ವಸತಿ ಶಾಲೆಗಳಲ್ಲಿ ಪಿಯುಸಿ ಆರಂಭ: ಸಿಎಂ ಬೊಮ್ಮಾಯಿ
ಪರಿಶಿಷ್ಟವರ್ಗ, ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಪೋಷಕರು ಸರ್ಕಾರವನ್ನು ನಂಬಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿರುತ್ತಾರೆ. ಕೇವಲ ಕಟ್ಟಡ ಕಟ್ಟಿದರೆ ಸಾಲದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು: ಸಿಎಂ ಬೊಮ್ಮಾಯಿ
ಬೆಂಗಳೂರು(ಜ.28): ವಸತಿ ಶಿಕ್ಷಣ ಸಂಸ್ಥೆಗಳು ಗುತ್ತಿಗೆ ಆಧಾರಿತ ಕೆಲಸಗಳಿಗೆ ಸೀಮಿತವಾಗದೆ ಮಕ್ಕಳಿಗೆ ಮೂಲ ಸೌಕರ್ಯಗಳನ್ನು ನೀಡಲು ಆದ್ಯತೆ ನೀಡಬೇಕು. ಅರ್ಹ ವಸತಿ ಶಾಲೆಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಪದವಿ ಪೂರ್ವ (ಪಿಯು) ಶಿಕ್ಷಣ ಪ್ರಾರಂಭಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿರುವ ಎರಡು ದಿನಗಳ ವಿಜ್ಞಾನ ಮೇಳ-2023ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಶಿಷ್ಟವರ್ಗ, ಹಿಂದುಳಿದ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಪೋಷಕರು ಸರ್ಕಾರವನ್ನು ನಂಬಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿರುತ್ತಾರೆ. ಕೇವಲ ಕಟ್ಟಡ ಕಟ್ಟಿದರೆ ಸಾಲದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಕಟ್ಟಡ, ಗೋಡೆ, ಕಾಂಪೌಂಡ್ ಕಟ್ಟಿಸುವ ಗುತ್ತಿಗೆ ಆಧಾರಿತ ಕೆಲಸದಿಂದ ಪ್ರಯೋಜನವಿಲ್ಲ. ಮಕ್ಕಳಿಗೆ ಡೆಸ್ಕ್, ಮಲಗುವ ಸ್ಥಳ, ಪುಸ್ತಕ ಸೇರಿದಂತೆ ಮೂಲಸೌಕರ್ಯಕ್ಕೆ ಹೆಚ್ಚಿನ ಗಮನ ನೀಡಬೇಕು’ ಎಂದು ತಿಳಿಸಿದರು.
ಬಿಎಡ್ ಕನಸಿಗೆ ಕೊಳ್ಳಿಯಿಟ್ಟ ಗುಲ್ಬರ್ಗ ವಿಶ್ವವಿದ್ಯಾಲಯ..!
ಪಿಯು ಶಾಲೆ ಆರಂಭಿಸಿ:
ಹತ್ತು ವರ್ಷಗಳಾಗಿರುವ ಹಾಗೂ ಎಲ್ಲಾ ವ್ಯವಸ್ಥೆಗಳಿರುವ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಕಡ್ಡಾಯವಾಗಿ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಸೂಚಿಸಿದರು. ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವ, ಪ್ರತಿಭೆ ಪ್ರದರ್ಶಿಸಲು ವಿಜ್ಞಾನ ಮೇಳ ಅನುಕೂಲವಾಗಿದೆ. ವಿಜ್ಞಾನ ಕಲಿಯುವುದೇ ಕಷ್ಟಎನ್ನುವ ಕಾಲವಿತ್ತು. ಕೇವಲ ಅಕ್ಷರ ಜ್ಞಾನ ಪಡೆದರೆ ಸಾಕೆನ್ನುವ ಕಾಲವಿತ್ತು. ಈಗ ಬದಲಾವಣೆ ಆಗಿದೆ. ಮಕ್ಕಳು ವಿಜ್ಞಾನ, ಗಣಿತ ಎಲ್ಲಾ ರಂಗಗಳಲ್ಲಿ ಮುಂದೆ ಬರಬೇಕು. ಇತರೆ ಊರುಗಳಲ್ಲಿಯೂ ಈ ರೀತಿಯ ವಿಜ್ಞಾನ ಮೇಳ ಏರ್ಪಡಿಸಬೇಕು ಎಂದು ಸಲಹೆ ನೀಡಿದರು.
ವಸತಿ ಶಾಲೆ ಮಕ್ಕಳು ಐಐಟಿ ಪ್ರವೇಶ:
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈ ಹಿಂದೆ ನವೋದಯ ಶಾಲೆಗ ಸೇರಿದರೆ ಮಾತ್ರ ಜೀವನ ಸಾರ್ಥಕ ಎಂಬ ಭಾವನೆಯಿತ್ತು. ಪ್ರಸ್ತುತ ನಮ್ಮ ಇಲಾಖೆಯ ಶಾಲೆಗಳು ನವೋದಯ ಶಾಲೆಗಳಿಗೆ ಸರಿಸಮಾನವಾಗಿ ಬೆಳೆದಿವೆ. ಖಾಸಗಿ ಶಾಲೆಗಳಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲದ ವ್ಯವಸ್ಥೆ ರೂಪಿಸಿದ್ದೇವೆ. ನಮ್ಮಲ್ಲಿ ಓದಿದ ವಿದ್ಯಾರ್ಥಿಗಳು ಐಐಟಿ, ಎಂಬಿಬಿಎಸ್ ಪ್ರವೇಶ ಪಡೆಯುತ್ತಿದ್ದಾರೆ. ನಾಲ್ಕು ಲಕ್ಷ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ ಎಂದು ಹೇಳಿದರು. ಸಚಿವ ಗೋವಿಂದ ಕಾರಜೋಳ, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಮೊದಲಾದವರು ಉಪಸ್ಥಿತರಿದ್ದರು.
Chikkodi: 25 ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಬೋರ್ಡ್ ಕೊಟ್ಟ ಖಾಸಗಿ ಶಾಲೆ ಮಾಲೀಕ: ಮಾದರಿ ಕಾರ್ಯ
ಕೋಟ ಕಾರ್ಯಕ್ಕೆ ಶ್ಲಾಘನೆ
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಲಾಖೆಯಲ್ಲಿ ಹಲವು ವಿನೂತನ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮೂರು ಲಕ್ಷ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿರುವುದು ದೊಡ್ಡ ಸಾಧನೆ. ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಬಹಳ ದೊಡ್ಡ ಕಾರ್ಯಕ್ರಮವನ್ನು ಸಚಿವರು ಕೈಗೊಂಡಿದ್ದಾರೆ. ಪರಿಶಿಷ್ಟಜನಾಂಗಕ್ಕೆ ಸೌಲಭ್ಯಗಳನ್ನು ನೀಡಲು ಒತ್ತಾಸೆಯಾಗಿ ಕೆಲಸ ಮಾಡಿದ್ದಾರೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರನ್ನೂ ದೊಡ್ಡ ಪ್ರಮಾಣದಲ್ಲಿ ಇಲಾಖೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಶ್ಲಾಘಿಸಿದರು.
ವಿಜ್ಞಾನ ಮೇಳದಲ್ಲಿ ಏನಿದೆ?
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಹಾಗೂ ಆಸಕ್ತಿ ಮೂಡಿಸಲು ಆಯೋಜಿಸಿರುವ ಮೇಳದಲ್ಲಿ ಜಿಲ್ಲೆಗಳಿಂದ ಆಯ್ಕೆಯಾಗಿರುವ 200 ಶಾಲೆಗಳು ಭಾಗವಹಿಸಿವೆ. ಭಾರತೀಯ ಸೇನೆಯೂ ವಿಜ್ಞಾನ ಮೇಳದಲ್ಲಿ ಭಾಗವಹಿಸಿದೆ. ಸೇನೆ ಉಪಯೋಗಿಸುವ ಶಸ್ತ್ರಾಸ್ತ್ರಗಳು, ಉಡುಪುಗಳ ಪ್ರದರ್ಶನ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ. ಇಸ್ರೋ, ಐಐಎಸ್‌ಸಿ, ಅಗಸ್ತ್ಯ ಫೌಂಡೇಶನ್, ನೆಹರೂ ಪ್ಲಾನೆಟೋರಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂನಿಂದಲೂ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ, ರಾಕೆಟ್‌ಗಳ ಮಾದರಿ, ವಿಮಾನ ಹಾಗೂ ಹೆಲಿಕಾಪ್ಟರ್ ಮಾದರಿ ಪ್ರದರ್ಶಿಸಲಾಗಿದೆ. ಶನಿವಾರವೂ ಮೇಳ ನಡೆಯಲಿದ್ದು, ಉಚಿತ ಪ್ರವೇಶವಿದೆ.