ಬೆಂಗಳೂರು(ಫೆ.06): ​ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ ಹಾಗೂ ರಾಜ್ಯದ ಎಲ್ಲ ಇಲಾಖೆಗಳಿಗೂ ಸಮವಸ್ತ್ರಗಳನ್ನು ಇಲಾಖೆಯ ನಿಗಮಗಳಿಂದಲೇ ಪೂರೈಕೆ ಮಾಡಲಾಗುವುದು ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ್‌ ಹೇಳಿದ್ದಾರೆ. 

ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ಹೊರ ರಾಜ್ಯಗಳಿಂದ ಬಟ್ಟೆ ಖರೀದಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ರಾಜ್ಯದ ನೇಕಾರರಿಂದ ಖರೀದಿಸಲಾಗುವುದು, ಈ ಹಿಂದೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ಕೊರತೆಯಾದ ಕಾರಣ ಹೊರ ರಾಜ್ಯಗಳಿಂದ ಖರೀದಿಸಲಾಗಿತ್ತು ಎಂದರು.

ಯುಪಿಎಸ್ಸಿ : ಅಭ್ಯರ್ಥಿಗಳಿಗೆ ಸರ್ಕಾರದಿಂದ ಇಲ್ಲಿದೆ ಗುಡ್‌ ನ್ಯೂಸ್

ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆಯಡಿ ಕಲಬುರಗಿ ಮತ್ತು ಬೆಂಗಳೂರು ವಿಭಾಗಗಳಿಗೆ ಪ್ರತಿ ವರ್ಷ 50 ಲಕ್ಷ ಮೀಟರ್‌ ಸಮವಸ್ತ್ರ ಸರಬರಾಜು ಮಾಡುವ ಸಂಬಂಧ 2018-19ರಿಂದ 2020-21ರವರೆಗೆ ಒಡಂಬಡಿಕೆ ಮಾಡಿಕೊಂಡಿತ್ತು. ಸದರಿ ಒಡಂಬಡಿಕೆ 2020-21ನೇ ಸಾಲಿನಲ್ಲಿ ಮುಕ್ತಾಯವಾಗಲಿದ್ದು, ಪುನಃ ಒಡಂಬಡಿಕೆ ನವೀಕರಣಕ್ಕೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕೈ-ಮಗ್ಗ ಅಭಿವೃದ್ಧಿ ನಿಗಮ ಮತ್ತು ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮಗಳ ಮೂಲಕ ನೇಕಾರರಿಗೆ 113 ಕೋಟಿ ರು.ಗಳ ಪ್ಯಾಕೇಜ್‌ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 84.90 ಕೋಟಿ ರು. ಸಹಾಯ ಧನ ನೀಡಲಾಗಿದೆ ಎಂದರು. ಮಧ್ಯ ಪ್ರವೇಶಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ಅಂಗನವಾಡಿ ಕಾರ್ಯಕರ್ತೆಯರಿಗೆ 2.50 ಲಕ್ಷ ಸೀರೆ ನೀಡಲು ಜವಳಿ ಇಲಾಖೆಯಿಂದಲೇ ಖರೀದಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.