ಕಂಪ್ಲಿ(ಜ.13): ಕೊರೋನಾ ಭಯದಿಂದ ಹಾಗೂ ಆರ್ಥಿಕ ಸಂಕಷ್ಟದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೆಲಸಕ್ಕೆ ಕಳುಹಿಸುತ್ತಿದ್ದರು. ಇದರಿಂದಾಗಿ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರುಗಳು ಮನೆಗಳಿಗೆ ಹಾಗೂ ಅವರು ಕೆಲಸ ಮಾಡುತ್ತಿದ್ದಂತಹ ಸ್ಥಳಗಳಿಗೆ ತೆರಳಿ ಶಾಲೆಗೆ ಕರೆತರುವಂತಹ ಪ್ರಸಂಗ ತಾಲೂಕಿನಲ್ಲಿ ಉಂಟಾಗಿದೆ.

ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿದ್ದಂತೆ ಸರ್ಕಾರ 6ರಿಂದ 10ನೇ ತರಗತಿಗಯವರೆಗೆ ತರಗತಿಗಳನ್ನು ಆರಂಭಿಸುವಂತೆ ಸೂಚಿಸಿತ್ತು. ಅದರಂತೆ ಜ. 1ರಿಂದ ತಾಲೂಕಿನ ಎಲ್ಲಾ ಶಾಲೆಗಳು ತೆರೆಯಲ್ಪಟ್ಟಿವೆ. ಮಕ್ಕಳ ಸುರಕ್ಷ ಕ್ರಮಗಳನ್ನು ಅಳವಡಿಕೊಂಡು ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ನಡೆಸಲು ಉತ್ಸುಕರಾಗಿದ್ದರು. ಕೊರೋನಾ ಭಯ ಹಾಗೂ ಆರ್ಥಿಕ ಸಂಕಷ್ಟದಿಂದ ಪೋಷಕರು ಮಕ್ಕಳನ್ನು ಕೆಲಸಕ್ಕೆ ಕಳಿಸುತ್ತಿದ್ದಾರೆ. ಇದರಿಂದ ಶಾಲೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಬರುತ್ತಿದ್ದು ಶಿಕ್ಷಣದಿಂತ ವಂಚಿತರಾಗುತ್ತಿದ್ದರು. ಇದನ್ನು ಅರಿತು ಪಟ್ಟಣದಲ್ಲಿನ ಷಾಮಿಯಾಚಂದ್‌ ಶಾಲೆಯ ಮುಖ್ಯಗುರುಗಳು, ಶಿಕ್ಷಕರುಗಳು ವಿದ್ಯಾರ್ಥಿಗಳ ಮನೆಗಳಿಗೆ ಹಾಗೂ ಅವರು ಕೆಲಸ ಮಾಡುತ್ತಿದ್ದಂತಹ ಗ್ಯಾರೇಜ್‌, ಅಂಗಡಿ, ಹೊಲಗಳಿಗೆ ಹುಡುಕಿಕೊಂಡು ಹೋಗಿ ಮಕ್ಕಳಿಗೆ ಶಾಲೆಗೆ ಬರುವಂತೆ ಬುದ್ಧಿವಾದ ಹೇಳಿದರು. ಅಲ್ಲದೇ ಪೋಷಕರಿಗೆ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡು ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿಕೊಂಡರು.

ಬ್ಯಾಟರಿ ಚಾಲಿತ ಬೈಸಿಕಲ್‌ ತಯಾರಿಸಿದ ವಿದ್ಯಾರ್ಥಿಗಳು

ಸರ್ಕಾರದ ಆದೇಶದಂತೆ ಶಾಲೆಗಳು ತೆರೆದಿದ್ದರೂ ಮಕ್ಕಳು ಶಾಲೆಗೆ ಬರದೆ ಶಾಲಾ ಕೊಠಡಿಗಳು ಖಾಲಿ ಖಾಲಿಯಾಗಿದ್ದವು. ಇದನ್ನರಿತು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮಕ್ಕಳ ಮನೆಗಳಿಗೆ ಹಾಗೂ ಅವರು ಕೆಲಸ ಮಾಡುತ್ತಿರುವ ಅಂಗಡಿಗಳಿಗೆ ತೆರಳಿ ಶಾಲೆಗೆ ಬರುವಂತೆ ಸೂಚಿಸಿದೆವು. ಇದೀಗ 50 ಇದ್ದಂತಹ 10ನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ ನೂರಕ್ಕೇರಿದೆ. 10-20 ಇದ್ದಂತಹ 8 ಹಾಗೂ 9ನೇ ತರಗತಿಗಳ ವಿದ್ಯಾರ್ಥಿಗಳ ಸಂಖ್ಯೆ ಅರವತ್ತಕ್ಕೇರಿದೆ ಎಂದು ಕಂಪ್ಲಿ ಪಟ್ಟಣದ ಷಾಮಿಯಾಚಂದ್‌ ಪದವಿಪೂರ್ವ ಕಾಲೇಜು ಪ್ರೌಢ ಶಾಲಾ ಪ್ರಭಾರ ಉಪ ಪ್ರಾಂಶುಪಾಲ ಎಸ್‌.ಜಿ. ಚಿತ್ರಗಾರ ತಿಳಿಸಿದ್ದಾರೆ.