Asianet Suvarna News Asianet Suvarna News

ಮಹಾರಾಷ್ಟ್ರದ 5 ಜಿಲ್ಲೆ ಕರ್ನಾಟಕ್ಕೆ ಸೇರಬೇಕು: ಟಿ.ಎ.ನಾರಾಯಣಗೌಡ

ಈ ಅನ್ಯಾಯ ನಿಲ್ಲಲೇಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಲಿನ ಕನ್ನಡಿಗರನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಉಸ್ಮಾನಾಬಾದ್‌ ಮತ್ತು ಲಾಥೂರ್‌ ಜಿಲ್ಲೆಗಳನ್ನು ಕರ್ನಾಟಕಕ್ಕೆ ಬಿಟ್ಟುಕೊಡಬೇಕು. ಈ ಪ್ರದೇಶಗಳನ್ನು ಬಿಟ್ಟುಕೊಡಿ ಎಂದು ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಆಂದೋಲನ ಆರಂಭಿಸಬೇಕು.

5 districts of Maharashtra should join Karnataka says TA Narayana Gowda gvd
Author
First Published Dec 15, 2022, 4:23 AM IST

ಟಿ.ಎ.ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ

ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗಳನ್ನು ನೋಡಿದರೆ ನಿಜಕ್ಕೂ ನೋವಾಗುತ್ತದೆ. ಮಹಾರಾಷ್ಟ್ರದ ಕನ್ನಡಿಗರು ತಬ್ಬಲಿಗಳಾಗಿದ್ದಾರೆ. ಅವರ ಮೇಲೆ ನಾನಾ ಬಗೆಯ ದೌರ್ಜನ್ಯಗಳು ನಡೆಯುತ್ತಿವೆ. ಕನ್ನಡಿಗರನ್ನು ಗುರುತಿಸಿ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸುವ ದುಷ್ಟರಾಜಕೀಯ ನಡೆಯುತ್ತಿದೆ. ಕನ್ನಡಿಗರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಕನ್ನಡಿಗರ ವಾಹನಗಳು ದಾಳಿಕೋರರ ಕೆಟ್ಟಕಣ್ಣಿಗೆ ಬಿದ್ದಿವೆ. ಅಂಥ ತಪ್ಪನ್ನು ಮಹಾರಾಷ್ಟ್ರ ಕನ್ನಡಿಗರೇನು ಮಾಡಿದ್ದರು? ಅವರ ಸಂಕಟವನ್ನು ಕೇಳುವವರು ಯಾರೂ ಇಲ್ಲವೆ?

ಮಹಾರಾಷ್ಟ್ರದ 5 ಜಿಲ್ಲೆ ಕರ್ನಾಟಕದಲ್ಲಿರಬೇಕಿತ್ತು!: ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ಅಪ್ಪಟ ಕನ್ನಡದ ಪ್ರದೇಶಗಳು ನೆರೆಯ ರಾಜ್ಯಗಳನ್ನು ಸೇರಿಬಿಟ್ಟವು. ರಾಷ್ಟ್ರೀಯ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅಂದಿನ ಕರ್ನಾಟಕದ ನೇತಾರರು ಈ ಅನ್ಯಾಯವನ್ನು ಹಲ್ಲುಕಚ್ಚಿ ಸಹಿಸಿಕೊಂಡರು. ಅದೇ ಈಗ ದೊಡ್ಡ ತಪ್ಪಾಗಿ ಹೋಗಿದೆ. ಅಪ್ಪಟ ಕನ್ನಡದ ಪ್ರದೇಶಗಳಾದ ಸೊಲ್ಲಾಪುರ, ಸಾಂಗ್ಲಿ, ಜತ್‌, ಕೊಲ್ಲಾಪುರ, ಉಸ್ಮಾನಾಬಾದ್‌, ಲಾಥೂರ್‌, ಅಕ್ಕಲಕೋಟೆ ಇತ್ಯಾದಿ ಪ್ರದೇಶಗಳು ಕರ್ನಾಟಕದಿಂದ ದೂರವಾಗಿ ಮಹಾರಾಷ್ಟ್ರ ರಾಜ್ಯ ಸೇರಿಕೊಂಡವು. ಹಾಗೆ ನೋಡಿದರೆ ಒಂದು ಕಾಲದಲ್ಲಿ ಮಹಾರಾಷ್ಟ್ರದ ಮುಕ್ಕಾಲು ಭಾಗ ಪ್ರದೇಶಗಳು ಕನ್ನಡಿಗರದ್ದೇ ಆಗಿದ್ದವು. ಈಗ ಕನಿಷ್ಠ ಐದು ಜಿಲ್ಲೆಗಳಾದರೂ ಕರ್ನಾಟಕದಲ್ಲಿ ಇರಬೇಕಿತ್ತು. ಆದರೆ ನಮ್ಮ ದುರದೃಷ್ಟ ಹಾಗೂ ಮಹಾರಾಷ್ಟ್ರದ ಕನ್ನಡಿಗರ ದುರಾದೃಷ್ಟ, ಈ ಜಿಲ್ಲೆಗಳು ಮಹಾರಾಷ್ಟ್ರದಲ್ಲಿ ಉಳಿದುಬಿಟ್ಟವು. ಕನ್ನಡಿಗರು ತಮ್ಮ ತಾಯ್ನೆಲದಲ್ಲೇ ಇದ್ದು, ಪರಕೀಯರಂತೆ ಬದುಕುವ ಅನಿವಾರ್ಯತೆಗೆ ಸಿಲುಕಿದರು.

ವೋಟ್‌ಬ್ಯಾಂಕ್‌ ರಾಜಕಾರಣಕ್ಕೆ ಕನ್ನಡಿಗರು ಬಲಿ: ನಾರಾಯಣಗೌಡ

ಇಷ್ಟೆಲ್ಲ ಕನ್ನಡಿಗರಿಗೆ ಅನ್ಯಾಯವಾದರೂ ಮಹಾರಾಷ್ಟ್ರದವರ ದುರಾಸೆ ಕಡಿಮೆಯಾಗಲಿಲ್ಲ. ಕನ್ನಡಿಗರ ಪ್ರದೇಶಗಳನ್ನು ನಮ್ಮಿಂದ ಕಿತ್ತುಕೊಂಡ ಮೇಲೂ ಅವರಿಗೆ ಬೆಳಗಾವಿ ಬೇಕು. ಅದಕ್ಕಾಗಿ ಕಳೆದ ಐದು ದಶಕಗಳಿಂದ ಮಹಾರಾಷ್ಟ್ರ ಕಿತಾಪತಿ ಮಾಡುತ್ತ ಬಂದಿದೆ. ಹಾಗೆ ನೋಡಿದರೆ ಕರ್ನಾಟಕ ತಾನು ಕಳೆದುಕೊಂಡ ಐದು ಕನ್ನಡದ ಜಿಲ್ಲೆಗಳನ್ನು ಮಹಾರಾಷ್ಟ್ರದಿಂದ ಬಿಡಿಸಿಕೊಳ್ಳಲು ಹೋರಾಟ ಮಾಡಬೇಕಿತ್ತು. ಆದರೆ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಬರಬಾರದು ಎಂದು ನಾವು ಸುಮ್ಮನಾದೆವು. ಆದರೆ ಅವರು ಸುಮ್ಮನಾಗಿಲಿಲ್ಲ. ಬೆಳಗಾವಿಯಲ್ಲಿ ಇರುವ ಮರಾಠಿಗರನ್ನು ಎತ್ತಿಕಟ್ಟುವ ಕೆಲಸ ಮಾಡಿದರು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯಮೂರ್ತಿ ಮೆಹರ್‌ ಚಂದ್‌ ಮಹಾಜನ್‌ ಅವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಲು ಕಾರಣಕರ್ತರಾದರು. ಮಹಾಜನ್‌ ಆಯೋಗದ ರಚನೆಗೆ ಕರ್ನಾಟಕ ತೀವ್ರ ವಿರೋಧ ಮಾಡಿತು. ಆದರೆ ಕೊನೆಯ ಕ್ಷಣದಲ್ಲಿ ಮತ್ತದೇ ‘ರಾಷ್ಟ್ರೀಯ ಐಕ್ಯತೆ’ ದೃಷ್ಟಿಯಿಂದ ಆಯೋಗ ರಚನೆಗೆ ಒಪ್ಪಿಕೊಂಡಿತು. ಮಾತ್ರವಲ್ಲದೇ, ಮಹಾಜನ್‌ ಆಯೋಗದ ವರದಿ ಏನೇ ಬಂದರೂ ಅದನ್ನು ಒಪ್ಪಿಕೊಳ್ಳುವುದಾಗಿ ಘೋಷಿಸಿತು.

‘ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು’, ಹೀಗೆಂದಿದ್ದು ಮಹಾಜನ್‌ ಆಯೋಗವೇ!: ಮಹಾಜನ್‌ ಅವರು ಕನ್ನಡಿಗರೇನೂ ಆಗಿರಲಿಲ್ಲ. ಅವರ ನೇತೃತ್ವದ ಆಯೋಗ ನಮ್ಮ ಬೇಡಿಕೆಯ ಮೇರೆಗೆ ರಚನೆಯಾಗಿದ್ದಾಗಿರಲಿಲ್ಲ. ಆದರೆ ಆಯೋಗ ವರದಿ ಕೊಟ್ಟಾಗ ಅದು ಸ್ಪಷ್ಟವಾಗಿ ‘ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು’ ಎಂದು ಹೇಳಿತು. ಆಯೋಗದ ವರದಿಯನ್ನು ಲೋಕಸಭೆಯಲ್ಲಿ ಮಂಡಿಸುವ ಮುನ್ನವೇ ಮಹಾರಾಷ್ಟ್ರದ ರಾಜಕಾರಣಿಗಳು ಲೀಕ್‌ ಮಾಡಿದರು. ಮಹಾರಾಷ್ಟ್ರದಲ್ಲಿ ದೊಡ್ಡ ಗಲಭೆ ಎಬ್ಬಿಸಿ ಹಲವಾರು ಮಂದಿಯ ಸಾವು-ನೋವಿಗೆ ಕಾರಣರಾದರು. ಮಹಾರಾಷ್ಟ್ರದ ಕನ್ನಡಿಗರ ಮೇಲೆ ವ್ಯಾಪಕ ಹಲ್ಲೆ, ದೌರ್ಜನ್ಯ ನಡೆದವು, ಕನ್ನಡಿಗರ ಆಸ್ತಿಪಾಸ್ತಿ ಲೂಟಿ ಮಾಡಲಾಯಿತು. ಹೀಗೆ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿ ಮಹಾಜನ್‌ ವರದಿ ಜಾರಿಯಾಗದಂತೆ ಮಹಾರಾಷ್ಟ್ರ ರಾಜಕಾರಣಿಗಳು ನೋಡಿಕೊಂಡಿದ್ದರು. ಒಂದು ವೇಳೆ ಮಹಾಜನ್‌ ವರದಿ ಜಾರಿಯಾಗಿದ್ದರೆ, ನಿಪ್ಪಾಣಿ, ಖಾನಾಪುರದಂತೆ ಕೆಲವು ಪ್ರದೇಶಗಳನ್ನು ಕರ್ನಾಟಕ ಕಳೆದುಕೊಳ್ಳಬೇಕಾಗಿ ಬರುತ್ತಿದ್ದರೂ ಅಕ್ಕಲಕೋಟೆ, ಜತ್ತದಂಥ ಅಪ್ಪಟ ಕನ್ನಡ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕಾಗುತ್ತಿತ್ತು. ಅಷ್ಟುಮಾತ್ರವಲ್ಲ, ಈಗ ಕೇರಳ ರಾಜ್ಯ ಸೇರಿರುವ ಅಪ್ಪಟ ಕನ್ನಡದ ನಾಡು ಕಾಸರಗೋಡು ಕರ್ನಾಟಕಕ್ಕೆ ಸೇರುತ್ತಿತ್ತು.

ಮಹಾಜನ್‌ ವರದಿ ಅನುಷ್ಠಾನವಾಗಲಿಲ್ಲ. ಆದರೆ ಮಹಾರಾಷ್ಟ್ರದ ಕ್ಯಾತೆಗಳು ನಿಲ್ಲಲಿಲ್ಲ. ಮಹಾಜನ್‌ ವರದಿ ತಮಗೆ ವಿರುದ್ಧವಾಗಿ ಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜಕಾರಣಿಗಳು ವಾಮಮಾರ್ಗದಲ್ಲಿ ಬೆಳಗಾವಿಯನ್ನು ಕಿತ್ತುಕೊಳ್ಳಲು ಹವಣಿಸಿದರು. ಇದಕ್ಕಾಗಿ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಕಿಡಿಗೇಡಿಗಳ ಅಕ್ರಮ ಕೂಟವೊಂದನ್ನು ರಚಿಸಿ, ಅದರ ಮೂಲಕ ಗಡಿಭಾಗದಲ್ಲಿ ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ನಡೆಸತೊಡಗಿದರು. ಎಂಇಎಸ್‌ ಸಂಘಟನೆಗೆ ಬೇಕಾದ ಹಣ, ಸೌಕರ್ಯಗಳನ್ನು ಮಹಾರಾಷ್ಟ್ರ ರಾಜಕಾರಣಿಗಳು ಕಲ್ಪಿಸಿದರು. ಇಷ್ಟುಮಾತ್ರವಲ್ಲದೆ, ಎಂಇಎಸ್‌ ಸಂಘಟಿಸುವ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರದ ಮಂತ್ರಿಗಳು, ಶಾಸಕರು ಬಂದು ಹೋಗತೊಡಗಿದರು. ಈ ಕಾರ್ಯಕ್ರಮಗಳಲ್ಲಿ ಮಹಾರಾಷ್ಟ್ರದ ರಾಜಕಾರಣಿಗಳು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತ, ಕನ್ನಡಿಗರ ಮೇಲೆ ಹಲ್ಲೆ ನಡೆಸಲು ಮರಾಠಿಗರಿಗೆ ಪ್ರಚೋದನೆ ಮಾಡುತ್ತ ಬಂದರು.

ಎಮ್‌ಇಎಸ್‌ ದೌರ್ಜನ್ಯದ ಲೆಕ್ಕ ಗೊತ್ತೆ?: ಕಳೆದ ಐದು ದಶಕಗಳಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ಮಾಡಿರುವ ದಾಂಧಲೆ, ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಕಿಡಿಗೇಡಿ ಸಂಘಟನೆಯಿಂದಾಗಿ ಬೆಳಗಾವಿಯಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ಎಂಇಎಸ್‌ನಿಂದಾಗಿ ಕನ್ನಡಿಗರು ಭಯದಿಂದ ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂಥ ಸ್ಥಿತಿ ಇತ್ತು ಎಂದರೆ ಅವರ ಗೂಂಡಾಗಿರಿ ಯಾವ ಪ್ರಮಾಣದಲ್ಲಿ ಇತ್ತು ಎಂಬುದನ್ನು ಊಹಿಸಬಹುದು. ಆದರೆ ಯಾವಾಗ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಇಪ್ಪತ್ತು ವರ್ಷಗಳ ಹಿಂದೆ ಬೆಳಗಾವಿಗೆ ಕಾಲಿಟ್ಟಿತೋ ಆಗ ಪರಿಸ್ಥಿತಿ ಬದಲಾಯಿತು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಪಿತೂರಿಗಳನ್ನು ನಡೆಸುತ್ತಿದ್ದ ಕಿಡಿಗೇಡಿಗಳಿಗೆ ಬೆಂಗಳೂರಿನಲ್ಲಿ ಮಸಿ ಬಳಿದು ಎಚ್ಚರಿಕೆ ನೀಡಲಾಯಿತು. ಬೆಳಗಾವಿ ಮಹಾನಗರಪಾಲಿಕೆಯನ್ನು ಆಳುತ್ತಿದ್ದ ಎಂಇಎಸ್‌ ಪಾರುಪತ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಕೊನೆಗೊಳಿಸಿ, ಕನ್ನಡಿಗ ಮೇಯರ್‌ ಮಾಡುವಲ್ಲಿ ಯಶಸ್ವಿಯಾಯಿತು. ಅಷ್ಟುಮಾತ್ರವಲ್ಲದೆ, ಇಡೀ ಜಿಲ್ಲೆಯಾದ್ಯಂತ ಸಂಘಟನೆಯನ್ನು ಬಲಗೊಳಿಸಿ ಕನ್ನಡಿಗರು ಧೈರ್ಯದಿಂದ, ತಲೆ ಎತ್ತಿ ಬದುಕುವಂಥ ವಾತಾವರಣವನ್ನು ನಿರ್ಮಾಣ ಮಾಡಿತು.

ಕನ್ನಡಿಗರ ಧ್ವನಿ ಅಡಗಿಸುವ ಯತ್ನ: ಆದರೆ ಕನ್ನಡಿಗರ ಮೇಲಿನ ತೂಗುಗತ್ತಿ ಇನ್ನೂ ಮರೆಯಾಗಿಲ್ಲ. ಬೆಳಗಾವಿ ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಚ್‌ನಲ್ಲಿ ದಾವೆ ಹೂಡಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳನ್ನು ನಡೆಯಲು ಬಿಟ್ಟು ಸುಮ್ಮನಿರಬೇಕಿದ್ದ ಮಹಾರಾಷ್ಟ್ರದ ರಾಜಕಾರಣಿಗಳು ಮತ್ತೊಮ್ಮೆ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿವೆ. ನಾವು ಕನ್ನಡಿಗರು, ನಮ್ಮದು ಅಪ್ಪಟ ಕನ್ನಡದ ನೆಲ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಒತ್ತಾಯಿಸಿದ, ನಿರ್ಣಯ ಅಂಗೀಕರಿಸಿದ ಜತ್‌ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮಹಾರಾಷ್ಟ್ರ ಸರ್ಕಾರ ನೋಟಿಸ್‌ ನೀಡಿದೆ. ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದೆ. ಅವರನ್ನು ಪ್ರತಿನಿತ್ಯ ಶಿವಸೇನೆ, ಎನ್‌ಸಿಪಿ ಗೂಂಡಾಗಳು ಬೆದರಿಸುತ್ತಿದ್ದಾರೆ. ಈ ಬೆದರಿಕೆಗಳಿಗೆ ಅಲ್ಲಿನ ಕನ್ನಡಿಗರು ಅಂಜುತ್ತಿಲ್ಲ, ಅಳುಕುತ್ತಿಲ್ಲ. ಆದರೆ ಅವರ ಧ್ವನಿಯನ್ನು ಅಡಗಿಸುವ ಎಲ್ಲ ಯತ್ನಗಳು ನಡೆಯುತ್ತಲೇ ಇವೆ.

ನಾವು ಮರಾಠಿಗರ ಹಿತ ಕಾಯ್ದರೆ ಅವರೇನು ಮಾಡಿದರು ತಿಳಿದಿದೆಯೇ?: ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ಮರಾಠಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಇದ್ದಾರೆ. ಇವರಿಗಾಗಿ ಕನ್ನಡ ಶಾಲೆಗಳನ್ನು ತೆರೆಯಬೇಕಾಗಿರುವುದು ಅಲ್ಲಿನ ಸರ್ಕಾರದ ಕರ್ತವ್ಯ. ಆದರೆ ಮಹಾರಾಷ್ಟ್ರ ಸರ್ಕಾರ ಒಂದೊಂದಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತ ಬಂದಿವೆ. ಇರುವ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡದೆ ವಂಚಿಸುತ್ತಿದೆ. ಅದೇ ಸಮಯದಲ್ಲಿ ಬೆಳಗಾವಿಯಲ್ಲಿ ಮರಾಠಿಗರಿಗಿಂತ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ, ಅಲ್ಲಿ ಮರಾಠಿ ಶಾಲೆಗಳನ್ನು ತೆರೆದು ಪೊರೆಯುವ ಕೆಲಸವನ್ನು ನಮ್ಮ ಕರ್ನಾಟಕ ಸರ್ಕಾರ ನಡೆಸುತ್ತಿದೆ.

ಅತ್ಯಂತ ನೋವಿನ ವಿಷಯವೇನೆಂದರೆ ಕರ್ನಾಟಕ ಸರ್ಕಾರ ಮರಾಠಿಗರಿಗಾಗಿ ‘ಮರಾಠಿ ಪ್ರಾಧಿಕಾರ’ ರಚಿಸಿ ಅವರ ಉದ್ಧಾರಕ್ಕೆಂದು ನೂರಾರು ಕೋಟಿ ರುಪಾಯಿಗಳನ್ನು ನೀಡಿತು. ಆದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಏನು ದಕ್ಕಿದೆ? ಅವರಿಗಾಗಿ ಮಹಾರಾಷ್ಟ್ರ ಸರ್ಕಾರ ಎಂದಾದರೂ ಒಮ್ಮೆ ಒಂದು ಪ್ರಾಧಿಕಾರ ಮಾಡಲು ಸಾಧ್ಯವೇ? ಆ ಪ್ರಾಮಾಣಿಕತೆ ಅವರಿದೆಯೇ? ಸಹಾಯ ಮಾಡುವುದಿರಲಿ, ಕನ್ನಡ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದೆ. ಈ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ನೀರಾವರಿಯ ವ್ಯವಸ್ಥೆಗಳನ್ನು ಮಾಡಿಕೊಡುತ್ತಿಲ್ಲ. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ತಲುಪಬೇಕಾದ ಯೋಜನೆಗಳು ತಲುಪುತ್ತಲೇ ಇಲ್ಲ. ಕನ್ನಡಿಗರನ್ನು ಅಲ್ಲಿ ಎರಡನೇ ದರ್ಜೆ ಪ್ರಜೆಗಳಂತೆ ನೋಡಿಕೊಳ್ಳಲಾಗುತ್ತಿದೆ.

ರಾಜ್ಯದ ಎಸ್‌ಸಿ, ಎಸ್‌ಟಿ ಮೀಸಲಿಗೆ ಕೇಂದ್ರ ಸರ್ಕಾರದಿಂದ ಕೊಕ್ಕೆ: ಸಿದ್ಧರಾಮಯ್ಯ

ಕನ್ನಡಿಗರ ಗೋಳು ಕೇಳುವವರಾರು?: ಮಹಾರಾಷ್ಟ್ರ ಕನ್ನಡಿಗರ ಅಳಲು ಆಲಿಸಬೇಕಾದವರು ಯಾರು? ಕರ್ನಾಟಕ ಸರ್ಕಾರ ಎಂದೂ ಇವರ ಪರವಾಗಿ ಮಾತನಾಡಲಿಲ್ಲ. ಇವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಕನ್ನಡಿಗರ ಹಕ್ಕುಗಳನ್ನು ರಕ್ಷಿಸಿ ಎಂದು ಗಟ್ಟಿಧ್ವನಿಯಲ್ಲಿ ಎಂದೂ ಮಹಾರಾಷ್ಟ್ರ ಸರ್ಕಾರವನ್ನು ಕೇಳಲಿಲ್ಲ. ಅತ್ತ ಮಹಾರಾಷ್ಟ್ರ ಸರ್ಕಾರ ಕನ್ನಡಿಗರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಅಲ್ಲಿನ ಕನ್ನಡಿಗರಿಗೆ ಯಾವ ಸವಲತ್ತನ್ನೂ ಒದಗಿಸುತ್ತಿಲ್ಲ. ಎರಡೂ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಹಾರಾಷ್ಟ್ರ ಕನ್ನಡಿಗರಲ್ಲಿ ಇಂದು ಅನಾಥ ಪ್ರಜ್ಞೆ ಕಾಡುತ್ತಿದೆ.

ಈ ಅನ್ಯಾಯ ನಿಲ್ಲಲೇಬೇಕು. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಕೊನೆಗೊಳ್ಳಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಲಿನ ಕನ್ನಡಿಗರನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಕೊಲ್ಲಾಪುರ, ಸಾಂಗ್ಲಿ, ಸೊಲ್ಲಾಪುರ, ಉಸ್ಮಾನಾಬಾದ್‌ ಮತ್ತು ಲಾಥೂರ್‌ ಜಿಲ್ಲೆಗಳನ್ನು ಕರ್ನಾಟಕಕ್ಕೆ ಬಿಟ್ಟುಕೊಡಬೇಕು. ಈ ಪ್ರದೇಶಗಳನ್ನು ಬಿಟ್ಟುಕೊಡಿ ಎಂದು ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಆಂದೋಲನ ಆರಂಭಿಸಬೇಕು. ಈಗ ನಮಗೆ ಉಳಿದಿರುವ ದಾರಿ ಅದೊಂದೇ ಆಗಿದೆ.

Follow Us:
Download App:
  • android
  • ios