Asianet Suvarna News Asianet Suvarna News

ಬಿಜೆಪಿ ಹೊಸ ದಾಖಲೆ: 135 ವರ್ಷದ ಇತಿಹಾಸವಿರುವ ಕೈಗೆ ಭಾರೀ ಹಿನ್ನಡೆ!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 135 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ನೂತನ ದಾಖಲೆ ಸೃಷ್ಟಿಸಿದೆ. ಅಷ್ಟಕ್ಕೂ ಅದೇನು? ಇಲ್ಲಿದೆ ವಿವರ

BJP Created a record by contesting 543 Loksabha constituencies
Author
Bangalore, First Published Apr 25, 2019, 8:34 AM IST

ನವದೆಹಲಿ[ಏ.25: ಕಾರ್ಯಕರ್ತರ ಸಂಖ್ಯೆ ಆಧರಿಸಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆಗೆ ಪಾತ್ರವಾಗಿದ್ದ ಭಾರತೀಯ ಜನತಾ ಪಕ್ಷ, ಇದೀಗ ತನ್ನ ರಾಜಕೀಯ ಹಾದಿಯಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ. ದೇಶದ ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅದು, ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ಅನ್ನು ಹಿಂದಿಕ್ಕಿದೆ.

ಬಿಜೆಪಿ, ಇದೇ ಮೊದಲ ಬಾರಿಗೆ 135 ವರ್ಷಗಳ ಇತಿಹಾಸ ಹೊಂದಿರುವ ಅತೀ ಹಳೇ ಪಕ್ಷ ಎಂದೇ ಖ್ಯಾತವಾಗಿರುವ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ದೇಶದ 543 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 423 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಆದರೆ, 437 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ದೇಶದ ಸ್ವಾತಂತ್ರ್ಯಪೂರ್ವದಲ್ಲಿ ಸ್ಥಾಪನೆಯಾಗಿ 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವು 2014ರ ಲೋಕಸಭಾ ಚುನಾವಣೆಯಲ್ಲಿ 44 ಕ್ಷೇತ್ರಗಳಿಗೆ ಕುಸಿದಿತ್ತು. ಹೀಗಾಗಿ, ತನ್ನ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ವಿವಿಧ ರಾಜಕೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದು, ಹಲವು ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಹೀಗಾಗಿ, ಕಾಂಗ್ರೆಸ್ ಸ್ಪರ್ಧೆ ಮಾಡಿದ ಕ್ಷೇತ್ರಗಳು ಬಿಜೆಪಿಗಿಂತ ಕಡಿಮೆ ಆಗಿದೆ.

ಈ ಹಿಂದೆಯೂ 1998, 1999ರಲ್ಲಿಯೂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಿತ್ತು. ಆದಾಗ್ಯೂ, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪಟ್ಟಿಯಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿತ್ತು. ಆದರೆ, 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಅಲೆಗೆ ಸಿಲುಕಿದ ಕಾಂಗ್ರೆಸ್ ಸಂಖ್ಯಾಬಲ 44ಕ್ಕೆ ಕುಸಿದಿತ್ತು.

Follow Us:
Download App:
  • android
  • ios