್ತಾರೆ. ಆಗ ಅವರಿಂದ ಹಬ್ಬದ ಖುಷಿಯಾಗಿ ಹಣವನ್ನು ಸಂಗ್ರಹಿಸುತ್ತಾರೆ.
ಇದನ್ನೂ ಓದಿ: Udupi: ಕೊರಗ ಕಾಲನಿಯಲ್ಲಿ ಅದಮಾರು ಶ್ರೀ ದೀಪಾವಳಿ ಆಚರಣೆ
ಸಂಸ್ಕೃತಿ ಮರೆಯುತ್ತಿರುವ ಈಗಿನ ಕಾಲದಲ್ಲಿ ಲಂಬಾಣಿ ಜನಾಂಗದವರು ತಮ್ಮ ಹಳೆಯ ಸಂಪ್ರದಾಯ ಮತ್ತು ನಂಬಿಕೆಯನ್ನು ಬಿಡದೆ ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅದರಲ್ಲೂ ದೀಪಗಳ ಹಬ್ಬ ದೀಪಾವಳಿಗೆ ಈ ಮೇರಾ ಕಾರ್ಯಕ್ರಮ ಮೆರುಗು ಹೆಚ್ಚಿಸುತ್ತದೆ.
ಪಾಡ್ಯದಂದು ಕುರಿ ಹಟ್ಟಿಯಲ್ಲಿ ಲಕ್ಷ್ಮಿ ಪೂಜೆ: ಕುರಿಗಾರರಿಗೆ ಲಕ್ಷ್ಮಿ ಪೂಜೆ ವಿಶೇಷವಾಗಿ ಆಚರಣೆ ಮಾಡುವ ಸಂಪ್ರದಾಯವಿದೆ. ಅದರಲ್ಲೂ ಬಲಿಪಾಡ್ಯದಂದು ಕುರಿ ಹಟ್ಟಿಯಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಕುರಿ ಹಟ್ಟಿಯಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸುತ್ತಾರೆ. ಕುರಿಗಳನ್ನೇ ಲಕ್ಷ್ಮಿಯಂತೆ ಕಾಣುತ್ತಿರುವ ಕುರಿಗಾರರು ತಾವು ಕುರಿಗಳಿಗಾಗಿ ಹಾಕುವ ಹಟ್ಟಿಯಲ್ಲಿಯೇ ಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಸಾಮಾನ್ಯವಾಗಿ ಹೊಲದಲ್ಲಿಯೇ ಕುರಿ ಹಟ್ಟಿಇರುತ್ತದೆ.
ಅಲ್ಲಿಯೇ ಹಟ್ಟಿಪೂಜೆ ಮಾಡುತ್ತಾರೆ. ಹೊಲದಲ್ಲಿ ಇಲ್ಲದವರು ಮನೆಯ ಪಕ್ಕದಲ್ಲಿಯೇ ಕುರಿ ಹಟ್ಟಿಯಲ್ಲಿ ಲಕ್ಷ್ಮಿ ಪೂಜೆಯನ್ನು ನೆರವೇರಿಸುತ್ತಾರೆ. ಪಾಂಡವರ ಪೂಜೆ ಮಾಡುವ ದಿನ ಕುರಿ ಹಟ್ಟಿಯಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೆ. ಐದು ಕುರಿಗಳನ್ನು ವಿಶೇಷ ಅಲಂಕಾರ ಮಾಡಿ ಅವುಗಳನ್ನು ಪೂಜೆ ಮಾಡುತ್ತಾರೆ.