ಬೆಳಗಾವಿ (ಸೆ. 05): ಇದೊಂದು ಪುಟ್ಟಹಳ್ಳಿ. ಇಲ್ಲಿ ಮನೆ ಮನೆಯಲ್ಲೂ ಶಿಕ್ಷಕರಿದ್ದಾರೆ. ಇದು ಶಿಕ್ಷಕರ ಗ್ರಾಮವೆಂದೇ ಖ್ಯಾತಿ ಪಡೆದಿದೆ.

ಹೌದು, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮವೇ ಆ ಶಿಕ್ಷಕರ ತವರೂರು. ಈ ಗ್ರಾಮಕ್ಕೆ ಭೇಟಿ ನೀಡಿದರೆ ಸಾಕು, ಗ್ರಾಮದ ಪ್ರತಿಯೊಂದು ಮನೆಯಲ್ಲಿ ಶಿಕ್ಷಕರು ಇರುವುದು ಕಂಡುಬರುತ್ತದೆ. ಈ ಹಿಂದೆ ಕುಗ್ರಾಮವಾಗಿದ್ದ ಈ ಗ್ರಾಮ ಇದೀಗ ರಾಜ್ಯದಲ್ಲೇ ಶಿಕ್ಷಣದಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ಅತೀ ಹೆಚ್ಚಿನ ಸಮಾಜ ಶಿಲ್ಪಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಮನೆಗೊಬ್ಬ ಶಿಕ್ಷಕರು ಇಲ್ಲಿದ್ದಾರೆ.

ಗ್ರಾಮದ ಯಾವ ಮೂಲೆಯಲ್ಲಿ ನಿಂತು ಕಲ್ಲು ಎಸೆದರೂ ಅದು ಶಿಕ್ಷಕರ ಮನೆಯ ಮೇಲೆಯೇ ಬೀಳುತ್ತದೆ. ಅಷ್ಟೊಂದು ಸಂಖ್ಯೆಯಲ್ಲಿ ಇಲ್ಲಿ ಶಿಕ್ಷಕರಿದ್ದಾರೆ. ಈ ಗ್ರಾಮದ ಇತಿಹಾಸದ ಪುಟ ತಿರುವಿ ಹಾಕಿದರೆ, 40 ವರ್ಷಗಳ ಹಿಂದೆ ಈ ಗ್ರಾಮ ಕುಗ್ರಾಮವಾಗಿತ್ತು. ಕೊಲೆ, ಸುಲಿಗೆ ಅಕ್ರಮ ಚಟವಟಿಕೆಗಳೇ ಹೆಚ್ಚಾಗಿತ್ತು.

ನೆಚ್ಚಿನ ಗುರುವಿಗೆ ಅಚ್ಚುಮೆಚ್ಚಾಗುವಂಥಹ ಉಡುಗೊರೆ ನೀಡಿ

ಶಿಕ್ಷಣ ಕ್ಷೇತ್ರದಲ್ಲಿ ತೀರಾ ಹಿಂದುಳಿದಿತ್ತು. ಇದನ್ನು ಕಂಡ ಗ್ರಾಮದ ಇಂಚಲ ಮಠದ ಶಿವಾನಂದ ಭಾರತಿ ಸ್ವಾಮೀಜಿ ಅವರು 1975ರಲ್ಲಿ ಗ್ರಾಮದಲ್ಲಿ ಎಲ್ಲರೂ ವಿದ್ಯಾವಂತರಾದರೆ ನೆಮ್ಮದಿ ನೆಲಸಬಹುದು ಎಂಬ ಸದುದ್ದೇಶದಿಂದ ಗ್ರಾಮದಲ್ಲಿ ಮೂವರು ಶಿಕ್ಷಕರ ಜೊತೆಗೂಡಿ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದರು. 1975ರಲ್ಲಿ ಪ್ರೌಢಶಾಲೆ, 1982ರಲ್ಲಿ ಪಿಯು ಕಾಲೇಜು, 1985ರಲ್ಲಿ ಡಿಇಡಿ ಕಾಲೇಜು ಆರಂಭಿಸಿದರು.

ಪ್ರಾರಂಭದಲ್ಲಿ ಬೆರಳಣಿಕೆಯಷ್ಟುವಿದ್ಯಾರ್ಥಿಗಳಿದ್ದರು. ಇದೀಗ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕುಗ್ರಾಮವಾಗಿದ್ದ ಇಂಚಲ ಈಗ ಶಿಕ್ಷಕರ ತವರೂರು ಎಂಬ ಹೆಗ್ಗಳಿಕೆ ಹೊಂದಿದೆ. ಮನೆಗೊಬ್ಬರು ಶಿಕ್ಷಕರು ಹಾಗೂ ಅದರಂತೆಯೇ ಸೈನಿಕರು ಕೂಡ ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ.

900 ಶಿಕ್ಷಕರು:

ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಒಂದು ಸಾವಿರಕ್ಕೂ ಅಧಿಕ ಮನೆಗಳಿವೆ. ಈ ಗ್ರಾಮದಲ್ಲಿ ಸುಮಾರು 900 ಶಿಕ್ಷಕರಿದ್ದು, ಎಲ್ಲರೂ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದವರು ಇದ್ದಾರೆ. ಡಿಇಡಿ ಮತ್ತು ಬಿಇಡಿ ಕೋರ್ಸ್‌ ತೇರ್ಗಡೆಯಾಗಿರುವ ನೂರಾರು ವಿದ್ಯಾರ್ಥಿಗಳು ಶಿಕ್ಷಕರಾಗುವ ಆಕಾಂಕ್ಷೆಯಲ್ಲಿದ್ದಾರೆ. ಒಂದೇ ಕುಟುಂಬದಲ್ಲಿ ಮೂರ್ನಾಲ್ಕು ಶಿಕ್ಷಕರಿಂದ ಹಿಡಿದು 12 ಮಂದಿವರೆಗೂ ಶಿಕ್ಷಕರಿದ್ದಾರೆ. ಸತಾರ ಇಸ್ಮಾಯಿಲ್‌ ಸಾಬ್‌ ಎಂಬುವರ ಮನೆಯೊಂದರಲ್ಲೇ 12 ಜನ ಶಿಕ್ಷಕರು ಇದ್ದಾರೆ. ಎಲ್ಲರೂ ಸರ್ಕಾರಿ ಶಾಲೆಗಳ ಶಿಕ್ಷಕರೇ. ಈ ಗ್ರಾಮದಲ್ಲಿ ಎಲ್ಲರೂ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಸೇವೆ ಸಲ್ಲಿಸುತ್ತಿಲ್ಲ. 300ಕ್ಕೂ ಅಧಿಕ ಯುವಕರು ಭಾರತೀಯ ಸೇನೆಯಲ್ಲಿ ದೇಶಸೇವೆ ಮಾಡುತ್ತಿದ್ದಾರೆ. ಈಗಾಗಲೇ 70ಕ್ಕೂ ಅಧಿಕ ಯೋಧರು ನಿವೃತ್ತರಾಗಿ ಗ್ರಾಮಕ್ಕೆ ಮರಳಿದ್ದಾರೆ.

ಮಠಾಧೀಶರು ಮನಸ್ಸು ಮಾಡಿದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಬಹುದು ಎಂಬುದಕ್ಕೆ ಶಿವಾನಂದ ಭಾರತಿ ಸ್ವಾಮೀಜಿ ಸಾಕ್ಷಿಯಾಗಿದ್ದಾರೆ. ಕುಗ್ರಾಮವಾಗಿದ್ದ ಗ್ರಾಮ ಇದೀಗ ಶ್ರೀಗಳ ಪ್ರಯತ್ನದ ಫಲವಾಗಿ ಶಿಕ್ಷಣದ ತವರೂರಾಗಿ ಮಾರ್ಪಟ್ಟಿದೆ. ಕುಗ್ರಾಮ ಎಂಬ ಹಣೆಪಟ್ಟಿಯನ್ನು ಅಳಿಸಿಹಾಕಿದೆ. ಶಿಕ್ಷಣ ಇಲಾಖೆ ಜೊತೆಗೆ ಭಾರತೀಯ ಸೇನೆಯಲ್ಲೂ ಗ್ರಾಮದ ಯುವಕರು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಗ್ರಾಮ ಇಡೀ ದೇಶಕ್ಕೆ ಮಾದರಿಯಾಗಿದೆ ಎನ್ನುವ ಹೆಮ್ಮೆ ನಮ್ಮದಾಗಿದೆ.

-ಸತಾರ ಇಸ್ಮಾಯಿಲ್‌ಸಾಬ್‌, ಶಿಕ್ಷಕರು