UGC-NET ಪರೀಕ್ಷೆ ನಡೆದ ಮರುದಿನವೇ ರದ್ದು, ಅಕ್ರಮ ದೂರಿನ ಬೆನ್ನಲ್ಲೇ ಸರ್ಕಾರದ ಆದೇಶ!
NET ಪರೀಕ್ಷೆ ನಡೆದ ಮರುದಿನವೇ ರದ್ದಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸೈಬರ್ ಸೆಕ್ಯೂರಿಟಿ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಶಿಕ್ಷಣ ಸಚಿವಾಲಯ ಪರೀಕ್ಷೆ ರದ್ದು ಮಾಡಿದೆ.
ನವದೆಹಲಿ(ಜೂ.19) ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ(NET) ಭಾರಿ ಅಕ್ರಮ ನಡಿದೆ ಅನ್ನೋ ದೂರು ಬಂದ ಬೆನ್ನಲ್ಲೇ ಇದೀಗ ಪರೀಕ್ಷೆ ರದ್ದು ಆದೇಶ ಹೊರಡಿಸಲಾಗಿದೆ. 11 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದೀಗ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಇಷ್ಟೇ ಅಲ್ಲ ಹೊಸದಾಗಿ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ.
ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಅಥವಾ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಹುದ್ದೆಗೆ ಅರ್ಹತೆಯನ್ನು ನಿರ್ಧರಿಸಲು ನಡೆಸು UGC-NET ಎಕ್ಸಾಂ ಇತ್ತೀಚೆಗೆ ನಡೆದಿತ್ತು. ಆದರೆ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಅನ್ನೋ ದೂರುಗಳು ದಾಖಲಾಗಿತ್ತು. ಇಷ್ಟೇ ಅಲ್ಲ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ನೆಟ್ ಪರೀಕ್ಷೆಯನ್ನು ರದ್ದು ಮಾಡಿದೆ.
ಇನ್ನು ವರ್ಷಕ್ಕೆ ಎರಡು ಬಾರಿ ಕಾಲೇಜಿಗೆ ಪ್ರವೇಶ ಅವಕಾಶ: ವಿದೇಶಗಳಲ್ಲಿನ ವ್ಯವಸ್ಥೆ ಭಾರತದಲ್ಲೂ ಆರಂಭ
ದೇಶದಾದ್ಯಂತ 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 11 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೀಘ್ರದಲ್ಲೇ ಪರೀಕ್ಷೆ ದಿನಾಂಕ ಪ್ರಕಟಿಸಲಾಗುತ್ತದೆ ಎಂದು NTA ಹೇಳಿದೆ. ಅಲ್ಲದೆ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂಬುದಾಗಿ NTA ತಿಳಿಸಿದೆ.
ಪರೀಕ್ಷೆಯಲ್ಲಿ ಅಕ್ರಮದ ವಾಸನೆಯನ್ನು ಸೈಬರ್ ಸೆಕ್ಯೂರಿಟಿ ಅಥಾರಿಟಿ ಕೂಡ ಖಚಿಪಡಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಸೈಬರ್ ಸೆಕ್ಯೂರಿಟಿ ಅಥಾರಿಟಿ ಸೂಚನೆ ಮೇರೆಗೆ ಇದೀಗ ಶಿಕ್ಷಣ ಸಚಿವಾಲಯ ಪರೀಕ್ಷೆ ರದ್ದುಗೊಳಿಸಿದೆ.