'ಕನ್ನಡತಿ' ಚಿತ್ರೀಕರಣಗೊಂಡ ಕನ್ನಡ ಮಾತೆ ಭುವನೇಶ್ವರಿಯ ಏಕೈಕ ದೇವಾಲಯ ಎಲ್ಲಿದೆ ಗೊತ್ತಾ?
ಕನ್ನಡದ ಯಾವುದೇ ಕಾರ್ಯಕ್ರಮಗಳು ಕೂಡಾ ತಾಯಿ ಭುವನೇಶ್ವರಿಯ ಸ್ಮರಣೆ ಇಲ್ಲದೆ ನಡೆಯುವುದಿಲ್ಲ. ಹಾಗಿದ್ದೂ, ಭುವನೇಶ್ವರಿಗಾಗಿ ಕರ್ನಾಟಕದಲ್ಲಿರುವುದು ಮಾತ್ರ ಒಂದೇ ದೇವಾಲಯ. ಅದು ಎಲ್ಲಿದೆ, ಅದರ ವಿಶೇಷತೆಯೇನು ನೋಡೋಣ.
ಕನ್ನಡದ ಭಾಷಣಗಳೆಲ್ಲವೂ ಜೈ ಭುವನೇಶ್ವರಿ ಎಂದೇ ಅಂತ್ಯವಾಗುತ್ತವೆ. ಕನ್ನಡ ಕಾರ್ಯಕ್ರಮಗಳು ಭುವನೇಶ್ವರಿ ಪೂಜೆಯೊಂದಿಗೆ ಆರಂಭವಾಗುತ್ತವೆ. ತಾಯಿ ಭುವನೇಶ್ವರಿ ದೇವಿ(Goddess Bhuvaneshwari)ಯು ಕರ್ನಾಟಕ ಮಾತೆ. ನಮ್ಮ ರಾಜ್ಯದ ಭಾಷೆಯ ತಾಯಿ. ಹಾಗಿದ್ದೂ ಇಡೀ ರಾಜ್ಯದಲ್ಲಿ ಆಕೆಗೆ ಅರ್ಪಿತವಾಗಿರುವ ದೇವಾಲಯ ಇರುವುದು ಒಂದೇ. ಈ ದೇವಾಲಯದಲ್ಲಿ ಈಚೆಗಷ್ಟೇ 'ಕನ್ನಡತಿ' ಧಾರವಾಹಿಯ ಚಿತ್ರೀಕರಣಗೊಂಡು ಸುದ್ದಿಯಾಗಿತ್ತು. ಇಷ್ಟಕ್ಕೂ ಈ ದೇವಾಲಯ ಎಲ್ಲಿದೆ ಗೊತ್ತಾ?
ಹೌದು, ಭುವನೇಶ್ವರಿ ದೇವಿಗೆ ಅರ್ಪಿತವಾಗಿರುವ ಕರ್ನಾಟಕದ ಏಕೈಕ ದೇವಾಲಯ(temple)ವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿ(Bhuvanagiri)ಯಲ್ಲಿದೆ. ಶತಮಾನಗಳಷ್ಟು ಹಳೆಯದಾದ ಈ ದೇವಾಲಯವು ಬೆಟ್ಟದ ಮೇಲಿದ್ದು, ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಮರಗಳಿಂದ ಸುತ್ತುವರಿದಿದೆ. ಕನ್ನಡದ ತಾಯಿಯ ನೆಲೆವೀಡಿಗೆ ಈ ಕಾಡು ನೈಸರ್ಗಿಕ ಸೌಂದರ್ಯವನ್ನು ಕಟ್ಟಿಕೊಟ್ಟಿದೆ.
ಬಿಳಗಿಯ ರಾಜನಿಂದ ನಿರ್ಮಾಣ
ಕನ್ನಡಮಾತೆ, ಕನ್ನಡದ ತಾಯಿ ಎಂದು ಕರೆಯಲ್ಪಡುವ ಭುವನೇಶ್ವರಿ ದೇವಿಯ ಕಲ್ಪನೆ ಮೊದಲು ಆರಂಭವಾದದ್ದು ನಾಲ್ಕನೇ ಶತಮಾನದಲ್ಲಿ. ಮೊದಲ ಕನ್ನಡ ಸಾಮ್ರಾಜ್ಯ ಕಟ್ಟಿದ ಕದಂಬ(Kadamba)ರು ಭುವನೇಶ್ವರಿಗೊಂದು ರೂಪ ನೀಡಿ ಕನ್ನಡ ಮಾತೆ ಎಂದು ಕರೆದರು.
ದಾಂಪತ್ಯದಲ್ಲಿ ಯಾರೂ ಮೇಲಲ್ಲ, ಕೀಳಲ್ಲ, ಅನುಸರಿಸಿಕೊಂಡು ಹೋಗೋಲ್ಲ ಈ ರಾಶಿಯವರು!
ನಂತರ ಕರ್ನಾಟಕದಲ್ಲಿ ಬಂದ ರಾಜರು, ಅವರ ಆಡಳಿತ ಪ್ರದೇಶಗಳು ಭುವನೇಶ್ವರಿಯನ್ನು ತಮ್ಮ ದೇವತೆಯಾಗಿ ಪೂಜಿಸಿದವು. ವಿಜಯನಗರ(Vijayanagar) ಸಾಮ್ರಾಜ್ಯದ ದೊರೆಗಳು ಭುವನೇಶ್ವರಿ ದೇವಿಗೆ ಪೂಜೆ ಮಾಡದೆ ಹೊರಗೆ ಕಾಲಿಡುತ್ತಿರಲಿಲ್ಲ. ವಿಜಯನಗರದ ಒಬ್ಬ ರಾಜನು ವಿರೂಪಾಕ್ಷ ದೇವಾಲಯ(Viroopaksha Temple)ದಲ್ಲಿ ಭುವನೇಶ್ವರಿ ದೇವಿಯ ವಿಗ್ರಹವನ್ನು ಸ್ಥಾಪಿಸಿದನು.
ವಿಜಯನಗರದ ಅಂದಿನ ದೊರೆ ತಿರುಮಲನು ಬಿಜಾಪುರದ ದೊರೆ ಆದಿಲ್ ಷಾನ ಚಿತ್ರಹಿಂಸೆಯನ್ನು ಸಹಿಸಲಾರದೆ ತನ್ನ ರಾಜ್ಯವನ್ನು ಶ್ವೇತಪುರದ (ಇಂದಿನ ಬಿಳಗಿ) ದೊರೆಗಳ ಸಹಾಯದಿಂದ ಪೆನ್ನುಗುಡಿಗೆ (ಇಂದಿನ ಚಂದ್ರಗುತ್ತಿ) ಸ್ಥಳಾಂತರಿಸಿದನು. ಆಗ ಬಿಳಗಿ ಸಾಮ್ರಾಜ್ಯವು ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿಯಿಂದ ಉಡುಪಿ ಜಿಲ್ಲೆಯ ಗಂಗೊಳ್ಳಿ ನದಿಯವರೆಗೆ ಹರಡಿತು. ಬಿಳಗಿಯ ದೊರೆಗಳು ಕನ್ನಡ ಭಾಷೆಯ ಧೀರರೂ ಮತ್ತು ಮಹಾನ್ ಅಭಿಮಾನಿಗಳೂ ಆಗಿದ್ದರಿಂದ, ಕನ್ನಡ ಮಾತೆ ಭುವನೇಶ್ವರಿ ದೇವಿಗೆ ಸಮರ್ಪಿತವಾಗಿ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವನ್ನು ಬಿಳಗಿಯ ಕೊನೆಯ ದೊರೆ ಬಸವೇಂದ್ರ
1692ರಲ್ಲಿ, ಸಿದ್ದಾಪುರ ತಾಲೂಕಿನ ಬೇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿಗೆ ಗ್ರಾಮದ ಬಳಿ ಭುವನಗಿರಿ ಬೆಟ್ಟದ ಮೇಲೆ ನಿರ್ಮಿಸಿದರು.
ಕನ್ನಡದ ಮಹಾಭಿಮಾನಿಯಾಗಿದ್ದ ಬಸವೇಂದ್ರ ರಾಜ(King Basavendra)ರು, ಬೆಟ್ಟದ ಕೆಳಭಾಗದಲ್ಲಿ ಕೊಳವನ್ನೂ ನಿರ್ಮಿಸಿದರು. ಈ ಕೊಳದಿಂದ ಬೆಟ್ಟದ ಮೇಲಿನ ಭುವನೇಶ್ವರಿಯ ದರ್ಶನಕ್ಕೆ 350 ಮೆಟ್ಟಿಲುಗಳನ್ನು ಏರಬೇಕು.
ನಿತ್ಯ ಪೂಜೆ
ಸಿದ್ದಾಪುರ-ಕುಮಟಾ ರಸ್ತೆಯಿಂದ ಮಲೆನಾಡು ಭಾಗದಲ್ಲಿ ನೆಲೆಸಿರುವ ಈ ದೇವಸ್ಥಾನವನ್ನು ತಲುಪಬಹುದು. ವಾರ್ಷಿಕ ರಥೋತ್ಸವ, ತೆಪ್ಪೋತ್ಸವ (ಹೊಂಡದಲ್ಲಿ ಉತ್ಸವ) ಮತ್ತು ಇತರ ಧಾರ್ಮಿಕ ಆಚರಣೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಭುವನೇಶ್ವರಿಯನ್ನು ವರ್ಷದ ಎಲ್ಲಾ ದಿನಗಳಲ್ಲಿ ನೈವೇದ್ಯ ಅಭಿಷೇಕದೊಂದಿಗೆ ಮಂತ್ರಗಳ ಪಠಣದೊಂದಿಗೆ ಪೂಜಿಸಲಾಗುತ್ತದೆ.
Vastu Tips: ಮೂರು ರೀತಿಯ ದೋಷ ನಿವಾರಿಸುತ್ತೆ ಈ ಮರ!
ಹಂಪಿ(hampe)ಯ ವಿರೂಪಾಕ್ಷ ದೇವಸ್ಥಾನದಲ್ಲಿ ವಿಜಯನಗರದ ಅರಸರು ಪ್ರತಿಷ್ಠಾಪಿಸಿರುವ ಭುವನೇಶ್ವರಿ ದೇವಿಯ ವಿಗ್ರಹವಿದ್ದರೂ, ಭುವನಗಿರಿಯಲ್ಲಿ ಭುವನೇಶ್ವರಿ ಮಾತೆ ತನ್ನದೇ ಆದ ದೇವಸ್ಥಾನವನ್ನು ಹೊಂದಿದ್ದಾಳೆ. ಹೀಗಾಗಿ, ಇದು ಆಕೆಗಾಗಿ ರಾಜ್ಯದಲ್ಲಿರುವ ಏಕೈಕ ದೇವಾಲಯವಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.