Asianet Suvarna News Asianet Suvarna News

ಅಂಕೋಲಾ: ಬಲಿ ಪಾಡ್ಯಮಿಯಂದು ನಡೆದ ವಿಶಿಷ್ಟ ಹೊಂಡೆಹಬ್ಬ..!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ರೋಮಾಂಚನಕಾರಿ ಹೊಂಡೆಹಬ್ಬ 

Hondehabba Celebrated During Deepavali Bali Padyami at Ankola in Uttara Kannada grg
Author
First Published Oct 27, 2022, 9:30 AM IST | Last Updated Oct 27, 2022, 9:30 AM IST

ರಾಘು ಕಾಕರಮಠ

ಅಂಕೋಲಾ(ಅ.27):  ವೀರತ್ವದ ಪ್ರತೀಕವಾಗಿ, ಸೌಹಾರ್ದ ಸಂಕೇತದಂತೆ ಅಂಕೋಲಾದಲ್ಲಿ ಐತಿಹಾಸಿಕವಾಗಿ ಆಚರಿಸುತ್ತ ಬಂದಿರುವ ರೋಮಾಂಚನಕಾರಿಯಾಗಿ ಹೊಂಡೆ ಹಬ್ಬ ಪಟ್ಟಣದಲ್ಲಿ ನಿನ್ನೆ(ಬುಧವಾರ) ನಡೆದಿದೆ. 
ದೀಪಾವಳಿಯ ಬಲಿ ಪಾಡ್ಯಮಿಯ ದಿನದಂದು ಇಲ್ಲಿನ ಕ್ಷತ್ರೀಯ ಕೋಮಾರಪಂಥ ಸಮಾಜದ ಬಾಂಧವರಿಂದ ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವ ಈ ರೋಮಾಂಚನಕಾರಿ ಹೊಂಡೆ ಹಬ್ಬ ಸಹಸ್ರಾರು ಜನರ ಸಂಭ್ರಮಕ್ಕೆ ಸಾಕ್ಷಿಯಾಗಿದೆ. 

ಏನಿದು ಹೊಂಡೆ ಹಬ್ಬ?:

ಕೋಮಾರಪಂಥ ಸಮಾಜದವರು ಮೂಲತ: ಕ್ಷತ್ರೀಯ ವರ್ಗಕ್ಕೆ ಸೇರಿದವರಾಗಿದ್ದು, ಯುದ್ದದ ಸಂದರ್ಭದಲ್ಲಿ ಕೋಮಾರಪಂಥ ಸಮಾಜ ತನ್ನದೇ ಆದ ಕೊಡುಗೆ ನೀಡಿದ ಐತಿಹಾಸಿಕ ಹಿನ್ನೆಲೆಗಳಿವೆ. ಕೋಮಾರಪಂಥ ಸಮಾಜ ಅಂದು ನಾಡಿನ ರಕ್ಷಣೆಗೆ ಯುದ್ಧದಲ್ಲಿ ತೋರಿದ ಸಾಹಸದ ಸಂಕೇತವಾಗಿ ಹಿಂಡ್ಲಿಕಾಯಿಯಿಂದ ಪರಸ್ಪರ ಹೊಡೆದಾಡುವದರ ಮೂಲಕ ತಮ್ಮ ಸಂಪ್ರದಾಯವನ್ನು ಅನಾವರಣಗೊಳಿಸುತ್ತಾರೆ. ಈ ಆಟದಲ್ಲಿ ಕೆಚ್ಚಿನ ಭೀಕರತೆ ಇದ್ದರೂ ಅದು ಸಮಾಜದ ಸೌಹಾರ್ದ ಸಂಕೇತವಾಗಿರುತ್ತದೆ. ತನ್ಮೂಲಕ ಎಲ್ಲ ಸಮುದಾಯದವರ ಸಾಮರಸ್ಯಕ್ಕೆ ಸಾಕ್ಷಿಯಾಗಿ ಹೊಂಡೆಯಾಟವು ಶತಶತಮಾನಗಳಿಂದ ನಡೆಯುತ್ತ ಬಂದಿದೆ.

Uttara Kannada: ವಿಶಿಷ್ಠ ಸಂಪ್ರದಾಯಗಳೊಂದಿಗೆ ದೀಪಾವಳಿಯ ಸಂಭ್ರಮದ ಗೋಪೂಜೆ

ಈ ಹೊಂಡೆ ಹಬ್ಬದಲ್ಲಿ ಕೋಮಾರಪಂಥ ಸಮಾಜದ ಲಕ್ಷ್ಮೇಶ್ವರ ಹಾಗೂ ಹೊನ್ನೇಕೇರಿಯ ಊರಿನ ಎರಡು ತಂಡಗಳು ಪಾಲ್ಗೊಳ್ಳುತ್ತವೆ. ಕುಂಬಾರಕೇರಿಯ ಕಳಸದೇವ ಸ್ಥಾನದಿಂದ ಹೊರಟ ಲಕ್ಷ್ಮೇಶ್ವರ ತಂಡ ವೀರಾವೇಶದಿಂದ ಹೊಂಡೆ ಹೊಂಡೆ ಎನ್ನುತ್ತಾ ಎದುರಾಳಿಯನ್ನು ಎದುರಿಸಲು ನಗರದ ಶ್ರೀ ಶಾಂತಾದುರ್ಗ ದೇವಸ್ಥಾನದ ಎದುರಿನಲ್ಲಿ ಹೊನ್ನೇಕೇರಿ ತಂಡದ ನಡುವೆ ಮುಖಾಮುಖಿಗೊಂಡು ಎರಡು ಗ್ರಾಮ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯುತ್ತದೆ.
ಈ ಹಬ್ಬದ ನಿಯಮದಂತೆ ಯಾವುದೇ ಕಾರಣಕ್ಕೆ ಮಂಡಿಯ ಕೆಳಭಾಗಕ್ಕೆ ಹೊಡೆಯಬೇಕೆನ್ನುವ ನಿಯಮ ಪಾಲಿಸಬೇಕಾಗುತ್ತದೆ. ಆದರೂ ಕೆಲವೊಮ್ಮೆ ಗುರಿಕಾರನ ಗುರಿತಪ್ಪಿ ಎದುರಾಳಿಯು ತೀವೃ ತರಹದ ಹೊಡೆತಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇವುಗಳನ್ನು ನಿಯಂತ್ರಿಸಲು ಸಮಾಜದ ಮುಖಂಡರು ನಿರ್ಣಾಯಕರಾಗಿರುತ್ತಾರೆ. ಎರಡು ಪಂಗಡಗಳಲ್ಲಿ ಯಾರು ಸಮರ ವೀರರು ಎನ್ನುವುದನ್ನು ಈ ನಿರ್ಣಾಯಕರು ನಿರ್ಧರಿಸುತ್ತಾರೆ. ಹೊಂಡೆ ಹಬ್ಬದಲ್ಲಿ ಗೆದ್ದ ಪಂಗಡಕ್ಕೆ ದೊಡ್ಡ ಮೊಗ್ಗೆ ಕಾಯಿಯನ್ನು ನೀಡಿದರೆ, ಎರಡನೆ ಪಂಗಡಕ್ಕೆ ಸಣ್ಣ ಮೊಗ್ಗೆಕಾಯಿಯನ್ನು ನೀಡುವ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.

ನಗರದ ಮಧ್ಯವರ್ತಿ ಸ್ಥಳಗಳಲ್ಲಿ ನಾಲ್ಕು ಕಡೆಗಳಲ್ಲಿ ಹೊಂಡೆಯೊಂದಿಗೆ ಹೋರಾಟಕ್ಕಿಳಿದು ತಮ್ಮ ಕ್ಷತ್ರೀಯ ವರ್ಚಸನ್ನು ತೋರ್ಪಡಿಸಲಿದ್ದಾರೆ. ನಂತರ ಎರಡು ಪಂಗಡಗಳು ಒಂದಾಗಿ ಊರಿನ ದೊಡ್ಡ ದೇವರನಿಸಿಕೊಂಡ ವೆಂಕಟರಮಣ ದೇವಸ್ಥಾನಕ್ಕೆ ಗೋವಿಂದ ಗೋವಿಂದ ಎನ್ನುತ್ತ ತೆರಳಿ ಹೋರಾಟದ ನೆನಪುಗಳನ್ನು ಮೆಲಕು ಹಾಕುತ್ತಾರೆ. ಅಲ್ಲದೆ ಹೊಂಡೆ ಹಬ್ಬದ ಸಮಯದಲ್ಲಿ ಆದ ಸಣ್ಣಪುಟ್ಟತಪ್ಪುಗಳನ್ನು ಒಪ್ಪಿಕೊಂಡು ಸಮಾಜದವರೆಲ್ಲ ಒಂದಾಗಿ ಬಾಳೋಣ ಎನ್ನುವ ಸಾಮರಸ್ಯ ಮೆರೆಯುತ್ತಾರೆ.

Chitradurga: ದೀಪಾವಳಿ ಪ್ರಯುಕ್ತ ಕೋಟೆನಾಡಲ್ಲಿ ಪಂಚಪದಿ ಉತ್ಸವ: ದೇವರ ಎತ್ತುಗಳ ಭವ್ಯ ಮೆರವಣಿಗೆ

ಹಿಂಡಲಕಾಯಿ ಹೊಡೆತ:

ತಾಲೂಕಿನ ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ನವ ದಂಪತಿಗಳು ಸಾಂಪ್ರದಾಯಿಕ ಪದ್ಧತಿಯಂತೆ ದೀಪಾವಳಿಯ ಸಂದರ್ಭದಲ್ಲಿ ಮಾವನ ಮನೆಗೆ ಕೈ ಮುಗಿಯಲು ಬರುವಾಗ ಹೊಸ ಬಟ್ಟೆಧರಿಸಿ ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ಆ ಪರಿಸರದ ಕೆಲ ಹುಡುಗರು ಹೊಸ ಮದುಮಗನಿಗೆ ಹಿಂಡಲಕಾಯಿಯಿಂದ ಹೊಡೆಯುವ ಸಂಪ್ರದಾಯ ಕೆಲ ಹಳ್ಳಿಗಳಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತ ಬಂದಿರುವದು ಸಹ ಇಲ್ಲಿನ ದೀಪಾವಳಿಯ ಆಚರಣೆಯ ವಿಶೇಷತೆಗಳಲ್ಲೊಂದಾಗಿದೆ.
ಅನಾದಿಕಾಲದಿಂದಲೂ ಕೋಮರಪಂಥ ಸಮಾಜ ಹೊಂಡೆ ಹಬ್ಬವನ್ನು ಐತಿಹಾಸಿಕವಾಗಿ ಆಚರಿಸಿಕೊಂಡು ಬಂದಿದೆ. ಇದರಿಂದ ನಮ್ಮ ಸಮಾಜದದಲ್ಲಿ ಸಂಘಟನೆಯ ಜೊತೆಗೆ ಇತರೆ ಸಮಾಜದ ಸೌಹಾರ್ದ ಪ್ರತೀಕವಾಗಿ ಹೊಂಡೆಯಾಟ ಜರುಗುತ್ತದೆ ಅಂತ ಹೊನ್ನೆಕೇರಿ ಸುಭಾಷ ನಾಯ್ಕ ತಿಳಿಸಿದ್ದಾರೆ. 

ಇಂದಿನ ಆಧುನಿಕ ಯುಗದಲ್ಲೂ ಕೋಮಾರಪಂಥ ಸಮಾಜ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನಿಯ. ಇದರಿಂದ ನಮ್ಮ ಸಂಸ್ಕೃತಿ ಇನ್ನಷ್ಟು ಬಲಗೊಳ್ಳುವಂತಾಗುತ್ತಿದೆ ಅಂತ ನ್ಯಾಯವಾದಿ ವಿನೋದ ಶಾನಭಾಗ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios