11 ದಿನಗಳಲ್ಲಿ 25 ಲಕ್ಷ ರೂ ಗಳಿಸಿದ ‘ಫಾದರ್’!

ನಾಸಿರುದ್ದೀನ್‌ ಶಾ ಮತ್ತು ಮಗಳು ಹೀಬಾ ಶಾ ತಂದೆ ಮಗಳಾಗಿ ನಟಿಸಿರುವ ಫಾದರ್‌ ನಾಟಕ ಚೆನ್ನಾಗಿದೆ ಅಂದರೆ, ಕತೆಯೇನು ಎಂಬ ಪ್ರಶ್ನೆ ಬರುತ್ತದೆ. ಕತೆ ಏನು ಅನ್ನುವುದನ್ನು ಹೇಳಲಿಕ್ಕಾಗದೇ ಇರುವುದೇ ಒಳ್ಳೆಯ ನಾಟಕವಲ್ಲವೇ? ನಾಟಕವೆಂದರೆ ಕತೆಯಲ್ಲ, ಅಭಿನಯ. ಅದು ಅಭಿನಯವೂ ಅಲ್ಲ. ಇವರು ಅವರಾಗಿ ಕರಗುತ್ತಾ ಹೋಗುವುದು. ಕೊನೆಗೆ ಇವರನ್ನು ಮೆತ್ತಿಕೊಂಡಿದ್ದ ಅವರು ಕರಗಿ ಹೋಗಿ ಇವರೇ ಉಳಿದುಬಿಡುವುದು. ಇದೆಲ್ಲ ಹೇಳಲಿಕ್ಕೆ ಸುಲಭ, ಹೇಳುವಂತೆ ಮಾಡುವುದು ಕೊಂಚ ಕಷ್ಟವೇ.

Florian Zeller's The Father by Naseeruddin Shah collects 25 lakhs in 11 days

ಫ್ರೆಂಚ್‌ ನಾಟಕವೊಂದರ ಇಂಗ್ಲಿಷ್‌ ಅನುವಾದ ಫಾದರ್‌. ಕಂಗೆಡಿಸುವ ನಾಟಕ ಅದು. ತುಂಡು ತುಂಡು ಮಾತುಗಳಲ್ಲಿ, ವಿಕ್ಷಿಪ್ತ ನಡವಳಿಕೆಯಲ್ಲಿ, ಮತ್ತೆ ಮತ್ತೆ ಮರುಕಳಿಸುವ ಪ್ರಶ್ನೆಗಳಲ್ಲಿ, ಅವುಗಳಿಗೆ ಸಿಗುವ ಅದದೇ ಉತ್ತರಗಳಲ್ಲಿ ನಮ್ಮ ಸಂಬಂಧದ ಸೊಕ್ಕು ಮತ್ತು ಪೊಳ್ಳುತನ ಅಡಗಿಕೊಂಡಿದೆ ಅನ್ನಿಸುವಂತೆ ಭಾಸವಾಗುತ್ತದೆ. ಯಾರನ್ನು ಮರವೆ ಆವರಿಸಿದೆ. ಮಗಳನ್ನೋ ತಂದೆಯನ್ನೋ? ಮರವೆ ಎಂಬುದು ದೈಹಿಕವೋ ಮಾನಸಿಕವೋ ಸಾಂದರ್ಭಿಕವೋ ಸಂಬಂಧಗಳಿಗೆ ಸಂಬಂಧಪಟ್ಟದ್ದೋ? ಅಪ್ಪನನ್ನು ಮಗಳು ಮರೆಯುತ್ತಾಳೆಯೇ? ಮಗಳನ್ನು ಅಪ್ಪ ಮರೆಯುತ್ತಾನೆಯೇ? ಇಬ್ಬರ ನಡುವಿನ ಸಂಬಂಧವನ್ನು ಪರಸ್ಪರರು ಮರೆಯಲು ಬಯಸುತ್ತಾರೆಯೇ?

ವಿಚಿತ್ರವಾದ ಸನ್ನಿವೇಶವೊಂದನ್ನು ನಾಟಕವಾಗಿ ಕಟ್ಟಿಕೊಟ್ಟಿದ್ದಾನೆ ಫ್ರೆಂಚ್‌ ನಾಟಕಕಾರ ಫೆä್ಲೕರಿಯನ್‌ ಝೆಲ್ಲರ್‌. ವಿಚ್ಛಿದ್ರಗೊಳ್ಳುತ್ತಿರುವ ಸಂಬಂಧಗಳ ಚರಿತ್ರೆಯಿದು. ಕ್ರಮೇಣ ಅಪ್ಪನಿಗೆ ಅಪರಿಚಿತ ಆಗುತ್ತಾ ಹೋಗುವ ತನ್ನದೇ ಮನೆ, ತನ್ನ ಮನೆಯೇ ತನ್ನದಲ್ಲ ಅನ್ನಿಸುವುದು, ಅಲ್ಲಿ ಒಂದೊಂದೇ ವಸ್ತು ಕಾಣೆಯಾಗಿ ಹೊಸ ಪರಿಸರಕ್ಕೆ ಬಂದಂತೆ ಭಾಸವಾಗುವುದು ಮುಂತಾದವುಗಳ ಮೂಲಕ ದಿಗ್ಭ್ರಮೆ ಹುಟ್ಟಿಸುವ ನಾಟಕ, ಮಾತುಗಳಲ್ಲೂ ಅದನ್ನೇ ಮಾಡುತ್ತಾ ಹೋಗುತ್ತದೆ. ಮಗಳು ಒಮ್ಮೊಮ್ಮೆ ಒಂದೊಂದು ಮಾತಾಡುತ್ತಾ, ನೋಡುತ್ತಾ ಇರುವ ನಮಗೇ ಮರೆವು ಆವರಿಸಿಕೊಂಡಂತೆ ಅನ್ನಿಸುತ್ತದೆ. ಹೀಗಾಗಿ ಈ ನಾಟಕದೊಳಗೆ ನಾವು ಇಳಿಯುತ್ತಾ ಹೋಗುತ್ತೇವೆ. ನಾವು ನೋಡುತ್ತಿರುವ ನಾಲ್ಕು ಗೆರೆಯನ್ನೇ ಗೋಡೆ ಮಾಡಿಕೊಂಡು ಅದರೊಳಗೇ ಬದುಕುವ ತಂದೆ ಮಗಳು ಅಳಿಯ ಎಂಬ ಮೂರು ಬಿಂದುಗಳ ನಡುವಿನ ವಿಘಟನೆಯಲ್ಲಿ ನಮ್ಮ ಕಾಲದ ಸಕಲ ಸಂಕಟಗಳೂ ತುಂಬಿಕೊಂಡಂತೆ ಭಾಸವಾಗುತ್ತದೆ.

ನೀವು ಚೆನ್ನಾಗಿದ್ದೀರಾ? ನಿಮಗೆ ನೆನಪಿದೆ ತಾನೇ? ಎಂಬ ಎರಡು ಪ್ರಶ್ನೆಗಳು ಬಾಧಿಸುತ್ತಾ ಹೋಗುವ ಪರಿ. ಟೈಮೆಷ್ಟುಎಷ್ಟುಅಂದಾಗ ಔಷಧಿ ತೆಗೆದುಕೊಳ್ಳುವ ಟೈಮು ಅನ್ನುವ ವ್ಯಂಗ್ಯ ಮತ್ತು ಸತ್ಯ, ಬದುಕನ್ನು ನಿರರ್ಥಕವೂ ಸನ್ನಿವೇಶವನ್ನು ಅರ್ಥಹೀನವೂ ಮಾತನ್ನು ಸಮಯಸಾಧಕವೂ ಮಾಡುತ್ತಾ ಹೋಗುವ ನಮ್ಮ ದೈನಂದಿನ ಚಟುವಟಿಕೆ, ಕ್ರಮೇಣ ಮಗಳು ಕೂಡ ಅಪ್ಪನ ಸಾನ್ನಿಧ್ಯದಲ್ಲಿ ಸಂತೋಷಕ್ಕಿಂತ ಸಂಕಟವೇ ಹೆಚ್ಚಿದೆ ಎಂದು ನಂಬುವುದು, ಅಪ್ಪನನ್ನು ನೋಡಿಕೊಳ್ಳಲು ಬರುವ ಹುಡುಗಿ ವೃತ್ತಿ ಸಂಕಟಗಳಾಚೆಗೆ ಒಂದು ಪ್ರಶ್ನೆ ಎದುರಾಗುತ್ತದೆ. ಅಪ್ಪನನ್ನು ನೋಡಿಕೊಳ್ಳುವ ಕರ್ತವ್ಯ ಮಗಳದ್ದು. ಆದರೆ ಆ ಕರ್ತವ್ಯವನ್ನು ಅವಳು ಮತ್ತೊಬ್ಬಳಿಗೆ ವರ್ಗಾಯಿಸಬಹುದು. ಹಾಗೆ ಮನೆಗೆ ಬರುವ ನರ್ಸ್‌ ಮಾತ್ರ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಲೇಬೇಕು. ಹೀಗಾಗಿ ಕರ್ತವ್ಯ ಎಂಬುದು ಸಂಬಳವನ್ನು ಆಧರಿಸಿದ್ದು ಎನ್ನುವುದನ್ನೂ ನಾಟಕ ಸೂಚ್ಯವಾಗಿ ಹೇಳುತ್ತದೆ.

ತಾಂತ್ರಿಕವಾಗಿಯೂ ನಾಟಕ ಅತ್ಯುತ್ತಮವಾಗಿತ್ತು. ಬೆಳಕು ಮತ್ತು ಸೌಂಡ್‌ ಎರಡನ್ನೇ ಬಳಸಿಕೊಂಡು ಖಾಲಿಖಾಲಿಯಾಗಿದ್ದ ರಂಗದ ಮೇಲೆ ಬೇಕು ಬೇಕಾದ್ದನ್ನು ಸೃಷ್ಟಿಸಿಕೊಳ್ಳುವ ಚಾಕಚಕ್ಯತೆ, ನಟನೆಯೊಂದೇ ನಾಟಕದ ಮೂಲಶಕ್ತಿ ಮಿಕ್ಕಿದ್ದೆಲ್ಲ ಪೂರಕ ಅಷ್ಟೇ ಅನ್ನುವುದನ್ನು ಸಾಬೀತುಪಡಿಸಿದ ರೀತಿ, ಸಂಭಾಷಣೆಯಾಚೆಗೂ ಧ್ವನಿಸಬಲ್ಲ ಮೌನ ಮತ್ತು ಕೇಳುವ ಕೇಳಿಸದ ಅರ್ಥವಾದ ಅರ್ಥವಾಗದ ಮಾತುಗಳು ಸೃಷ್ಟಿಸಿದ ಪರಿಸರ- ಎಲ್ಲವೂ ಪ್ರೇಕ್ಷಕನ ಭಾವಾಭಿನಯವೂ ಸೇರಿಕೊಂಡು ಸೃಷ್ಟಿಸಿದ ರಂಗಾನುಭವಕ್ಕೆ ಕಾರಣವಾಯಿತು.

ಕೊನೆಯಲ್ಲಿ ತನ್ನ ಪುಟ್ಟಮಗಳ ಕೈ ಹಿಡಿದುಕೊಂಡು ಎಳೆಬಿಸಿಲಲ್ಲಿ ನಿಲ್ಲುವ ಅಪ್ಪನ ಕೈಯಲ್ಲಿ ಮಗಳಿದ್ದಳೋ, ಮಗಳಿದ್ದಾಳೆ ಎಂಬ ಭ್ರಮೆ ಮಾತ್ರವೇ ನಿಜವಾಗಿತ್ತೋ? ಅದು ಗೊತ್ತಾಗದೇ ಇರುವುದರಲ್ಲೇ ತುಂಬುಸಂತೋಷವಿದೆ. ಎಲ್ಲಾ ತಂತ್ರಜ್ಞಾನವನ್ನೂ ರಂಗಭೂಮಿ ಮೀರುವುದು ಹೀಗೆ.

ಸುಮಾರು ಹದಿಮೂರು ದಿನಗಳ ಕಾಲ ನಡೆದ ಫಾದರ್‌ ನಾಟಕದ ಪ್ರವೇಶದರ 750 ರೂಪಾಯಿ ಇತ್ತು. ಆದರೆ ಹದಿಮೂರು ದಿನಗಳೂ ರಂಗಮಂದಿರ ತುಂಬಿತ್ತು. ಟಿಕೆಟ್‌ ಸಿಗದೇ ಹತ್ತಾರು ಮಂದಿ ಮರಳುವ ದೃಶ್ಯ ಸಾಮಾನ್ಯವಾಗಿತ್ತು. ಇದು ರಂಗಭೂಮಿ ಮಟ್ಟಿಗೆ ಸಂತೋಷದ ಸಂಗತಿಯಲ್ಲದೇ ಮತ್ತೇನು?

Latest Videos
Follow Us:
Download App:
  • android
  • ios