ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ಪ್ರಯುಕ್ತ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಸುರಿಯುವ ಮಳೆಯಲ್ಲೇ ಹುಲಿಗೆಮ್ಮದೇವಿ ದರ್ಶನ ಪಡೆದರು. ಸುರಿಯುವ ಮಳೆ ಲೆಕ್ಕಿಸದೆ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳು..

ಮುನಿರಾಬಾದ್ (ನ.06): ಇಲ್ಲಿನ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ಪ್ರಯುಕ್ತ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಸುರಿಯುವ ಮಳೆಯಲ್ಲೇ ಹುಲಿಗೆಮ್ಮದೇವಿ ದರ್ಶನ ಪಡೆದರು. ಸುರಿಯುವ ಮಳೆ ಲೆಕ್ಕಿಸದೆ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳು, ಬೆಳಗಿನ ಜಾವ ಹುಲಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 4 ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದರೂ ಭಕ್ತಾದಿಗಳು ಮಳೆಯಲ್ಲೇ ತೊಯ್ದುಕೊಂಡು ಅಮ್ಮನವರ ದರ್ಶನಕ್ಕೆ ಆಗಮಿಸಿ ತಮ್ಮ ಭಕ್ತಿ ಪ್ರದರ್ಶಿಸಿದರು.

ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಿಂದ ಅಲ್ಲದೇ ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಬೆಳಗಿನ ಜಾವ 8 ಗಂಟೆಗೆ ಸುಮಾರು 50,000ಕ್ಕೂ ಅಧಿಕ ಜನ ಭಕ್ತಾದಿಗಳು ಅಮ್ಮನವರ ದರ್ಶನ ಪಡೆದರು. 11 ಗಂಟೆಗೆ ಅಮ್ಮನವರ ದರ್ಶನ ಪಡೆದ ಭಕ್ತರ ಸಂಖ್ಯೆ ಲಕ್ಷ ದಾಟಿತು. ಮಧ್ಯಾಹ್ನ 3ರ ವೇಳೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 2 ಲಕ್ಷ ದಾಟಿತು. ಸಂಜೆ ವೇಳೆಗೆ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಆಗಮಿಸಿ ಶ್ರೀಹುಲಿಗಮ್ಮ ದೇವಿ ದರ್ಶನ ಭಾಗ್ಯ ಪಡೆದರು.

ರಾಜ್ಯ ರಸ್ತೆ ಸಾರಿಗೆ ನಿಗಮವು ಭಕ್ತರ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಿತ್ತು. ಕಳೆದ ಹುಣ್ಣಿಮೆಯ ವೇಳೆ ಸಂಭವಿಸಿದ ಕಾಲ್ತುಳಿತ ಹಾಗೂ ನೂಕುನುಗ್ಗಲಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪಳ ಜಿಲ್ಲಾಡಳಿತವ ಇದಕ್ಕೆ ಕಾರಣವಾದ 150 ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿತು ಹಾಗೂ ಹುಲಿಗಿ ಗ್ರಾಮದ ನಂದಿವೃತ್ತ, ದೇವಸ್ಥಾನದ ರಾಜಬೀದಿ, ಹುಲಿಗಿ ಶಿವಪುರ ರಸ್ತೆ, ಹುಲಿಗಿ ಹಿಟ್ನಾಳ ರಸ್ತೆ ಮತ್ತು ಹುಲಿಗಿ ಹೊಸಪೇಟೆ ರಸ್ತೆ ಅಗಲೀಕರಣಗೊಳಿಸಿತು.

ಇದರಿಂದ ಹುಣ್ಣಿಮೆ ಪ್ರಯುಕ್ತ ಗ್ರಾಮಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ಅನುಕೂಲವಾಯಿತು. 40 ಅಡಿ ಅಗಲ ಹಾಗೂ ಕಿಮೀ ಉದ್ದದ ನೂತನ ರಿಂಗ್ ರೋಡ್ ನಿರ್ಮಿಸುವಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ್ ಹಿಟ್ನಾಳ ಪ್ರಬಲ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ತೋರಿದ್ದು ಇದರಿಂದ ಭಕ್ತರಿಗೆ ಸಾಕಷ್ಟು ಅನುಕೂಲವಾಯಿತು.

ಪಾರ್ಕಿಂಗ್ ವ್ಯವಸ್ಥೆ

ಹುಲಿಗಿ ಗ್ರಾಮದ ಹೊರವಲಯದಲ್ಲಿರುವ ಚೆನ್ನಮ್ಮ ವೃತ್ತದಿಂದ ದೇವಸ್ಥಾನದ ನದಿ ದಂಡೆಯವರಿಗೆ ನೂತನವಾಗಿ ನಿರ್ಮಿಸಲಾದ ರಿಂಗ್ ರಸ್ತೆಯು ಹಿಟ್ನಾಳ, ಶಿವಪುರ, ಕೊಪ್ಪಳ, ಹುಬ್ಬಳ್ಳಿ,ಗಂಗಾವತಿ, ರಾಯಚೂರು ಕಡೆಯಿಂದ ಬರುವ ನಾಲ್ಕು ಚಕ್ರ ವಾಹನ ನೇರವಾಗಿ ದೇವಸ್ಥಾನದ ಹಿಂಬದಿಯ ನದಿ ದಂಡೆಗೆ ಕಳುಹಿಸಿ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದ ವಾಹನದಟ್ಟಣೆ ಭಾರಿ ಪ್ರಮಾಣದಲ್ಲಿ ತಗ್ಗುವಲ್ಲಿ ಸಹಕಾರಿಯಾಯಿತು.