ವಿದ್ಯಾರ್ಥಿಗಳು ಬಂದರೂ ಕಲಿಸಲು ಉಪನ್ಯಾಸಕರಿಲ್ಲ..!

ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿರುವ ಬಹುತೇಕ ಪದವಿ ಕಾಲೇಜುಗಳು| ಉಪನ್ಯಾಸಕರ ಕೊರತೆಯಿಂದ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ಕೂಡ ನಡೆದಿಲ್ಲ| ಕಾಯಂ ಹುದ್ದೆಗಳಿಲ್ಲದೇ ಬಹುತೇಕ ಕಾಲೇಜುಗಳಲ್ಲಿ ಸಮಸ್ಯೆ| 

No Permanent Lecturers in Government Colleges in Haveri District grg

ನಾರಾಯಣ ಹೆಗಡೆ

ಹಾವೇರಿ(ನ.19): ಕೊರೋನಾದಿಂದ ಮಾರ್ಚ್‌ನಲ್ಲಿ ಬಂದ್‌ ಆಗಿದ್ದ ಪದವಿ ಕಾಲೇಜುಗಳು ಪುನಾರಂಭವೇನೋ ಆಗಿವೆ. ಆದರೆ, ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದ್ದ ಬಹುತೇಕ ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಂದರೂ ತರಗತಿ ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೋನಾ ಕಾರಣದಿಂದ ಮಾರ್ಚ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು. ಬರೋಬ್ಬರಿ 8 ತಿಂಗಳ ಬಳಿಕ ಅಂತಿಮ ವರ್ಷದ ಪದವಿ, ಎಂಜಿನಿಯರಿಂಗ್‌, ಡಿಪ್ಲೊಮಾ ಕಾಲೇಜುಗಳು ಎರಡು ದಿನಗಳ ಹಿಂದಷ್ಟೇ ಪುನಾರಂಭಗೊಂಡಿವೆ. ವಿದ್ಯಾರ್ಥಿಗಳು ಕೋವಿಡ್‌ ರಿಪೋರ್ಟ್‌ ಹಿಡಿದುಕೊಂಡು ಕಾಲೇಜಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ನಾಲ್ಕಾರು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸಲು ಸಾಧ್ಯವಾಗಲಿದೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರು ಹೆಚ್ಚಿಲ್ಲ. ಅದಕ್ಕಾಗಿ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತಿತ್ತು. ಅವರಿಂದಲೇ ಅನೇಕ ಸರ್ಕಾರಿ ಪದವಿ ಕಾಲೇಜುಗಳು ನಡೆಯುತ್ತಿದ್ದವು. ಈಗ ಪದವಿ ಕಾಲೇಜು ಪುನಾರಂಭಗೊಂಡರೂ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸದಿರುವುದು ಸಮಸ್ಯೆಯಾಗಿದೆ.

14 ಸಾವಿರ ಅತಿಥಿ ಉಪನ್ಯಾಸಕರು

ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಸುಮಾರು 6 ಸಾವಿರ ಕಾಯಂ ಸಹಾಯಕ ಪ್ರಾಧ್ಯಾಪಕರಿದ್ದಾರೆ (ಉಪನ್ಯಾಸಕರು). ಈ ಕಾಲೇಜುಗಳಲ್ಲಿ 14,447 ಅತಿಥಿ ಉಪನ್ಯಾಸಕರು ಹಿಂದಿನ ವರ್ಷ ಕಾರ್ಯನಿರ್ವಹಿಸಿದ್ದರು. ಮಾರ್ಚ್‌ನಲ್ಲಿ ಕಾಲೇಜು ಬಂದ್‌ ಆಗಿದ್ದರಿಂದ ಅವರ ಸೇವೆ ಅಲ್ಲಿಗೆ ಮುಕ್ತಾಯಗೊಂಡಿತ್ತು. ಈಗ ಪದವಿ ಅಂತಿಮ ವರ್ಷದ ತರಗತಿ ಆರಂಭಿಸಲಾಗುತ್ತಿದ್ದರೂ ಅತಿಥಿ ಉಪನ್ಯಾಸಕರನ್ನು ಸರ್ಕಾರ ನೇಮಿಸಿಲ್ಲ. ಇದರಿಂದ ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಈಗ ವಿದ್ಯಾರ್ಥಿಗಳು ಬಂದರೂ ತರಗತಿ ಆರಂಭಿಸುವುದೇ ದೊಡ್ಡ ಸಮಸ್ಯೆಯಾಗಿದೆ.

ಕಾಲೇಜುಗಳು ತೆರೆದರೂ ವಿದ್ಯಾರ್ಥಿಗಳು ಬರುತ್ತಿಲ್ಲ

ಆನ್‌ಲೈನ್‌ ಪಾಠವೂ ಇಲ್ಲ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡಿಪ್ಲೊಮಾ, ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಆಗಸ್ಟ್‌ ತಿಂಗಳಿಂದಲೇ ಆನ್‌ಲೈನ್‌ ಬೋಧನೆ ಶುರುವಾಗಿದೆ. ಆದರೆ, ಕಾಯಂ ಹಾಗೂ ಆ ಸಂಬಂಧಪಟ್ಟವಿಷಯದ ಉಪನ್ಯಾಸಕರಷ್ಟೇ ಆನ್‌ಲೈನ್‌ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಕಾಯಂ ಉಪನ್ಯಾಸಕರಿಲ್ಲದ ವಿಷಯಗಳ ಆನ್‌ಲೈನ್‌ ತರಗತಿಯನ್ನೇ ನಡೆಸಲಾಗಿಲ್ಲ. ಈಗ ಕಾಲೇಜಿನಲ್ಲೇ ನೇರವಾಗಿ ತರಗತಿ ನಡೆಸಲು ಅವಕಾಶ ನೀಡಿದರೂ ಅತಿಥಿ ಉಪನ್ಯಾಸಕರಿಲ್ಲದೇ ತರಗತಿ ನಡೆಸುವುದು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ

ಹಾವೇರಿಯ ಮಹಿಳಾ ಪದವಿ ಕಾಲೇಜಿನಲ್ಲಿ ಬಿಎ ಮತ್ತು ಬಿಕಾಂ ವಿಭಾಗಗಳಿದ್ದು, ಬಿಕಾಂ ವಿಭಾಗದಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರಿಲ್ಲ. ಮಂಗಳವಾರದಿಂದ ಅಂತಿಮ ವರ್ಷದ ಪದವಿ ತರಗತಿಗೆ ಅವಕಾಶ ನೀಡಲಾಗಿದ್ದರೂ ಕಾಲೇಜಿನಲ್ಲಿ ಬಿಕಾಂ ತರಗತಿ ನಡೆಸಲು ಅತಿಥಿ ಉಪನ್ಯಾಸಕರನ್ನೇ ನೆಚ್ಚಿಕೊಳ್ಳಲಾಗಿದೆ. ಇದೇ ರೀತಿ ರಾಜ್ಯದ ಹಲವು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಯಂ ಇಲ್ಲದ ವಿಷಯದ ಆನ್‌ಲೈನ್‌ ಬೋಧನೆಯೂ ಇಲ್ಲದ್ದರಿಂದ ಪದವಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಇಲ್ಲಿಯ ಗಾಂಧಿಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ 2673 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಕೇವಲ 16 ಕಾಯಂ ಉಪನ್ಯಾಸಕರಿದ್ದು, 97 ಅತಿಥಿ ಉಪನ್ಯಾಸಕರ ಅಗತ್ಯವಿದೆ. ಇಲ್ಲಿಯ ಮಹಿಳಾ ಕಾಲೇಜಿನಲ್ಲಿ ಕೇವಲ ನಾಲ್ವರು ಕಾಯಂ ಉಪನ್ಯಾಸಕರಿದ್ದು, ಇನ್ನೂ 25 ಅತಿಥಿ ಉಪನ್ಯಾಸಕರ ಸೇವೆ ಅಗತ್ಯವಿದೆ. ಸರ್ಕಾರ ಕಾಲೇಜು ಆರಂಭಿಸುವ ಮುನ್ನವೇ ಹಿಂದಿನ ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರಿಸಬೇಕಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಬಹುತೇಕ ಬಡ ವಿದ್ಯಾರ್ಥಿಗಳೇ ಓದುತ್ತಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇರುವುದರಿಂದ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಕಳೆದ ಸಾಲಿನಲ್ಲಿ ನೇಮಿಸಿತ್ತು. ಈಗ ಕಾಲೇಜು ಪುನಾರಂಭಗೊಂಡಿದ್ದು, ತಕ್ಷಣ ಹಿಂದಿನ ವರ್ಷದ ಅತಿಥಿ ಉಪನ್ಯಾಸಕರನ್ನೇ ಈ ಸಲವೂ ಮುಂದುವರಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ರಾಜ್ಯ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಸಿ.ಕೆ. ಪಾಟೀಲ ತಿಳಿಸಿದ್ದಾರೆ.

ನಮ್ಮ ಕಾಲೇಜಿನಲ್ಲಿ ಬಿಎ ವಿಭಾಗಕ್ಕೆ 4 ಕಾಯಂ ಉಪನ್ಯಾಸಕರಿದ್ದಾರೆ. ಬಿಕಾಂ ವಿಭಾಗಕ್ಕೆ ಒಬ್ಬರೂ ಕಾಯಂ ಇಲ್ಲ. ಆದ್ದರಿಂದ ಈಗ ತರಗತಿ ನಡೆಸುವುದು ಸಮಸ್ಯೆಯಾಗಲಿದೆ. ಸರ್ಕಾರ ಒಂದೆರಡು ದಿನಗಳಲ್ಲೇ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ ಹೊರಡಿಸಿ ಸಮಸ್ಯೆ ನೀಗಿಸುವ ವಿಶ್ವಾಸವಿದೆ ಎಂದು ಹಾವೇರಿಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಬಿಬಿ ಫಾತಿಮಾ ಅವರು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios