ನವದೆಹಲಿ[ಏ.08]: ಸಾಮಾಜಿಕ ಜಾಲತಾಣಗಳ ಪೈಕಿ ಮುಂಚೂಣಿಯಲ್ಲಿರುವ ಫೇಸ್‌ಬುಕ್‌ ಕೂಡ ಈಗ ಚುನಾವಣೆಯ ಪ್ರಚಾರಕ್ಕೆ ಬಹುದೊಡ್ಡ ವೇದಿಕೆಯಾಗಿ ಪರಿಣಮಿಸಿದೆ.

ಫೇಸ್‌ಬುಕ್‌ ಜಾಹೀರಾತು ವಿಭಾಗವೇ ನೀಡಿರುವ ಮಾಹಿತಿ ಪ್ರಕಾರ ಫೆಬ್ರುವರಿ ಮತ್ತು ಮಾಚ್‌ರ್‍ನಲ್ಲಿ ರಾಜಕೀಯ ಪಕ್ಷಗಳು, ಲೋಕಸಭಾ ಅಖಾಡದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ವ್ಯಯಿಸಿರುವ ಹಣ ಬರೋಬ್ಬರಿ 10 ಕೋಟಿ ರುಪಾಯಿಗೂ ಹೆಚ್ಚು. ಇದರಲ್ಲಿ ಬಿಜೆಪಿ ಅಭ್ಯರ್ಥಿಗಳದ್ದೇ ಬಹುದೊಡ್ಡ ಪಾಲು. 2 ತಿಂಗಳಾವಧಿಯಲ್ಲಿ 51,810 ರಾಜಕೀಯ ಜಾಹೀರಾತುಗಳಿಗಾಗಿ ಒಟ್ಟು 10.32 ಕೋಟಿ ರು. ವ್ಯಯಿಸಲಾಗಿದೆ.

ಬಿಜೆಪಿ ‘ಭಾರತ್‌ ಕೇ ಮನ್‌ ಕೀ ಬಾತ್‌’ ಪೇಜ್‌ಗಾಗಿ ಸುಮಾರು 2.23 ಕೋಟಿ ರು. ವ್ಯಯಿಸಿದೆ. ಅಲ್ಲದೆ, ಮೈ ಫಸ್ಟ್‌ ವೋಟ್‌ ಫಾರ್‌ ಮೋದಿ ಹಾಗೂ ನೇಷನ್‌ ವಿತ್‌ ನಮೋ ಪೇಜ್‌ಗಳಿಗೂ ಭಾರೀ ಪ್ರಮಾಣದ ಹಣ ವ್ಯಯಿಸಿದೆ. ಆದರೆ, ಕಾಂಗ್ರೆಸ್‌ ಕಳೆದೆರಡು ತಿಂಗಳಲ್ಲಿ 5.91 ಲಕ್ಷ ರು.ಗಳನ್ನು ವ್ಯಯಿಸಿದೆ. ಫೇಸ್ಬುಕ್‌ ಭಾರತದಲ್ಲಿ ಎರಡು ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ರಾಜಕೀಯ ಪಕ್ಷಗಳು ಅವರ ಮತಗಳತ್ತ ಈ ಮೂಲಕ ದೃಷ್ಟಿಹರಿಸಿದೆ.