ನವದೆಹಲಿ[ಏ.26]: 'ಪಿಎಂ ನರೇಂದ್ರ ಮೋದಿ' ಸಿನಿಮಾ ಪ್ರದರ್ಶನವನ್ನುಲೋಕಸಭಾ ಚುನಾವಣೆ ಮುಗಿಯುವವರೆಗೆ ಬಿಡುಗಡೆಗೊಳಿಸದಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರಿಂಕೋರ್ಟ್‌ ತಿರಸ್ಕರಿಸಿದೆ.

ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾ ನಿರ್ಮಾಪಕ ಸಂದೀಪ್‌ ವಿನೋದ್‌ ಕುಮಾರ್‌ ಸಿಂಗ್‌ ಚುನಾವಣಾ ಆಯೋಗದ ವರದಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್, ನ್ಯಾಯಮೂರ್ತಿ ದೀಪಕ್‌ ಗುಪ್ತಾ ಮತ್ತು ಸಂಜೀವ್‌ ಖನ್ನಾರಿದ್ದ ತ್ರಿಸದಸ್ಯ ಪೀಠ ಈ ಮನವಿಯನ್ನು ವಜಾಗೊಳಿಸಿದೆ.

ಚುನಾವಣಾ ಆಯೋಗವು ಸಿನಿಮಾ ವೀಕ್ಷಿಸಿದ ಬಳಿಕ ಸುಪ್ರೀಂಗೆ ಸಲ್ಲಿಸಿದ್ದ ಆರು ಪುಟಗಳ ವರದಿಯಲ್ಲಿ, 'ಸಿನಿಮಾದಲ್ಲಿ ಪ್ರಧಾನಿ ಮೋದಿ ಪರವಾದ ಅಂಶಗಳಿದ್ದು, ವಿರೋಧ ಪಕ್ಷಗಳ ನಾಯಕರನ್ನು ಲಘುವಾಗಿ ತೋರಿಸಲಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಪ್ರೇರಿತ ಅಂಶವಿರುವ ಯಾವುದೇ ಸಿನಿಮಾಗಳನ್ನು ಬಿಡುಗಡೆಗೊಳಿಸದಂತೆ ತಡೆ ನೀಡಬೇಕು ಎಂದು ಉಲ್ಲೇಖಿಸಿತ್ತು. ಮುಂದಿನ ಆದೇಶ ಬರುವವರೆಗೂ ಸಿನಿಮಾ ಪ್ರದರ್ಶನ ಮಾಡದಂತೆ ನಿರ್ಮಾಪಕರಿಗೂ ನೋಟಿಸ್‌ ನಿಡಿತ್ತು.

ವರದಿಯನ್ನು ನಿರಾಕರಿಸಿದ್ದ ನಿರ್ಮಾಪಕ, ಚುನಾವಣಾ ಆಯೋಗವು ಸಿನಿಮಾಗೆ ತಡೆ ನೀಡುವಂತೆ ಸಲ್ಲಿಸಿರುವ ವರದಿಯು ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದರು.

ನಟ ವಿವೇಕ್‌ ಒಬೇರಾಯ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಪಿಎಂ ನರೇಂದ್ರ ಮೋದಿ' ಸಿನಿಮಾ ಬಿಡುಗಡೆಗೆ ತಡೆಕೋರಿ ಕಾಂಗ್ರೆಸ್‌ ನಾಯಕ ಅಮನ್‌ ಪಾನ್ವಾರ್‌ ಅವರು ಏಪ್ರಿಲ್‌ 09ರಂದು, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕರಿಸಿದ್ದ ಸುಪ್ರೀಂ, ಸಿಬಿಎಫ್‌ಸಿಗೆ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವ ಮುನ್ನವೇ ತಡೆಕೋರಿ ಅರ್ಜಿ ಸಲ್ಲಿಸಿರುವುದು 'ಅಕಾಲಿಕ' ಎಂದಿತ್ತು.